ದಾಂಡೇಲಿ: ನೆದರ್ಲ್ಯಾಂಡ್‌ನಲ್ಲಿ ಚಾಲಕರಾಗಿ ಕೆಲಸ ಮಾಡುತ್ತಿದ್ದ ವೇಳೆ ಕುಸಿದು ಬಿದ್ದು ಸಾವನ್ನಪ್ಪಿದ್ದ ಹಳೆದಾಂಡೇಲಿಯ ನಿವಾಸಿ ವಿಲಿಯಂ ವಿಲ್ಸನ್ ಕೋಡೆ ಅವರ ಪಾರ್ಥಿವ ಶರೀರವು 28 ದಿನಗಳ ಬಳಿಕ ತಾಯ್ನಾಡಿಗೆ ಆಗಮಿಸಿತು. ಅವರು ದಾಂಡೇಲಿ ನಗರಸಭೆಯ ನಿಕಟಪೂರ್ವ ಉಪಾಧ್ಯಕ್ಷೆ ಶಿಲ್ಪಾ ಕೋಡೆ ಅವರ ಪತಿಯಾಗಿದ್ದರು.

ವಿದೇಶದಲ್ಲೇ ನಿಧನರಾದ ವಿಲಿಯಂ ಅವರ ಮೃತದೇಹವನ್ನು ಭಾರತಕ್ಕೆ ತರಲು ಅಗತ್ಯ ಪ್ರಕ್ರಿಯೆಗಳು ಪೂರ್ಣಗೊಂಡ ನಂತರ ನೆದರ್ಲ್ಯಾಂಡ್‌ನಿಂದ ವಿಮಾನದ ಮೂಲಕ ಬೆಂಗಳೂರಿಗೆ ತರಲಾಗಿದ್ದು, ಅಲ್ಲಿಂದ ಬುಧವಾರ ರಾತ್ರಿ ಹಳೆದಾಂಡೇಲಿಯಲ್ಲಿರುವ ಅವರ ಸ್ವಗೃಹಕ್ಕೆ ಕೊಂಡೊಯ್ಯಲಾಯಿತು.

ಮೃತದೇಹವನ್ನು ತಾಯ್ನಾಡಿಗೆ ತರಲು ಶಾಸಕ ಆರ್.ವಿ. ದೇಶಪಾಂಡೆ ಅವರು ವಿದೇಶಾಂಗ ಇಲಾಖೆಯೊಂದಿಗೆ ಹಾಗೂ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರೊಂದಿಗೆ ನಿರಂತರ ಸಂಪರ್ಕದಲ್ಲಿದ್ದು ಅಗತ್ಯ ನೆರವು ಒದಗಿಸಿದ್ದರು.
ಹಳೆದಾಂಡೇಲಿಯಲ್ಲಿರುವ ವಿಲಿಯಂ ಅವರ ನಿವಾಸದಲ್ಲಿ ಪಾರ್ಥಿವ ಶರೀರದ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿತ್ತು. ಗುರುವಾರ ಬೆಳಿಗ್ಗೆ ತಹಶೀಲ್ದಾರ್ ಶೈಲೇಶ ಪರಮಾನಂದ, ಪೌರಾಯುಕ್ತ ವಿವೇಕ ಬನ್ನೆ ಸೇರಿದಂತೆ ಅನೇಕರು ಅಂತಿಮ ದರ್ಶನ ಪಡೆದು ಗೌರವ ನಮನ ಸಲ್ಲಿಸಿದರು.
ಶಾಸಕ ಆರ್.ವಿ. ದೇಶಪಾಂಡೆ ಅವರ ಪರವಾಗಿ ಹಾಗೂ ದಾಂಡೇಲಿ ಬ್ಲಾಕ್ ಕಾಂಗ್ರೆಸ್ ಪರವಾಗಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮೋಹನ ಹಲವಾಯಿ ಗೌರವ ನಮನ ಸಲ್ಲಿಸಿದರು. ಈ ವೇಳೆ ವಿವಿಧ ಇಲಾಖೆಗಳ ಅಧಿಕಾರಿಗಳು, ನಗರಸಭೆಯ ಸಿಬ್ಬಂದಿ, ಮಾಜಿ ಸದಸ್ಯರು, ಕಾಂಗ್ರೆಸ್ ಮುಖಂಡರು, ಕ್ರೈಸ್ತ ಸಮುದಾಯದ ಮುಖಂಡರು, ಧರ್ಮಬಾಂಧವರು ಹಾಗೂ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಹಾಜರಿದ್ದರು. ಬಳಿಕ ಪಟೇಲ್ ನಗರದಲ್ಲಿರುವ ಕ್ರೈಸ್ತರ ಸ್ಮಶಾನದಲ್ಲಿ ವಿಲಿಯಂ ವಿಲ್ಸನ್ ಕೋಡೆ ಅವರ ಅಂತ್ಯಕ್ರಿಯೆ ನೆರವೇರಿಸಲಾಯಿತು.
