ಜುಲೈ 26, 2026
ಭಾನುವಾರ

ನಮ್ಮನ್ನು ಅನುಸರಿಸಿ

Uttara-Kannada

SSLC ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ವಿತರಿಸಿದ OSG ಗ್ರೂಪ್

Pakka News Web • 9 ಜುಲೈ 2026,

ಕಾರವಾರ: ಶಿಕ್ಷಣದ ಜೊತೆಗೆ ಸಮಾಜಮುಖಿ ಕಾರ್ಯಗಳಿಗೂ ಆದ್ಯತೆ ನೀಡುತ್ತಿರುವ ಓ.ಎಸ್.ಜಿ. ಗ್ರೂಪ್ ಕಾರವಾರದ ವತಿಯಿಂದ ಕಾರವಾರದ ಅಸ್ನೋಟಿಯಲ್ಲಿರುವ ಶಿವಾಜಿ ವಿದ್ಯಾ ಮಂದಿರದಲ್ಲಿ SSLC ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಮತ್ತು ಬಾಲಕಿಯರ ವಸತಿ ನಿಲಯಕ್ಕೆ ಕಿರಾಣಿ ಸಾಮಗ್ರಿಗಳ ವಿತರಣಾ ಕಾರ್ಯಕ್ರಮವು ಇತ್ತಿಚಿಗೆ ಅದ್ದೂರಿಯಾಗಿ ನಡೆಯಿತು.

ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಓ.ಎಸ್.ಜಿ. ಗ್ರೂಪ್ ಅಧ್ಯಕ್ಷರಾದ ಇಂಜಿನಿಯರ್ ಪವನ ಸಾವಂತ ಅವರು ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು. “ವಿದ್ಯಾರ್ಥಿಗಳು ಕೇವಲ ಅಂಕಗಳಿಗಾಗಿ ಓದದೆ, ಉತ್ತಮ ವ್ಯಕ್ತಿತ್ವ ರೂಪಿಸಿಕೊಳ್ಳಬೇಕು. ಇಂದಿನ ಸ್ಪರ್ಧಾತ್ಮಕ ಜಗತ್ತಿನಲ್ಲಿ ಕಠಿಣ ಪರಿಶ್ರಮ ಮತ್ತು ಆತ್ಮವಿಶ್ವಾಸವೇ ಯಶಸ್ಸಿನ ಮಂತ್ರ. ಓ.ಎಸ್.ಜಿ. ಗ್ರೂಪ್ ಯಾವಾಗಲೂ ವಿದ್ಯಾರ್ಥಿಗಳ ಏಳಿಗೆಗೆ ಬೆಂಬಲವಾಗಿ ನಿಲ್ಲುತ್ತದೆ” ಎಂದು ಅವರು ಹೇಳಿದರು.
ಈ ಸಂದರ್ಭದಲ್ಲಿ SSLC ಪರೀಕ್ಷೆಯಲ್ಲಿ ಉತ್ತಮ ಅಂಕಗಳನ್ನು ಪಡೆದ 3 ಬಾಲಕರು ಮತ್ತು 3 ಬಾಲಕಿಯರು ಸೇರಿದಂತೆ ಒಟ್ಟು 6 ಪ್ರತಿಭಾವಂತ ವಿದ್ಯಾರ್ಥಿಗಳಿಗೆ ನಗದು ಸಹಿತ ಪ್ರತಿಭಾ ಪುರಸ್ಕಾರ ಮತ್ತು ಪ್ರಮಾಣ ಪತ್ರಗಳನ್ನು ನೀಡಿ ಗೌರವಿಸಲಾಯಿತು.
ಕಾರ್ಯಕ್ರಮದಲ್ಲಿ ಓ.ಎಸ್.ಜಿ. ಗ್ರೂಪ್ ಚಾಂಪಿಯನ್ ಚಂದ್ರಶೇಖರ ಅವರು ಆಶಯ ನುಡಿಗಳನ್ನಾಡಿ, ಸಂಸ್ಥೆಯ ಮುಂದಿನ ಯೋಜನೆಗಳ ಬಗ್ಗೆ ಮಾಹಿತಿ ನೀಡಿದರು. ಓ.ಎಸ್.ಜಿ. ಗ್ರೂಪ್ ಕಾರ್ಯದರ್ಶಿ ನಾಗಪ್ಪ ನಾಯ್ಕ ಅವರು ವಿದ್ಯಾರ್ಥಿಗಳಿಗೆ ಜೀವನದಲ್ಲಿ ಶಿಸ್ತು, ಪರಿಶ್ರಮದ ಮಹತ್ವದ ಬಗ್ಗೆ ಕಿವಿಮಾತು ಹೇಳಿದರು.
ವಿದ್ಯಾರ್ಥಿಗಳ ಭವಿಷ್ಯದ ಬಗ್ಗೆ ಮಾರ್ಗದರ್ಶನ ನೀಡಿದ ಶಾಲೆಯ ನಿವೃತ್ತ ಮುಖ್ಯಾಧ್ಯಾಪಕರಾದ ದಿನೇಶ್ ಗಾಂವಕರ ಅವರು, “ಈಗಿನಿಂದಲೇ ವೃತ್ತಿ ಆಯ್ಕೆ ಬಗ್ಗೆ ಸ್ಪಷ್ಟತೆ ಇರಬೇಕು. ಪೋಷಕರು ಮತ್ತು ಶಿಕ್ಷಕರ ಮಾತಿಗೆ ಬೆಲೆ ಕೊಡಬೇಕು” ಎಂದು ಸಲಹೆ ನೀಡಿದರು.
ಇದೇ ವೇಳೆ ಬಾಲಕಿಯರ ವಸತಿ ನಿಲಯದ ವಿದ್ಯಾರ್ಥಿನಿಯರ ಅನುಕೂಲಕ್ಕಾಗಿ ಅಕ್ಕಿ, ಬೇಳೆ, ಎಣ್ಣೆ ಸೇರಿದಂತೆ ಅಗತ್ಯ ಕಿರಾಣಿ ಸಾಮಗ್ರಿಗಳನ್ನು ವಿತರಿಸಲಾಯಿತು. ಜೊತೆಗೆ ವಿದ್ಯಾರ್ಥಿಗಳಿಗೆ ಕೆರಿಯರ್ ಮಾರ್ಗದರ್ಶನ ಪುಸ್ತಕಗಳು ಮತ್ತು ಸ್ಯಾನಿಟರಿ ಪ್ಯಾಡ್‌ಗಳನ್ನು ಕೂಡ ನೀಡಲಾಯಿತು.
ಕಾರ್ಯಕ್ರಮದ ಆರಂಭದಲ್ಲಿ ವಿದ್ಯಾರ್ಥಿನಿ ಪ್ರಜ್ಞಾ ವೇಳಿಪ ಮತ್ತು ಅವರ ಸಂಗಡಿಗರು ಪ್ರಾರ್ಥನಾ ಗೀತೆ ಹಾಡಿದರು. ಶಾಲಾ ಮುಖ್ಯಾಧ್ಯಾಪಕರಾದ ಡಾ. ಗಣೇಶ ಬಿಷ್ಟಣ್ಣನವರ ಅವರು ಅತಿಥಿಗಳನ್ನು ಸ್ವಾಗತಿಸಿ, ಕಾರ್ಯಕ್ರಮವನ್ನು ನಿರೂಪಿಸಿದರು. ಶಿಕ್ಷಕ ವಿಜಯಕುಮಾರ್ ನಾಯ್ಕ ಅವರು ವಂದನಾರ್ಪಣೆ ಸಲ್ಲಿಸಿದರು.
ಕಾರ್ಯಕ್ರಮದಲ್ಲಿ ಶಾಲಾ ಶಿಕ್ಷಕರು, ಪೋಷಕರು ಮತ್ತು ಓ.ಎಸ್.ಜಿ. ಗ್ರೂಪ್‌ನ ಪದಾಧಿಕಾರಿಗಳು ಉಪಸ್ಥಿತರಿದ್ದರು. ಓ.ಎಸ್.ಜಿ. ಗ್ರೂಪ್‌ನ ಈ ಸಮಾಜಮುಖಿ ಕಾರ್ಯಕ್ಕೆ ಎಲ್ಲರೂ ಮೆಚ್ಚುಗೆ ವ್ಯಕ್ತಪಡಿಸಿದರು.


ಪ್ರಚಾರ #7
ಜಾಹೀರಾತು ಸ್ಥಳ ಲಭ್ಯವಿದೆ
336x280
ಪ್ರಚಾರ #26
ಜಾಹೀರಾತು ಸ್ಥಳ ಲಭ್ಯವಿದೆ
300x250