ಕಾರವಾರ: ಉತ್ತರ ಕನ್ನಡ ಜಿಲ್ಲೆಯ ಕರಾವಳಿಯನ್ನು ಪ್ಲಾಸ್ಟಿಕ್ ಮುಕ್ತಗೊಳಿಸಿ, ಸಮುದ್ರ ಪರಿಸರ ಹಾಗೂ ಜಲಚರಗಳ ಸಂರಕ್ಷಣೆಗೆ ಒತ್ತು ನೀಡಿರುವ ಅರಣ್ಯ ಇಲಾಖೆಯ ಕೋಸ್ಟಲ್ ಅಂಡ್ ಮರೈನ್ ಇಕೋ ಸಿಸ್ಟಮ್ ವಿಭಾಗವು ಕೇವಲ 22 ದಿನಗಳ ಸ್ವಚ್ಛತಾ ಕಾರ್ಯಾಚರಣೆಯಲ್ಲಿ ಬರೋಬ್ಬರಿ 4,000 ಕೆ.ಜಿ. ಪ್ಲಾಸ್ಟಿಕ್ ತ್ಯಾಜ್ಯ ಸಂಗ್ರಹಿಸಿದೆ. ಕಾರವಾರದ ಮಾಜಾಳಿಯಿಂದ ಅಂಕೋಲದವರೆಗಿನ ಕಡಲತೀರಗಳಲ್ಲಿ ಕೈಗೊಂಡಿರುವ ಈ ನಿರಂತರ ಅಭಿಯಾನವು ಕರಾವಳಿ ಪರಿಸರ ಸಂರಕ್ಷಣೆಯ ಮಹತ್ವದ ಹೆಜ್ಜೆಯಾಗಿದೆ.
ಪ್ಲಾಸ್ಟಿಕ್ ತ್ಯಾಜ್ಯದಿಂದ ಸಮುದ್ರ ಪರಿಸರ ವ್ಯವಸ್ಥೆ ಮತ್ತು ಜಲಚರಗಳ ಬದುಕಿಗೆ ಉಂಟಾಗುತ್ತಿರುವ ಅಪಾಯವನ್ನು ತಗ್ಗಿಸುವ ಉದ್ದೇಶದಿಂದ 2026ರ ಆಗಸ್ಟ್ನಲ್ಲಿ ಆರಂಭಗೊಂಡ ಈ ಅಭಿಯಾನವು ಮೂರು ತಿಂಗಳ ಕಾರ್ಯಯೋಜನೆಯ ಭಾಗವಾಗಿದೆ. ಇದರಡಿ ವಿವಿಧ ಕಡಲತೀರಗಳಲ್ಲಿ ನಿಯಮಿತವಾಗಿ ಸ್ವಚ್ಛತಾ ಕಾರ್ಯ ಕೈಗೊಳ್ಳಲಾಗುತ್ತಿದ್ದು, ಸಂಗ್ರಹಿಸಿದ ತ್ಯಾಜ್ಯವನ್ನು ಸೂಕ್ತವಾಗಿ ವಿಂಗಡಿಸಿ, ಸಮರ್ಪಕ ವಿಲೇವಾರಿಗಾಗಿ ಸಂಬಂಧಪಟ್ಟ ನಗರ ಸ್ಥಳೀಯ ಸಂಸ್ಥೆಗಳಿಗೆ ಹಸ್ತಾಂತರಿಸಲಾಗುತ್ತಿದೆ. ತ್ಯಾಜ್ಯ ಹಸ್ತಾಂತರದ ಬಗ್ಗೆ ಸ್ವೀಕೃತಿಯನ್ನೂ ಪಡೆಯುವ ಮೂಲಕ ವಿಲೇವಾರಿ ಪ್ರಕ್ರಿಯೆಗೆ ವ್ಯವಸ್ಥಿತ ಕ್ರಮ ಅನುಸರಿಸಲಾಗುತ್ತಿದೆ.
ಅರಣ್ಯ ಇಲಾಖೆಯ ಅಧಿಕಾರಿಗಳು ಮತ್ತು ಸಿಬ್ಬಂದಿ ಪ್ರತಿವಾರ ಒಂದೊಂದು ಕಡಲತೀರದಲ್ಲಿ ಸ್ವಚ್ಛತಾ ಕಾರ್ಯಾಚರಣೆ ನಡೆಸುತ್ತಿದ್ದಾರೆ. ಇದರೊಂದಿಗೆ ವಿವಿಧ ಸಂಘ-ಸಂಸ್ಥೆಗಳು ಆಯೋಜಿಸುವ ಬೀಚ್ ಸ್ವಚ್ಛತಾ ಕಾರ್ಯಕ್ರಮಗಳಲ್ಲೂ ಭಾಗವಹಿಸಿ ಪರಿಸರ ಸಂರಕ್ಷಣೆಗೆ ಕೈಜೋಡಿಸುತ್ತಿದ್ದಾರೆ. ಇಲಾಖೆಯ ತಂಡವು ನಿರಂತರವಾಗಿ ಕಾರ್ಯನಿರ್ವಹಿಸುತ್ತಿರುವುದು ಕರಾವಳಿಯ ಸ್ವಚ್ಛತೆ ಕಾಪಾಡುವ ಪ್ರಯತ್ನಕ್ಕೆ ಬಲ ನೀಡಿದೆ.
ಕಡಲತೀರಗಳಲ್ಲಿ ರಾಶಿಯಾಗುವ ಪ್ಲಾಸ್ಟಿಕ್ ಬಾಟಲಿಗಳು, ಚೀಲಗಳು, ಆಹಾರ ಪೊಟ್ಟಣಗಳು ಹಾಗೂ ಇತರ ತ್ಯಾಜ್ಯಗಳು ಅಲೆಗಳ ಮೂಲಕ ಸಮುದ್ರ ಸೇರುತ್ತಿವೆ. ಇವು ಮೀನು, ಆಮೆ ಸೇರಿದಂತೆ ಹಲವು ಜಲಚರಗಳ ಜೀವಕ್ಕೆ ಅಪಾಯ ತಂದೊಡ್ಡುವುದಲ್ಲದೆ, ಪ್ಲಾಸ್ಟಿಕ್ ಸಣ್ಣ ಕಣಗಳಾಗಿ ವಿಭಜನೆಯಾದಾಗ ಆಹಾರ ಸರಪಳಿಗೂ ಸೇರಬಹುದಾದ ಆತಂಕವಿದೆ. ಹೀಗಾಗಿ ಕಡಲತೀರಗಳಿಂದ ಪ್ಲಾಸ್ಟಿಕ್ ತ್ಯಾಜ್ಯವನ್ನು ತೆರವುಗೊಳಿಸುವುದು ಕೇವಲ ಸ್ವಚ್ಛತಾ ಕಾರ್ಯವಲ್ಲ; ಸಮುದ್ರದ ಜೀವವೈವಿಧ್ಯ ಮತ್ತು ಪರಿಸರ ಸಮತೋಲನ ಕಾಪಾಡುವ ಪ್ರಯತ್ನವೂ ಆಗಿದೆ.
ಕಾರವಾರ ಉಪ ಅರಣ್ಯ ಸಂರಕ್ಷಣಾಧಿಕಾರಿಗಳ ನೇತೃತ್ವದಲ್ಲಿ ಹಾಗೂ ಕಾರವಾರ ಮತ್ತು ಅಂಕೋಲ ಉಪವಿಭಾಗಗಳ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿಗಳ ಮಾರ್ಗದರ್ಶನದಲ್ಲಿ ಈ ಅಭಿಯಾನ ನಡೆಯುತ್ತಿದೆ. ವಲಯ ಅರಣ್ಯಾಧಿಕಾರಿಗಳು, ಉಪವಲಯ ಅರಣ್ಯಾಧಿಕಾರಿಗಳು, ಗಸ್ತು ಅರಣ್ಯ ಪಾಲಕರು ಮತ್ತು ಅರಣ್ಯ ವೀಕ್ಷಕರು ಕಾರ್ಯಾಚರಣೆಯಲ್ಲಿ ತೊಡಗಿಸಿಕೊಂಡಿದ್ದಾರೆ.
ಆದರೆ, ಪ್ಲಾಸ್ಟಿಕ್ ಮಾಲಿನ್ಯ ನಿಯಂತ್ರಣಕ್ಕೆ ತ್ಯಾಜ್ಯ ಸಂಗ್ರಹಿಸುವುದಷ್ಟೇ ಸಾಕಾಗುವುದಿಲ್ಲ. ಪ್ಲಾಸ್ಟಿಕ್ ಬಳಕೆಯನ್ನು ಕಡಿಮೆ ಮಾಡುವುದು, ತ್ಯಾಜ್ಯವನ್ನು ಎಲ್ಲೆಂದರಲ್ಲಿ ಎಸೆಯದಿರುವುದು ಹಾಗೂ ಮರುಬಳಕೆಗೆ ಆದ್ಯತೆ ನೀಡುವುದು ಅಗತ್ಯವಾಗಿದೆ. ಕಡಲತೀರಗಳಿಗೆ ಭೇಟಿ ನೀಡುವ ಪ್ರವಾಸಿಗರು, ಮೀನುಗಾರರು, ಸ್ಥಳೀಯ ನಿವಾಸಿಗಳು ಮತ್ತು ವ್ಯಾಪಾರಿಗಳು ಪರಿಸರ ಸ್ನೇಹಿ ಅಭ್ಯಾಸಗಳನ್ನು ಅಳವಡಿಸಿಕೊಂಡಾಗ ಮಾತ್ರ ಪ್ಲಾಸ್ಟಿಕ್ ಮುಕ್ತ ಕರಾವಳಿಯ ಗುರಿ ಸಾಕಾರಗೊಳ್ಳಲು ಸಾಧ್ಯ.
“ಬೀಚ್ಗಳಿಗೆ ಬರುವ ಪ್ರವಾಸಿಗರು ಅಲ್ಲಿನ ಸೌಂದರ್ಯವನ್ನು ಆಸ್ವಾದಿಸುವುದರ ಜೊತೆಗೆ ತಮ್ಮೊಂದಿಗೆ ತರುವ ಪ್ಲಾಸ್ಟಿಕ್ ಹಾಗೂ ಆಹಾರ ಪದಾರ್ಥಗಳ ತ್ಯಾಜ್ಯವನ್ನು ಸೂಕ್ತ ರೀತಿಯಲ್ಲಿ ವಿಲೇವಾರಿ ಮಾಡಬೇಕು. ಇಂತಹ ಸಣ್ಣ ಪರಿಸರ ಕಾಳಜಿಯೇ ಮುಂದಿನ ಪೀಳಿಗೆಗೆ ಸ್ವಚ್ಛ ಹಾಗೂ ಸುಂದರ ಪ್ರಕೃತಿಯನ್ನು ಉಳಿಸಿಕೊಡುವ ದೊಡ್ಡ ಕೊಡುಗೆಯಾಗಲಿದೆ” ಎಂದು ಕೋಸ್ಟಲ್ ಅಂಡ್ ಮರೈನ್ ಇಕೋ ಸಿಸ್ಟಮ್ ಸೆಲ್ನ ಕಾರವಾರ ವಲಯ ಅರಣ್ಯಾಧಿಕಾರಿ ಗಜಾನನ ಎಸ್. ನಾಯ್ಕ ತಿಳಿಸಿದ್ದಾರೆ.
