ಕಾರವಾರ: ಉತ್ತರ ಕನ್ನಡ ಜಿಲ್ಲೆಯಲ್ಲಿ ಮುಂಗಾರು ಮಳೆಯ ಅಬ್ಬರ ತೀವ್ರಗೊಂಡಿದ್ದು, ಭಾರತೀಯ ಹವಾಮಾನ ಇಲಾಖೆ (IMD) ಜುಲೈ 7 ರಿಂದ ಮುಂದಿನ ಎರಡು ದಿನಗಳ ಕಾಲ ಜಿಲ್ಲೆಗೆ ‘ರೆಡ್ ಅಲರ್ಟ್’ ಮುನ್ಸೂಚನೆ ನೀಡಿದೆ. ನಿರಂತರವಾಗಿ ಸುರಿಯುತ್ತಿರುವ ಭಾರಿ ಮಳೆ ಹಾಗೂ ಬಲವಾದ ಗಾಳಿಯ ಹಿನ್ನೆಲೆಯಲ್ಲಿ, ಮುನ್ನೆಚ್ಚರಿಕಾ ಕ್ರಮವಾಗಿ ಜಿಲ್ಲೆಯ ಐದು ತಾಲೂಕುಗಳ ಅಂಗನವಾಡಿ, ಪ್ರಾಥಮಿಕ ಮತ್ತು ಪ್ರೌಢಶಾಲೆಗಳಿಗೆ ಜುಲೈ 7 ರ ಮಂಗಳವಾರದಂದು ಒಂದು ದಿನದ ಮಟ್ಟಿಗೆ ರಜೆ ಘೋಷಿಸಿ ಜಿಲ್ಲಾಧಿಕಾರಿ ಕೆ. ಲಕ್ಷ್ಮೀಪ್ರಿಯಾ ಅವರು ಅಧಿಕೃತ ಆದೇಶ ಹೊರಡಿಸಿದ್ದಾರೆ.
ಜಿಲ್ಲೆಯ ಮಲೆನಾಡು ಹಾಗೂ ಘಟ್ಟದ ಮೇಲಿನ ಭಾಗಗಳಾದ ಶಿರಸಿ, ಸಿದ್ದಾಪುರ, ಯಲ್ಲಾಪುರ, ಜೋಯಿಡಾ ಮತ್ತು ದಾಂಡೇಲಿ ತಾಲೂಕುಗಳಲ್ಲಿ ಸತತವಾಗಿ ಮಳೆಯಾಗುತ್ತಿದ್ದು, ಹಳ್ಳ-ಕೊಳ್ಳಗಳು ತುಂಬಿ ಹರಿಯುತ್ತಿವೆ. ಈ ಹಿನ್ನೆಲೆಯಲ್ಲಿ ಶಾಲಾ ಮಕ್ಕಳಿಗೆ ಆಗಬಹುದಾದ ಅನಾನುಕೂಲತೆ ಹಾಗೂ ಸಂಭವನೀಯ ಅವಘಡಗಳನ್ನು ತಪ್ಪಿಸುವ ದೃಷ್ಟಿಯಿಂದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕರು ಜಿಲ್ಲಾಡಳಿತಕ್ಕೆ ಲಿಖಿತ ಕೋರಿಕೆ ಸಲ್ಲಿಸಿದ್ದರು. ಅಧಿಕಾರಿಗಳ ಈ ಪ್ರಸ್ತಾವನೆಯನ್ನು ಪುರಸ್ಕರಿಸಿದ ಜಿಲ್ಲಾಧಿಕಾರಿಗಳು ವಿಪತ್ತು ನಿರ್ವಹಣಾ ಕಾಯ್ದೆ 2005 ರ ಕಲಂ 34 (ಎಮ್) ರಡಿ ತಮಗಿರುವ ಅಧಿಕಾರವನ್ನು ಚಲಾಯಿಸಿ ಮಕ್ಕಳ ಸುರಕ್ಷತೆಯ ಹಿತದೃಷ್ಟಿಯಿಂದ ಈ ರಜೆ ಆದೇಶ ನೀಡಿದ್ದಾರೆ.

ಈ ಆದೇಶವನ್ನು ಕಾರವಾರ ಮತ್ತು ಶಿರಸಿ ವ್ಯಾಪ್ತಿಯ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕರು ಹಾಗೂ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಉಪನಿರ್ದೇಶಕರು ಕಟ್ಟುನಿಟ್ಟಾಗಿ ಜಾರಿಗೆ ತರಬೇಕು ಎಂದು ಸೂಚಿಸಲಾಗಿದೆ. ಅಲ್ಲದೆ, ಮಳೆಯ ಕಾರಣಕ್ಕಾಗಿ ಸದ್ಯ ನೀಡಲಾಗಿರುವ ಈ ರಜಾ ಅವಧಿಯನ್ನು ಮುಂದಿನ ದಿನಗಳಲ್ಲಿ ಶೈಕ್ಷಣಿಕ ದಿನಗಳಾಗಿ ಹೊಂದಾಣಿಕೆ ಮಾಡಿಕೊಂಡು, ಪಠ್ಯಕ್ರಮವನ್ನು ಪೂರ್ಣಗೊಳಿಸಬೇಕು ಎಂದು ಜಿಲ್ಲಾಡಳಿತವು ತನ್ನ ಆದೇಶದಲ್ಲಿ ಸ್ಪಷ್ಟಪಡಿಸಿದೆ.
