ಅಕ್ಟೋಬರ್ 26, 2026
ಸೋಮವಾರ

ನಮ್ಮನ್ನು ಅನುಸರಿಸಿ

State-National

ದಸರಾ ಹಬ್ಬಕ್ಕೆ ವಿಶೇಷ ಬಸ್‌ ಸಂಚಾರ!

Pakka News Web • 12 ಆಕ್ಟೋ 2026,

ಕಾರವಾರ: ದಸರಾ ಹಬ್ಬದ ಹಿನ್ನೆಲೆಯಲ್ಲಿ ಸ್ವಂತ ಊರುಗಳಿಗೆ ತೆರಳುವ ಪ್ರಯಾಣಿಕರ ಅನುಕೂಲಕ್ಕಾಗಿ ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ (NWKRTC) ವ್ಯಾಪ್ತಿಯ ವಿವಿಧ ವಿಭಾಗಗಳಿಂದ ಸುಮಾರು 400 ಹೆಚ್ಚುವರಿ ವಿಶೇಷ ಬಸ್‌ಗಳ ಸಂಚಾರಕ್ಕೆ ವ್ಯವಸ್ಥೆ ಮಾಡಲಾಗಿದೆ.

ಅ.20ರಂದು ಮಹಾನವಮಿ ಹಾಗೂ ಆಯುಧಪೂಜೆ, ಅ.21ರಂದು ದಸರಾ ಹಬ್ಬ ಆಚರಿಸಲಾಗುತ್ತಿದ್ದು, ಈ ಸಂದರ್ಭದಲ್ಲಿ ಬೆಂಗಳೂರು ಸೇರಿದಂತೆ ವಿವಿಧ ಸ್ಥಳಗಳಿಂದ ತಮ್ಮ ಊರುಗಳಿಗೆ ತೆರಳುವ ಪ್ರಯಾಣಿಕರ ಸಂಖ್ಯೆ ಹೆಚ್ಚಾಗುವ ನಿರೀಕ್ಷೆಯಿದೆ. ಇದನ್ನು ಗಮನದಲ್ಲಿಟ್ಟುಕೊಂಡು ಪ್ರಯಾಣಿಕರಿಗೆ ಸುಗಮ ಸಾರಿಗೆ ಸೌಲಭ್ಯ ಒದಗಿಸಲು ಸಂಸ್ಥೆ ಹೆಚ್ಚುವರಿ ಬಸ್‌ಗಳನ್ನು ಕಾರ್ಯಾಚರಣೆಗೊಳಿಸಲಿದೆ.

ಹುಬ್ಬಳ್ಳಿ, ಧಾರವಾಡ, ಗದಗ, ಬೆಳಗಾವಿ, ಉತ್ತರ ಕನ್ನಡ, ಹಾವೇರಿ, ಚಿಕ್ಕೋಡಿ ಹಾಗೂ ಬಾಗಲಕೋಟೆ ವಿಭಾಗಗಳಿಂದ ಈ ವಿಶೇಷ ಸಾರಿಗೆ ವ್ಯವಸ್ಥೆ ಕಲ್ಪಿಸಲಾಗಿದೆ. ಬೆಂಗಳೂರಿನ ಕೆಂಪೇಗೌಡ ಬಸ್ ನಿಲ್ದಾಣ, ವಿಜಯನಗರ, ಮಲ್ಲೇಶ್ವರಂ, ಶಾರದಾ ಕಾಲೋನಿ, ಯಶವಂತಪುರ ಹಾಗೂ ಬಸವೇಶ್ವರ ನಗರ ಬಸ್ ನಿಲ್ದಾಣಗಳಿಂದ ಸಂಸ್ಥೆಯ ವ್ಯಾಪ್ತಿಯ ವಿವಿಧ ಸ್ಥಳಗಳಿಗೆ ತೆರಳಲು ಅ.16ರಿಂದ ಅ.19ರವರೆಗೆ ಹೆಚ್ಚುವರಿ ಬಸ್‌ಗಳು ಸಂಚರಿಸಲಿವೆ.

ಹಬ್ಬದ ಸಂದರ್ಭದಲ್ಲಿ ಪ್ರಯಾಣಿಕರ ದಟ್ಟಣೆ ನಿಯಂತ್ರಿಸಿ, ಜನರು ತಮ್ಮ ಊರುಗಳಿಗೆ ಸುಲಭವಾಗಿ ತೆರಳಲು ಈ ವ್ಯವಸ್ಥೆ ಸಹಕಾರಿಯಾಗಲಿದೆ. ಸಾರ್ವಜನಿಕರು ಹೆಚ್ಚುವರಿ ಸಾರಿಗೆ ಸೌಲಭ್ಯದ ಸದುಪಯೋಗ ಪಡೆದುಕೊಳ್ಳಬೇಕು ಹಾಗೂ ಸುಖಕರ ಮತ್ತು ಸುರಕ್ಷಿತ ಪ್ರಯಾಣಕ್ಕಾಗಿ ಸಂಸ್ಥೆಯ ಬಸ್‌ಗಳಲ್ಲಿಯೇ ಪ್ರಯಾಣಿಸಬೇಕು ಎಂದು ಹುಬ್ಬಳ್ಳಿ ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಸಾರ್ವಜನಿಕ ಸಂಪರ್ಕಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


ಪ್ರಚಾರ W26
ಜಾಹೀರಾತು ಸ್ಥಳ ಲಭ್ಯವಿದೆ
300x250