ಕಾರವಾರ: ಶಿರಸಿ ಹಾಗೂ ಮುಂಡಗೋಡ ತಾಲೂಕುಗಳ ಪೆಟ್ರೋಲ್ ಬಂಕ್‌ಗಳಲ್ಲಿ ಸಿಬಿಜಿ ವಿತರಣೆಯನ್ನು ತಕ್ಷಣವೇ ನಿಲ್ಲಿಸಿ, ಸಿಎನ್‌ಜಿ ಪೂರೈಕೆ ಆರಂಭಿಸುವಂತೆ ಒತ್ತಾಯಿಸಿ ಉತ್ತರ ಕನ್ನಡ ಜಿಲ್ಲಾ ಆಟೋ ರಿಕ್ಷಾ ಚಾಲಕ ಮತ್ತು ಮಾಲಕರ ಕ್ಷೇಮಾಭಿವೃದ್ಧಿ ಸಂಘದ ಪದಾಧಿಕಾರಿಗಳು ಜಿಲ್ಲಾಧಿಕಾರಿಗಳಿಗೆ ಮಂಗಳವಾರ ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಸಂಘದ ಜಿಲ್ಲಾಧ್ಯಕ್ಷ ವಿಶ್ವನಾಥ ಎಸ್. ಗೌಡ, ಸಿಬಿಜಿ ಅನಿಲದ ಬಳಕೆಯಿಂದ ವಾಹನಗಳಲ್ಲಿ ತೀವ್ರ ದುರ್ವಾಸನೆ ಬರುತ್ತಿದ್ದು, ಎಂಜಿನ್‌ಗಳು ಪದೇಪದೇ ಕೆಟ್ಟುಹೋಗುತ್ತಿವೆ. ಇದರಿಂದಾಗಿ ಪ್ರಯಾಣಿಕರು ವಾಹನ ಹತ್ತಲು ಹಿಂಜರಿಯುತ್ತಿದ್ದು, ದುರಸ್ತಿ ವೆಚ್ಚ ಭರಿಸಲಾಗದೆ ಬಡ ಚಾಲಕರು ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದಾರೆ ಎಂದು ಅಳಲು ತೋಡಿಕೊಂಡರು.
ವಾಹನಗಳ ಆರ್‌ಸಿ ಬುಕ್‌ನಲ್ಲಿ ಸಿಎನ್‌ಜಿ ಬಳಕೆಗೆ ಮಾತ್ರ ಅನುಮತಿ ಇದ್ದರೂ, ಬಂಕ್ ಸಿಬ್ಬಂದಿ ಬಲವಂತವಾಗಿ ಸಿಬಿಜಿ ಹಾಕುತ್ತಿದ್ದಾರೆ. ಜಿಲ್ಲೆಯ ಬೇರೆಲ್ಲೂ ಇಲ್ಲದ ಈ ನಿಯಮ ಶಿರಸಿ ಮತ್ತು ಮುಂಡಗೋಡಿನಲ್ಲಿ ಮಾತ್ರ ಜಾರಿಯಲ್ಲಿದ್ದು, ಚಾಲಕರ ಮೇಲೆ ಅನಗತ್ಯ ಆರ್ಥಿಕ ಹೊರೆ ಹೇರಲಾಗುತ್ತಿದೆ ಎಂದು ಅವರು ದೂರಿದರು.
ಜಿಲ್ಲಾಡಳಿತವು ಮಧ್ಯಪ್ರವೇಶಿಸಿ ಒಂದು ವಾರದೊಳಗೆ ಈ ಸಮಸ್ಯೆಯನ್ನು ಬಗೆಹರಿಸದಿದ್ದರೆ, ಜಿಲ್ಲೆಯ ಎಲ್ಲಾ ತಾಲೂಕುಗಳಲ್ಲಿ ಆಟೋ ಹಾಗೂ ಟ್ಯಾಕ್ಸಿ ಸೇವೆಗಳನ್ನು ಸಂಪೂರ್ಣ ಬಂದ್ ಮಾಡಿ ಬೃಹತ್ ಪ್ರತಿಭಟನೆ ನಡೆಸಲಾಗುವುದು ಎಂದು ಸಂಘಟನೆ ಎಚ್ಚರಿಸಿದೆ. ಮನವಿ ಸಲ್ಲಿಕೆಯ ವೇಳೆ ಸಂಘದ ಪ್ರಮುಖರಾದ ಉದಯ ನಾಯ್ಕ, ರಾಘು ಗೌಳಿ, ಶಾನ್ ಪಠಾಣ, ವಿನಾಯಕ ಶಿರಸಿ, ಪ್ರದೀಪ್ ಪವಾರ್, ಮಹೇಶ್ ನಾಯ್ಕ, ಅರುಣ್ ಸೇರಿದಂತೆ 50ಕ್ಕೂ ಹೆಚ್ಚು ಚಾಲಕರು ಉಪಸ್ಥಿತರಿದ್ದರು.
