ಕಾರವಾರ: ವಾರದ ಹಿಂದೆ ರಸ್ತೆ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡು ಜೀವಕ್ಕಾಗಿ ಹೋರಾಟ ನಡೆಸುತ್ತಿದ್ದ ಸದಾಶಿವಗಡದ ಯುವ ಉದ್ಯಮಿ ಶುಭಂ ರಾಣೆ (32) ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದು, ಅವರ ಅಂತಿಮಯಾತ್ರೆ ಸಾವಿರಾರು ಜನರ ಕಂಬನಿ ಮಿಡಿತದ ನಡುವೆ ನೆರವೇರಿತು. ಸದಾಶಿವಗಡ, ಮಾಜಾಳಿ, ಚಿತ್ತಾಕುಲಾ ಸೇರಿದಂತೆ ತಾಲೂಕಿನ ವಿವಿಧ ಭಾಗಗಳಿಂದ ಅಪಾರ ಸಂಖ್ಯೆಯಲ್ಲಿ ಜನರು ಆಗಮಿಸಿ ಅಂತಿಮ ನಮನ ಸಲ್ಲಿಸಿದ್ದು, ಇಡೀ ಪ್ರದೇಶವೇ ಶೋಕಸಾಗರವಾಗಿ ಮಾರ್ಪಟ್ಟಿತ್ತು.

ಹೋಟೆಲ್ ಉದ್ಯಮ ನಡೆಸುತ್ತಿದ್ದ ಶುಭಂ ರಾಣೆ ತಮ್ಮ ಸರಳ ಸ್ವಭಾವ, ನಗುಮುಖ ಮತ್ತು ಆತ್ಮೀಯ ನಡೆ-ನುಡಿಯಿಂದ ಎಲ್ಲರ ಪ್ರೀತಿಗೆ ಪಾತ್ರರಾಗಿದ್ದರು. ಪರಿಚಿತರಾಗಲಿ, ಗ್ರಾಹಕರಾಗಲಿ, ಸ್ನೇಹಿತರಾಗಲಿ ಎಲ್ಲರನ್ನೂ ಒಂದೇ ರೀತಿಯ ಆತ್ಮೀಯತೆಯಿಂದ ಬರಮಾಡಿಕೊಳ್ಳುತ್ತಿದ್ದ ಅವರ ಅಕಾಲಿಕ ನಿಧನದ ಸುದ್ದಿ ಜನರನ್ನು ತೀವ್ರ ದುಃಖಕ್ಕೆ ದೂಡಿದೆ. ಅಂತಿಮಯಾತ್ರೆಯಲ್ಲಿ ಸಾವಿರಾರು ಜನರು ಸ್ವಯಂಪ್ರೇರಿತರಾಗಿ ಭಾಗವಹಿಸಿ ಕಂಬನಿ ಮಿಡಿದ ದೃಶ್ಯಗಳು ಎಲ್ಲರ ಮನಕಲಕುವಂತಿದ್ದವು.

ಜುಲೈ 3ರಂದು ಸಂಜೆ ಸದಾಶಿವಗಡದ ದುರ್ಗಾದೇವಿ ದೇವಸ್ಥಾನದ ಸಮೀಪದ ತಾರಿವಾಡಾ ರಸ್ತೆಯಲ್ಲಿ ಈ ದುರ್ಘಟನೆ ಸಂಭವಿಸಿತ್ತು. ಶುಭಂ ಬುಲೆಟ್ ಮೋಟಾರ್‌ಸೈಕಲ್‌ನಲ್ಲಿ ಲಿಂಕ್ ರಸ್ತೆಯಿಂದ ತಾರಿವಾಡಾ ಕಡೆಗೆ ತೆರಳುತ್ತಿದ್ದಾಗ ಏಕಾಏಕಿ ಬೈಕ್ ನಿಯಂತ್ರಣ ತಪ್ಪಿ ರಸ್ತೆ ಬದಿಯ ಶಮಸುದ್ದೀನ್ ದರ್ಗಾ ಕಾಂಪೌಂಡ್ ಗೋಡೆಗೆ ಡಿಕ್ಕಿ ಹೊಡೆದಿತ್ತು. ಡಿಕ್ಕಿಯ ರಭಸಕ್ಕೆ ಅವರು ಬೈಕ್ ಸಮೇತ ರಸ್ತೆಗೆ ಬಿದ್ದು ತಲೆಗೆ ಗಂಭೀರ ಗಾಯಗೊಂಡಿದ್ದರು.
ಅಪಘಾತದ ಬಳಿಕ ಸ್ಥಳೀಯರು ತಕ್ಷಣವೇ ಅವರನ್ನು ಕಾರವಾರದ ಕ್ರಿಮ್ಸ್ ಆಸ್ಪತ್ರೆಗೆ ದಾಖಲಿಸಿದ್ದರು. ನಂತರ ಹೆಚ್ಚಿನ ಚಿಕಿತ್ಸೆಗೆ ಗೋವಾದ ಪಣಜಿಯ ಕೆಎಂಸಿ ಆಸ್ಪತ್ರೆಗೆ ಸ್ಥಳಾಂತರಿಸಲಾಗಿತ್ತು. ಕಳೆದ ಹಲವು ದಿನಗಳಿಂದ ವೈದ್ಯರು ಚಿಕಿತ್ಸೆ ನೀಡುತ್ತಿದ್ದರೂ, ಚಿಕಿತ್ಸೆ ಫಲಕಾರಿಯಾಗದೆ ಶುಕ್ರವಾರ ಅವರು ಕೊನೆಯುಸಿರೆಳೆದರು.
ಯುವ ವಯಸ್ಸಿನಲ್ಲೇ ನಗುಮುಖದ, ಸ್ನೇಹಪರ ವ್ಯಕ್ತಿತ್ವ ಹೊಂದಿದ್ದ ಶುಭಂ ರಾಣೆ ಅವರ ಅಗಲಿಕೆ ಸದಾಶಿವಗಡ ಭಾಗದ ಜನರಲ್ಲಿ ತೀವ್ರ ನೋವು ಮೂಡಿಸಿದ್ದು, ಕುಟುಂಬಸ್ಥರು, ಬಂಧುಗಳು, ಸ್ನೇಹಿತರು ಹಾಗೂ ಸಾರ್ವಜನಿಕರು ಕಂಬನಿ ಮಿಡಿದು ಅಂತಿಮ ವಿದಾಯ ಹೇಳಿದರು.
