ಜೋಯಿಡಾ ತಾಲೂಕಿನ ಪಣಸೋಲಿ ಗೌಳಿವಾಡದಲ್ಲಿ ಬೃಹತ್ ಗಾತ್ರದ ಮರವೊಂದು ಮನೆಯ ಮೇಲೆ ಧರೆಗುರುಳಿದ ಪರಿಣಾಮ ಇಡೀ ಕುಟುಂಬವೊಂದು ಆಸರೆ ಕಳೆದುಕೊಂಡ ಘಟನೆ ಸೋಮವಾರ ಸಂಭವಿಸಿದೆ. ಮರದ ಅಡಿಗೆ ಸಿಲುಕಿ ಕೊಟ್ಟಿಗೆಯಲ್ಲಿದ್ದ ಹಸು ಸ್ಥಳದಲ್ಲೇ ಸಾವನ್ನಪ್ಪಿದ್ದು, ಮನೆಯಲ್ಲಿದ್ದ ದಂಪತಿ ಗಾಯಗೊಂಡು ಕೂದಲೆಳೆ ಅಂತರದಲ್ಲಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಇಲ್ಲಿನ ನಿವಾಸಿ ರಮೇಶ ಬಾಬು ಸಿಂಗಾಡೆ ಎಂಬುವವರ ಮನೆ ಹಾಗೂ ದನದ ಕೊಟ್ಟಿಗೆಯ ಮೇಲೆ ಬೃಹತ್ ಮರ ಅಪ್ಪಳಿಸಿದೆ. ಘಟನೆಯ ತೀವ್ರತೆಗೆ ಮನೆ ಮತ್ತು ಕೊಟ್ಟಿಗೆ ಸಂಪೂರ್ಣ ಜಖಂಗೊಂಡಿವೆ. ಅಪಘಾತದ ವೇಳೆ ಮನೆಯಲ್ಲಿದ್ದ ರಮೇಶ ಸಿಂಗಾಡೆ ಹಾಗೂ ಅವರ ಪತ್ನಿ ಜನ್ನಿ ಸಿಂಗಾಡೆ ಅವರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಆದರೆ, ಬಡ ಕುಟುಂಬದ ಜೀವನಾಧಾರವಾಗಿದ್ದ ಆಕಳು ಕೊಟ್ಟಿಗೆಯ ಮರದ ಅವಶೇಷಗಳಡಿ ಸಿಲುಕಿ ಮೃತಪಟ್ಟಿದೆ.

ಆರ್ಥಿಕವಾಗಿ ತೀರಾ ಹಿಂದುಳಿದಿರುವ ಈ ಕುಟುಂಬಕ್ಕೆ ಗಾಯದ ಮೇಲೆ ಬರೆ ಎಳೆದಂತಾಗಿದೆ. ವಾಸವಿದ್ದ ಏಕೈಕ ಆಸರೆ ಹಾಗೂ ಜೀವನೋಪಾಯದ ಮಾರ್ಗವಾಗಿದ್ದ ಹಸುವನ್ನು ಕಳೆದುಕೊಂಡು ದಂಪತಿ ಕಣ್ಣೀರಲ್ಲಿ ಮುಳುಗಿದ್ದಾರೆ. ತಾಲೂಕಾಡಳಿತವು ತಕ್ಷಣವೇ ಸ್ಪಂದಿಸಿ, ಸಂತ್ರಸ್ತ ಕುಟುಂಬಕ್ಕೆ ತುರ್ತು ಆರ್ಥಿಕ ನೆರವು ಹಾಗೂ ಪುನರ್ವಸತಿ ಕಲ್ಪಿಸಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.
ಗೌಳಿವಾಡದ ಈ ಭಾಗದಲ್ಲಿ ಗೌಳಿ ಸಮುದಾಯದ ನೂರಾರು ಕುಟುಂಬಗಳು ವಾಸಿಸುತ್ತಿದ್ದು, ಬಹುತೇಕ ಮನೆಗಳ ಸುತ್ತಮುತ್ತ ಒಣಗಿದ ಹಾಗೂ ಆತಂಕಕಾರಿ ಮರಗಳು ತೂಗಾಡುತ್ತಿವೆ. ಸ್ಥಳೀಯರು ನಿರಂತರ ಭೀತಿಯಲ್ಲೇ ದಿನ ಕಳೆಯುವಂತಾಗಿದ್ದು, ಅರಣ್ಯ ಇಲಾಖೆಯು ಇನ್ನಾದರೂ ಎಚ್ಚೆತ್ತುಕೊಂಡು ಇಂತಹ ಅಪಾಯಕಾರಿ ಮರಗಳನ್ನು ಶೀಘ್ರವಾಗಿ ತೆರವುಗೊಳಿಸಬೇಕಿದೆ. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಮತ್ತಷ್ಟು ಅನಾಹುತಗಳು ಸಂಭವಿಸುವ ಸಾಧ್ಯತೆ ದಟ್ಟವಾಗಿದೆ.
