ಜುಲೈ 26, 2026
ಭಾನುವಾರ

ನಮ್ಮನ್ನು ಅನುಸರಿಸಿ

Trending

ಹಣ ಹೂಡಿಕೆ ಹೆಸರಿನಲ್ಲಿ ವಂಚನೆಗೆ ಯತ್ನ; ಜಾಗೃತಿಯಲ್ಲಿ ಇರಬೇಕು ಜನತೆ

Pakka News Web • 7 ಜುಲೈ 2026,

ಕಾರವಾರ:ದೇಶದ ಹೆಮ್ಮೆಯ ಸೈನಿಕರ ಹೆಸರನ್ನು ದುರ್ಬಳಕೆ ಮಾಡಿಕೊಂಡು ಸಾರ್ವಜನಿಕರನ್ನು ವಂಚಿಸುತ್ತಿರುವ ಬೃಹತ್ ಸೈಬರ್ ಜಾಲಗಳು ಇತ್ತೀಚಿನ ದಿನಗಳಲ್ಲಿ ತಲ್ಲಣ ಮೂಡಿಸುತ್ತಿದೆ.

ವಿವಿಧ ವಾಟ್ಸಾಪ್ ಗ್ರೂಪ್‌, ವಿವಿಧ ಸಾಮಾಜಿಕ ಜಾಲತಾಣಗಳ ಮೂಲಕ ತಾವು ‘ಆರ್ಮಿ ಆಫೀಸರ್’ ಎಂದು ಸೋಗು ಹಾಕಿ, ನಕಲಿ ಹೂಡಿಕೆ (Investment) ಲಿಂಕ್‌ಗಳ ಮೂಲಕ ಜನರ  ಹಣವನ್ನು ಲೂಟಿ ಮಾಡುವ ಹೊಸ ತಂತ್ರವನ್ನು ವಂಚಕರು ಅಳವಡಿಸಿಕೊಂಡಿದ್ದಾರೆ. ದೇಶ ಕಾಯುವ ಯೋಧರ ಮೇಲೆ ಸಾರ್ವಜನಿಕರು ಇಟ್ಟಿರುವ ಅಪಾರ ಗೌರವ ಮತ್ತು ನಂಬಿಕೆಯನ್ನೇ ಬಂಡವಾಳ ಮಾಡಿಕೊಳ್ಳುತ್ತಿರುವ ಈ ಖದೀಮರು, ಸಾಮಾಜಿಕ ಜಾಲತಾಣಗಳಲ್ಲಿ ನಿರಂತರವಾಗಿ ಜಾಲ ಬೀಸುತ್ತಿದ್ದಾರೆ.

ವಂಚಕರು ತಮ್ಮ ವಾಟ್ಸಾಪ್ ಪ್ರೊಫೈಲ್ ಪಿಕ್ಚರ್‌ಗಳಲ್ಲಿ ಮಿಲಿಟರಿ ಸಮಸ್ತ್ರ ಧರಿಸಿರುವ ಫೋಟೋಗಳನ್ನು ಬಳಸಿಕೊಂಡು ಸಾರ್ವಜನಿಕರಿಗೆ ತಾವು ಉನ್ನತ ಸೇನಾ ಅಧಿಕಾರಿಗಳು ಎಂಬ ನಂಬಿಕೆ ಹುಟ್ಟಿಸುತ್ತಿದ್ದಾರೆ. ತದನಂತರ ವಿವಿಧ ಗ್ರೂಪ್‌ಗಳಲ್ಲಿ ಹೂಡಿಕೆಗೆ ಸಂಬಂಧಿಸಿದ ಆಕರ್ಷಕ ಲಿಂಕ್‌ಗಳನ್ನು ಹಂಚಿಕೊಳ್ಳುತ್ತಿದ್ದಾರೆ. ಅವಧಿಯಲ್ಲಿ ದುಪ್ಪಟ್ಟು ಲಾಭ ಕೊಡುವ ಇವರ ಆಮಿಷದ ಜಾಲ ಎಷ್ಟು ತೀವ್ರವಾಗಿದೆ ಎಂದರೆ, ಗ್ರೂಪ್‌ನಲ್ಲಿರುವ ಪ್ರತಿ ಸಾವಿರ ಜನರಲ್ಲಿ ಕನಿಷ್ಠ ಹತ್ತು ಜನರಾದರೂ ಇವರ ಮಾತುಗಳನ್ನು ನಂಬಿ ಮೋಸ ಹೋಗುವಂತಹ ಅಪಾಯಕಾರಿ ಪರಿಸ್ಥಿತಿ ನಿರ್ಮಾಣವಾಗಿದೆ. ಆರಂಭದಲ್ಲಿ ಸಣ್ಣ ಮೊತ್ತದ ಲಾಭದ ಆಸೆ ತೋರಿಸಿ, ಆನಂತರ ದೊಡ್ಡ ಮೊತ್ತ ಹೂಡುವಂತೆ ಪ್ರೇರೇಪಿಸುವ ಇವರ ತಂತ್ರಕ್ಕೆ ಬಲಿಯಾಗಿ ಸಾರ್ವಜನಿಕರು ಲಕ್ಷಾಂತರ ರೂಪಾಯಿಗಳ ಬಂಡವಾಳವನ್ನು ಹಾಕಿ ಸಂಪೂರ್ಣವಾಗಿ ಬೀದಿಗೆ ಬೀಳುತ್ತಿದ್ದಾರೆ.

ಒಮ್ಮೆ ಹಣ ಬ್ಯಾಂಕ್ ಖಾತೆಗೆ ಜಮೆಯಾಗುತ್ತಿದ್ದಂತೆ ವಂಚಕರು ಗ್ರೂಪ್‌ನಿಂದ ನಿರ್ಗಮಿಸಿ, ಲಿಂಕ್‌ಗಳನ್ನು ಡಿಲೀಟ್ ಮಾಡಿ ಪರಾರಿಯಾಗುತ್ತಿದ್ದಾರೆ. ಯಾವುದೇ ಭಾರತೀಯ ಸೇನಾ ಅಧಿಕಾರಿಗಳು ಸಾಮಾಜಿಕ ಮಾಧ್ಯಮಗಳ ಮೂಲಕ ಇಂತಹ ಹೂಡಿಕೆ ವ್ಯವಹಾರಗಳನ್ನು ಉತ್ತೇಜಿಸುವುದಿಲ್ಲ ಎಂಬುದನ್ನು ಸಾರ್ವಜನಿಕರು ಮೊದಲಿಗೆ ಅರಿತುಕೊಳ್ಳಬೇಕಾಗಿದೆ. ಅಪರಿಚಿತರು ಕಳುಹಿಸುವ ಇಂತಹ ಆನ್‌ಲೈನ್ ಲಿಂಕ್‌ಗಳ ಬಗ್ಗೆ ತೀವ್ರ ಜಾಗೃತೆ ವಹಿಸುವ ಅಗತ್ಯವಿದ್ದು, ಅಧಿಕೃತ ಬ್ಯಾಂಕ್ ಅಥವಾ ಸರ್ಕಾರಿ ಮಾನ್ಯತೆ ಇಲ್ಲದ ಯೋಜನೆಗಳಲ್ಲಿ ಹಣ ತೊಡಗಿಸದಂತೆ ಸೈಬರ್ ತಜ್ಞರು ಎಚ್ಚರಿಸಿದ್ದಾರೆ.


ಪ್ರಚಾರ #7
ಜಾಹೀರಾತು ಸ್ಥಳ ಲಭ್ಯವಿದೆ
336x280
ಪ್ರಚಾರ #26
ಜಾಹೀರಾತು ಸ್ಥಳ ಲಭ್ಯವಿದೆ
300x250