ಹಳಿಯಾಳ: ಬೀದಿ ನಾಯಿಗಳನ್ನು ಹಿಂಸಾತ್ಮಕವಾಗಿ ಹಿಡಿದು ಥಳಿಸಿ, ಬಳಿಕ ಆರು ನಾಯಿಗಳನ್ನು ಸರಕು ಸಾಗಣೆ ವಾಹನದಲ್ಲಿ ತುಂಬಿಕೊಂಡು ಕಾಡಿನತ್ತ ಕರೆದೊಯ್ದು ಬಿಟ್ಟಿದ್ದಾರೆ ಎಂಬ ಆರೋಪ ಹಳಿಯಾಳದಲ್ಲಿ ಕೇಳಿಬಂದಿದ್ದು, ಈ ಸಂಬಂಧ ಸಕ್ಕರೆ ಕಾರ್ಖಾನೆಯ ಅಧಿಕಾರಿಗಳ ವಿರುದ್ಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಹಳಿಯಾಳ ತಾಲೂಕಿನ ಮೇಧಾರ ಗಲ್ಲಿ, ಬಸ್ ನಿಲ್ದಾಣ ರಸ್ತೆ ನಿವಾಸಿ ಹಾಗೂ ವರದಿಗಾರ ಯೋಗರಾಜ ಶಿವಾಜಿ ಕರಾಂಡೆ ಅವರು ಈ ಕುರಿತು ಹಳಿಯಾಳ ಪೊಲೀಸ್ ಠಾಣೆಗೆ ದೂರು ಸಲ್ಲಿಸಿದ್ದಾರೆ. ದೂರಿನ ಪ್ರಕಾರ, EID ಪ್ಯಾರಿ ಇಂಡಿಯಾ ಲಿಮಿಟೆಡ್ ಸಕ್ಕರೆ ಕಾರ್ಖಾನೆಯ ಅಧಿಕಾರಿಗಳು ಸೆ.19 ಮತ್ತು 20ರಂದು ಮಧ್ಯರಾತ್ರಿ 12.30ರ ಸುಮಾರಿಗೆ ಸುಮಾರು 20ರಿಂದ 30 ಮಂದಿಯ ತಂಡದೊಂದಿಗೆ ಕಾರ್ಖಾನೆ ಆವರಣದಲ್ಲಿದ್ದ ಬೀದಿ ನಾಯಿಗಳನ್ನು ಹಿಡಿಯುವ ಕಾರ್ಯ ನಡೆಸಿದ್ದಾರೆ. ಈ ವೇಳೆ ನಾಯಿಗಳನ್ನು ಹಿಂಸಾತ್ಮಕವಾಗಿ ಹಿಡಿದು ಥಳಿಸಲಾಗಿದೆ ಎಂದು ಆರೋಪಿಸಲಾಗಿದೆ.
ನಂತರ ಆರು ನಾಯಿಗಳನ್ನು ಮಹೀಂದ್ರಾ ಗೂಡ್ಸ್ ವಾಹನ (ಕೆಎ-65/1394)ದಲ್ಲಿ ತುಂಬಿಕೊಂಡು ಸಾಗಿಸಲಾಗುತ್ತಿತ್ತು. ಈ ಸಂದರ್ಭದಲ್ಲಿ ಅವುಗಳನ್ನು ಕಾಡಿನ ಪ್ರದೇಶದಲ್ಲಿ ಬಿಟ್ಟುಬಿಡುತ್ತಿರುವುದು ಕಂಡುಬಂದಿದೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಪ್ರಾಣಿಗಳ ಮೇಲೆ ಕ್ರೌರ್ಯ ಎಸಗಿರುವ ಆರೋಪಕ್ಕೆ ಸಂಬಂಧಿಸಿದಂತೆ Prevention of Cruelty to Animals Act, 1960ರಡಿ ಕ್ರಮ ಕೈಗೊಳ್ಳುವಂತೆ ಯೋಗರಾಜ ಕರಾಂಡೆ ಅವರು ಪೊಲೀಸರಿಗೆ ಮನವಿ ಮಾಡಿದ್ದಾರೆ. ದೂರಿನ ಆಧಾರದ ಮೇಲೆ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಆರೋಪಗಳ ಕುರಿತು ಮುಂದಿನ ಕ್ರಮಕ್ಕೆ ಮುಂದಾಗಿದ್ದಾರೆ.
