ಕಾರವಾರ: ತಾಲೂಕಿನ ಶಿರವಾಡ ಗ್ರಾಮದ ಬಂಗಾರಪ್ಪ ನಗರದಲ್ಲಿ ಸಂಭವಿಸಿದ ವಿದ್ಯುತ್ ಅವಘಡದಿಂದ ಹಲವು ಮನೆಗಳಲ್ಲಿದ್ದ ಟಿವಿ, ಫ್ರಿಜ್, ಫ್ಯಾನ್, ಮೊಬೈಲ್ ಚಾರ್ಜರ್, ಮಿಕ್ಸರ್ ಸೇರಿದಂತೆ ಅನೇಕ ವಿದ್ಯುತ್ ಉಪಕರಣಗಳು ಸುಟ್ಟು ಹಾನಿಗೊಳಗಾದ ಘಟನೆ ನಡೆದಿದೆ.

ಹಠಾತ್ ವೋಲ್ಟೇಜ್ ಏರಿಳಿತ ಉಂಟಾದ ಪರಿಣಾಮ ಈ ಅವಘಡ ಸಂಭವಿಸಿದ್ದು, ಸ್ಥಳೀಯ ನಿವಾಸಿಗಳಿಗೆ ಲಕ್ಷಾಂತರ ರೂಪಾಯಿ ನಷ್ಟ ಉಂಟಾಗಿದೆ ಎಂದು ತಿಳಿದುಬಂದಿದೆ. ಅದೃಷ್ಟವಶಾತ್ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ಆದರೆ ಏಕಾಏಕಿ ವೋಲ್ಟೇಜ್ ಹೆಚ್ಚಾದ ಕಾರಣ ಕೆಲಕಾಲ ಆತಂಕದ ವಾತಾವರಣ ನಿರ್ಮಾಣವಾಗಿತ್ತು.
ಘಟನೆಯ ಬಗ್ಗೆ ಸ್ಥಳೀಯರು ಹೆಸ್ಕಾಂ ಅಧಿಕಾರಿಗಳ ಗಮನಕ್ಕೆ ತಂದಿದ್ದು, ಅವಘಡದ ನಿಖರ ಕಾರಣ ಪತ್ತೆಹಚ್ಚಿ ಪರಿಹಾರ ನೀಡುವಂತೆ ಹಾಗೂ ಇಂತಹ ಘಟನೆ ಮರುಕಳಿಸದಂತೆ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ.
