ಕಾರವಾರ: ಸ್ಕೌಟ್ಸ್ ಮತ್ತು ಗೈಡ್ಸ್ ಶಿಸ್ತು, ನಾಯಕತ್ವ, ಆತ್ಮವಿಶ್ವಾಸ, ಕೌಶಲ್ಯ, ಸೇವಾ ಮನೋಭಾವ, ದೇಶಭಕ್ತಿ ಮತ್ತು ಮೌಲ್ಯ ಮುಖ್ಯವಾಗಿ ಪ್ರಾಮಾಣಿಕತೆ, ಸಹಾಯ ಮಾಡೋ ಗುಣ ಜೊತೆಗೆ ಪ್ರಕೃತಿ ಪ್ರೀತಿಯನ್ನು ಕಲಿಸುತ್ತದೆ ಎಂದು ತಾಲ್ಲೂಕು ದೈಹಿಕ ಶಿಕ್ಷಣ ಪರಿವೀಕ್ಷಕರಾದ ವಿಠೋಬಾ ನಾಯ್ಕ ಹೇಳಿದರು.

ಅವರು ಕಾರವಾರ ಭಾರತ ಸ್ಕೌಟ್ಸ್ ಮತ್ತು ಗೈಡ್ಸ್ ಸ್ಥಳೀಯ ಸಂಸ್ಥೆ ಆಯೋಜಿಸಿದ ವಾರ್ಷಿಕ ಸಭೆಯನ್ನು ಉದ್ದೇಶಿಸಿ ಮಾತನಾಡುತ್ತಾ, ಪ್ರಸ್ತುತ ವರ್ಷದಲ್ಲಿ ತಾಲ್ಲೂಕಿನ ವಿದ್ಯಾರ್ಥಿಗಳು ರಾಷ್ಟ್ರಮಟ್ಟದ ಪುರಸ್ಕಾರ ಪಡೆಯಲು ಶ್ರಮಿಸಬೇಕೆಂದು ಆಶಯ ವ್ಯಕ್ತಪಡಿಸಿದರು.

ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಉತ್ತರಕನ್ನಡ ಜಿಲ್ಲೆಯ ಸ್ಕೌಟ್ಸ್ ಮತ್ತು ಗೈಡ್ಸ್ ಆಯುಕ್ತರಾದ ಡಾ. ಜಿ. ಜಿ. ಸಭಾಹಿತ ಮಾತನಾಡುತ್ತಾ, ಜಿಲ್ಲೆಯ ತರಬೇತಿ ಕೇಂದ್ರವನ್ನು ಸದ್ಯದಲ್ಲೇ ಪ್ರಾರಂಭಿಸಲಾಗುವುದು. ಆ ನಿಟ್ಟಿನಲ್ಲಿ ನಾವೆಲ್ಲರು ಶ್ರಮಿಸೋಣವೆಂದರು.

ಅಧ್ಯಕ್ಷತೆಯನ್ನು ಸ್ಥಳೀಯ ಸಂಸ್ಥೆಯ ಅಧ್ಯಕ್ಷರಾದ ಛಾಯಾ ಜಾವಕರ ವಹಿಸಿ, ಸಂಸ್ಥೆ ಬೆಳೆಯಬೇಕು. ಶಿಕ್ಷಕರು ಹಾಗೂ ವಿದ್ಯಾರ್ಥಿಗಳಿಗೆ ಹೆಚ್ಚು ತರಬೇತಿಗಳ ಅವಶ್ಯಕತೆಯಿರುತ್ತದೆ ಎಂದರು.
ವೇದಿಕೆಯ ಮೇಲೆ ಜಿಲ್ಲೆಯ ಕಾರ್ಯದರ್ಶಿ ರಾಜು ಹೆಬ್ಬಾರ, ಕೋಶಾಧಿಕಾರಿ ಜಿ. ಆರ್. ಮಡಿವಾಳ ಮತ್ತು ಎಸ್. ಓ. ಸಿ. ಭಾರತಿ ಡಯಾಸ್, ಎಲ್. ಟಿ. ಬಿ. ಡಿ. ಫರ್ನಾಂಡೀಸ್ ಉಪಸ್ಥಿತರಿದ್ದರು.

ಕಾರ್ಯಕ್ರಮವನ್ನು ಸ್ಥಳೀಯ ಸಂಸ್ಥೆ ಕಾರ್ಯದರ್ಶಿ ಗಣೇಶ ಬಿಷ್ಟಣ್ಣನವರ ಸ್ವಾಗತಿಸಿ, ನಿರೂಪಿಸಿದರು.
