ಸೆಪ್ಟೆಂಬರ್ 10, 2026
ಗುರುವಾರ

ನಮ್ಮನ್ನು ಅನುಸರಿಸಿ

Trending

ಲಾಟರಿ ಜ್ವರ ಕಾರವಾರಕ್ಕೂ! ಬಹುಮಾನದ ಆಸೆಗೆ ಮುಗಿಬಿದ್ದ ಜನ

Pakka News Web • 1 ಸೆಪ್ಟೆಂ 2026,

ಕಾರವಾರ: ಗಣೇಶೋತ್ಸವ ಆರಂಭವಾದರೆ ಸಾಕು, ಗೋವಾದಲ್ಲಿ ನಡೆಯುವ ಬೃಹತ್ ಲಾಟರಿ ಯೋಜನೆಗಳು ಲಕ್ಷಾಂತರ ಜನರ ಗಮನ ಸೆಳೆಯುತ್ತವೆ.

ಲಕ್ಷ ಲಕ್ಷ ರೂಪಾಯಿ ಮೌಲ್ಯದ ವಾಹನಗಳು, ದುಬಾರಿ ಉಡುಗೊರೆಗಳು ಹಾಗೂ ವಿವಿಧ ಬಹುಮಾನಗಳ ಆಮಿಷದಿಂದ ಗೋವಾದ ಲಾಟರಿ ಟಿಕೆಟ್‌ಗಳಿಗೆ ಭಾರೀ ಬೇಡಿಕೆ ಸೃಷ್ಟಿಯಾಗಿದ್ದು, ಕರ್ನಾಟಕ ಹಾಗೂ ಮಹಾರಾಷ್ಟ್ರ ಸೇರಿದಂತೆ ನೆರೆಯ ರಾಜ್ಯಗಳಿಂದಲೂ ಜನರು ಟಿಕೆಟ್ ಖರೀದಿಗಾಗಿ ಗೋವಾ ಕಡೆಗೆ ಧಾವಿಸುತ್ತಿದ್ದಾರೆ. 

ಆದರೆ ಇದೇ ಬೇಡಿಕೆಯನ್ನು ಲಾಭವಾಗಿಸಿಕೊಳ್ಳಲು ಕೆಲವರು ಗೋವಾ ಲಾಟರಿ ಟಿಕೆಟ್‌ಗಳನ್ನು ಗಡಿ ದಾಟಿಸಿ ಅಕ್ರಮವಾಗಿ ಮಾರಾಟಕ್ಕೆ ಮುಂದಾಗಿರುವ ಘಟನೆ ಇದೀಗ ಕಾರವಾರದಲ್ಲಿ ಬೆಳಕಿಗೆ ಬಂದಿದೆ.

ಕಾರವಾರ ನಗರದ ಮೀನು ಮಾರುಕಟ್ಟೆ ಪ್ರದೇಶದಲ್ಲಿ ಗೋವಾ ರಾಜ್ಯದ ಲಾಟರಿ ಟಿಕೆಟ್‌ಗಳನ್ನು ಅಕ್ರಮವಾಗಿ ಹಾಗೂ ನಿಗದಿತ ದರಕ್ಕಿಂತ ಹೆಚ್ಚಿನ ಬೆಲೆಗೆ ಮಾರಾಟ ಮಾಡುತ್ತಿದ್ದ ಆರೋಪದ ಮೇಲೆ ಗೋವಾ ಮೂಲದ ವ್ಯಕ್ತಿಯೊಬ್ಬನನ್ನು ಕಾರವಾರ ನಗರ ಠಾಣೆ ಪೊಲೀಸರು ಮಂಗಳವಾರ ವಶಕ್ಕೆ ಪಡೆದಿದ್ದಾರೆ.

ಗೋವಾದ ಪೊಂಡಾದಲ್ಲಿರುವ ಗಣೇಶೋತ್ಸವ ಸಮಿತಿಯೊಂದಕ್ಕೆ ಸಂಬಂಧಿಸಿದ ಲಾಟರಿ ಟಿಕೆಟ್‌ಗಳನ್ನು ಕಾರವಾರಕ್ಕೆ ತಂದು ಮಾರಾಟ ಮಾಡಲಾಗುತ್ತಿತ್ತು ಎನ್ನಲಾಗಿದೆ. 500 ರೂ. ಮುಖಬೆಲೆಯ ಟಿಕೆಟ್‌ಗಳಿಗೆ ಹೆಚ್ಚಿನ ಬೆಲೆ ಪಡೆದು, ಟಿಕೆಟ್ ಖರೀದಿಸಿದವರಿಗೆ ದೊಡ್ಡ ಮೊತ್ತದ ಬಹುಮಾನ ದೊರೆಯುವ ಸಾಧ್ಯತೆ ಇದೆ ಎಂಬ ಪ್ರಚಾರ ನಡೆಸಲಾಗುತ್ತಿತ್ತು. ಗಣೇಶೋತ್ಸವದ ಲಾಟರಿ ಬಹುಮಾನಗಳ ಆಕರ್ಷಣೆಗೆ ಒಳಗಾದ ಸಾರ್ವಜನಿಕರು ಟಿಕೆಟ್ ಖರೀದಿಗೆ ಆಸಕ್ತಿ ತೋರಿದ್ದರೆಂಬ ಮಾಹಿತಿ ದೊರೆತಿದೆ.

ಈ ಅಕ್ರಮ ಮಾರಾಟದ ಕುರಿತು ಖಚಿತ ಮಾಹಿತಿ ಪಡೆದ ಕಾರವಾರ ಶಹರ ಠಾಣೆ ಪೊಲೀಸರು ಮೀನು ಮಾರುಕಟ್ಟೆ ಪ್ರದೇಶದಲ್ಲಿ ದಿಢೀರ್ ಕಾರ್ಯಾಚರಣೆ ನಡೆಸಿದ್ದಾರೆ. ಈ ವೇಳೆ ಸಾರ್ವಜನಿಕರಿಗೆ ಲಾಟರಿ ಟಿಕೆಟ್ ಮಾರಾಟ ಮಾಡುತ್ತಿದ್ದ ಗೋವಾ ಮೂಲದ ವಿನೋದ ಸುರೇಶ ವಾಂಗಲೆ ಎಂಬಾತನನ್ನು ವಶಕ್ಕೆ ಪಡೆದು ಠಾಣೆಗೆ ಕರೆತಂದಿದ್ದಾರೆ.

ಆರೋಪಿ ಬಳಿ ಲಾಟರಿ ಟಿಕೆಟ್‌ಗಳು ಹೇಗೆ ಬಂದವು, ಕಾರವಾರದಲ್ಲಿ ಇನ್ನೂ ಯಾರಾದರೂ ಈ ಮಾರಾಟ ಜಾಲದಲ್ಲಿ ಭಾಗಿಯಾಗಿದ್ದಾರೆಯೇ ಹಾಗೂ ಎಷ್ಟು ಪ್ರಮಾಣದಲ್ಲಿ ಟಿಕೆಟ್‌ಗಳನ್ನು ಮಾರಾಟ ಮಾಡಲಾಗಿದೆ ಎಂಬ ಕುರಿತು ಪೊಲೀಸರು ತನಿಖೆ ಮುಂದುವರಿಸಿದ್ದಾರೆ. ಗಣೇಶೋತ್ಸವದ ಲಾಟರಿ ಹುಚ್ಚನ್ನು ಬಳಸಿಕೊಂಡು ಗಡಿ ಜಿಲ್ಲೆಗಳಲ್ಲಿ ಅಕ್ರಮ ವ್ಯಾಪಾರ ನಡೆಯುತ್ತಿರುವ ಆತಂಕಕ್ಕೂ ಈ ಘಟನೆ ಕಾರಣವಾಗಿದೆ.


ಪ್ರಚಾರ W26
ಜಾಹೀರಾತು ಸ್ಥಳ ಲಭ್ಯವಿದೆ
300x250