ಕಾರವಾರ:ದೇಶಭಕ್ತಿ ಮತ್ತು ರಾಷ್ಟ್ರಾಭಿಮಾನದ ಸಂದೇಶ ಸಾರುವ ಭಾರತೀಯ ಜನತಾ ಪಕ್ಷದ ‘ಹರ್ ಘರ್ ತಿರಂಗಾ’ ಅಭಿಯಾನಕ್ಕೆ ಕರ್ನಾಟಕದಲ್ಲಿ ವೇಗ ನೀಡಲು ರೂಪಾಲಿ ನಾಯ್ಕ ಅವರನ್ನು ಇತ್ತೀಚೆಗೆ ರಾಜ್ಯ ಸಂಚಾಲಕಿಯಾಗಿ ನೇಮಕ ಮಾಡಲಾಗಿದೆ.
ಪಕ್ಷದ ಸಂಘಟನೆಯಲ್ಲಿ ಸಕ್ರಿಯವಾಗಿ ತೊಡಗಿಕೊಂಡಿರುವ ರೂಪಾಲಿ ಎಸ್.ನಾಯ್ಕ ಅವರಿಗೆ ಈ ಮಹತ್ವದ ಜವಾಬ್ದಾರಿ ನೀಡಿದ್ದು, ಈ ಸಮಿತಿಯಲ್ಲಿ ಶಾಸಕರುಗಳಾದ ಹರೀಶ್ ಪೂಂಜಾ, ಬಸವರಾಜ್ ಹಾಗೂ ಲಿಂಗರಾಜ್ ಪಾಟೀಲ್ ಸಹ ಸಂಚಾಲಕರಾಗಿದ್ದಾರೆ.
ಸಂಚಾಲಕಿಯಾಗಿ ನೇಮಕಗೊಂಡ ತರುವಾಯ ಹರ್ ಘರ್ ತಿರಂಗಾ ಅಭಿಯಾನವನ್ನು ಯಶಸ್ವಿಗೊಳಿಸಲು ರೂಪಾಲಿ ಎಸ್.ನಾಯ್ಕ ಚುರುಕಿನಿಂದ ಕಾರ್ಯೋನ್ಮುಖರಾಗಿದ್ದಾರೆ. ಈಗಾಗಲೆ ಕೆಲವೆಡೆ ಸಭೆಗಳನ್ನೂ ನಡೆಸಿದ್ದಾರೆ.
ಮನೆಮನೆಗೂ ರಾಷ್ಟ್ರಧ್ವಜ ತಲುಪಿಸುವುದು, ಸಾರ್ವಜನಿಕರಲ್ಲಿ ರಾಷ್ಟ್ರಧ್ವಜದ ಮಹತ್ವದ ಕುರಿತು ಅರಿವು ಮೂಡಿಸುವುದು, ಯುವಜನರು ಮತ್ತು ಮಹಿಳೆಯರನ್ನು ಅಭಿಯಾನದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ತೊಡಗಿಸಿಕೊಳ್ಳುವುದು, ಸ್ವಾತಂತ್ರ್ಯ ಹೋರಾಟಗಾರರನ್ನು ಸ್ಮರಿಸುವುದು ಸೇರಿದಂತೆ ವಿವಿಧ ಚಟುವಟಿಕೆಗಳನ್ನು ಹರ್ ಘರ್ ತಿರಂಗಾ ಅಭಿಯಾನದಲ್ಲಿ ನಡೆಸಲಾಗುತ್ತದೆ. ‘ಹರ್ ಘರ್ ತಿರಂಗಾ’ ಕೇವಲ ಧ್ವಜಾರೋಹಣಕ್ಕೆ ಸೀಮಿತವಾಗದೆ ದೇಶದ ಸ್ವಾತಂತ್ರ್ಯ ಹೋರಾಟಗಾರರ ತ್ಯಾಗವನ್ನು ಸ್ಮರಿಸುವ ಹಾಗೂ ರಾಷ್ಟ್ರದ ಏಕತೆ, ಸಮಗ್ರತೆ ಮತ್ತು ದೇಶಭಕ್ತಿಯ ಸಂದೇಶವನ್ನು ಜನರಿಗೆ ತಲುಪಿಸುವ ಅಭಿಯಾನವಾಗಿದೆ.
ಬಿಜೆಪಿಯ ರಾಜ್ಯ ಉಪಾಧ್ಯಕ್ಷರು, ಕಾರವಾರ ಅಂಕೋಲಾ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕರೂ ಆದ ರೂಪಾಲಿ ಎಸ್.ನಾಯ್ಕ ಪಕ್ಷ ಸಂಘಟನೆಯಲ್ಲಿ ಚುರುಕಾಗಿ ತೊಡಗಿಕೊಂಡಿದ್ದು, ಈಗ ಈ ಅಭಿಯಾನದ ಯಶಸ್ಸಿಗೆ ಅವಿರತವಾಗಿ ಸೇವೆ ಸಲ್ಲಿಸುತ್ತಿದ್ದಾರೆ.
ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಕರೆಯ ಮೇರೆಗೆ 12 ವರ್ಷಗಳ ಹಿಂದೆ ಆರಂಭವಾದ ಹರ್ ಘರ್ ತಿರಂಗಾ ಅಭಿಯಾನ ಇಂದು ರಾಷ್ಟ್ರೀಯ ಅಭಿಯಾನವಾಗಿ ರೂಪಿತವಾಗಿದೆ. ವಿಕಸಿತ ಭಾರತ ನಿರ್ಮಿಸುವಲ್ಲಿ ಹಾಗೂ ಏಕ್ ಭಾರತ್ ಶ್ರೇಷ್ಠ ಭಾರತ್ ಎಂಬ ಕನಸು ನನಸಾಗಿಸುವಲ್ಲಿ ಈ ಅಭಿಯಾನ ಮಹತ್ವಪೂರ್ಣವಾಗಿದೆ. ರಾಜ್ಯದಲ್ಲಿ ಈ ಅಭಿಯಾನವನ್ನು ಯಶಸ್ವಿಗೊಳಿಸಲು ಶ್ರಮಿಸುತ್ತಿದ್ದೇವೆ ಎಂದು ರೂಪಾಲಿ ನಾಯ್ಕ ಪ್ರತಿಕ್ರಿಯೆ ನೀಡಿದ್ದಾರೆ.
ಹರ್ ಘರ್ ತಿರಂಗಾ ಅಭಿಯಾನಕ್ಕೆ ರಾಜ್ಯ ಸಂಚಾಲಕಿಯಾಗಿ ರೂಪಾಲಿ ನಾಯ್ಕ
