ಕಾಂಗ್ರೆಸ್ ಸರ್ಕಾರ ಜನಸಾಮಾನ್ಯರ ಅನುಕೂಲಕ್ಕಾಗಿ ನೀಡುತ್ತಿರುವ ವಾಸ್ತವ್ಯ ಪ್ರಮಾಣ ಪತ್ರವನ್ನು ದೇಶದ ಭದ್ರತೆಗೆ ಅಪಾಯಕಾರಿ ಎಂದು ಟೀಕಿಸುವ ಬಿಜೆಪಿ ನಾಯಕರು, ಮೊದಲು ಕಾರವಾರದ ಸೀ ಬರ್ಡ್ ನೌಕಾ ನೆಲೆಯಲ್ಲಿ ಗುತ್ತಿಗೆ ಕಾರ್ಮಿಕರಾಗಿ ದುಡಿಯುತ್ತಿರುವ ಹೊರರಾಜ್ಯದ ಕಾರ್ಮಿಕರ ಅಸಲಿಯತ್ತನ್ನು ಬಹಿರಂಗಪಡಿಸಲಿ ಎಂದು ಕೆಪಿಸಿಸಿ ಜಿಲ್ಲಾ ವಕ್ತಾರ ಕೆ. ಶಂಭು ಶೆಟ್ಟಿ ತೀವ್ರವಾಗಿ ಆಗ್ರಹಿಸಿದ್ದಾರೆ. ಇತ್ತೀಚೆಗೆ ಕಾರವಾರದಲ್ಲಿ ಪತ್ರಿಕಾಗೋಷ್ಠಿ ನಡೆಸಿದ್ದ ಬಿಜೆಪಿ ಶಾಸಕರುಗಳಾದ ಯಶಪಾಲ್ ಸುವರ್ಣ, ದಿನಕರ ಶೆಟ್ಟಿ ಹಾಗೂ ಮಾಜಿ ಶಾಸಕಿ ರೂಪಾಲಿ ನಾಯ್ಕ ಅವರು ಕಾಂಗ್ರೆಸ್ ಸರ್ಕಾರದ ರಹವಾಸಿ ಪತ್ರ ವಿತರಣಾ ಕ್ರಮವನ್ನು ಟೀಕಿಸಿದ್ದರು. ಇದಕ್ಕೆ ಪತ್ರಿಕಾ ಪ್ರಕಟಣೆಯ ಮೂಲಕ ಖಾರವಾಗಿ ಪ್ರತಿಕ್ರಿಯಿಸಿರುವ ಶಂಭು ಶೆಟ್ಟಿ, ಬಿಜೆಪಿಯ ನಾಯಕರು ದೇಶದ ಭದ್ರತೆಯ ಹೆಸರಿನಲ್ಲಿ ರಾಜಕೀಯ ಮಾಡುತ್ತಿದ್ದಾರೆ ಎಂದು ಕಿಡಿಕಾರಿದ್ದಾರೆ.
ಸೀ ಬರ್ಡ್ ನೌಕಾ ನೆಲೆಯಲ್ಲಿ ಉತ್ತರ ಭಾರತದ ಕಾರ್ಮಿಕರಿಗೆ ಆಯಾಯ ರಾಜ್ಯದ ಪೊಲೀಸ್ ವೆರಿಫಿಕೇಷನ್ ಗುರುತಿನ ಪತ್ರ ಇಲ್ಲದೆಯೇ ಪಾಸ್ ನೀಡಲಾಗುತ್ತಿದೆ ಎಂಬ ಗಂಭೀರ ಆಪಾದನೆ ಕೇಳಿಬರುತ್ತಿದ್ದರೂ, ಈ ಬಗ್ಗೆ ಬಿಜೆಪಿ ನಾಯಕರು ಕಣ್ಣು ಮುಚ್ಚಿ ಕುಳಿತಿದ್ದಾರೆ. ನಮ್ಮ ರಾಜ್ಯದ ಕಾರ್ಮಿಕರಿಗೆ ಪೊಲೀಸ್ ವೆರಿಫಿಕೇಷನ್ ಪತ್ರ ಇಲ್ಲದೆ ಒಳಪ್ರವೇಶವೇ ಇಲ್ಲದಿರುವಾಗ, ಹೊರರಾಜ್ಯದ ಕಾರ್ಮಿಕರಿಗೆ ಆರು ತಿಂಗಳ ರಿಯಾಯಿತಿ ನೀಡಿರುವುದು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ. ಇದರೊಂದಿಗೆ, ಕೇಂದ್ರ ಸರ್ಕಾರದ ಯೋಜನೆಗಳ ಅಡಿಯಲ್ಲಿ ಕೆಲಸ ಮಾಡುವ ದಿನಗೂಲಿ ಕಾರ್ಮಿಕರ ಯಾವುದೇ ವಿವರಗಳನ್ನು ಅಲ್ಲಿನ ಅಧಿಕಾರಿಗಳು ರಾಜ್ಯ ಸರ್ಕಾರದ ಪೊಲೀಸ್ ಇಲಾಖೆಗೆ ನೀಡುತ್ತಿಲ್ಲ. ದೇಶದ ಅತ್ಯಂತ ಸೂಕ್ಷ್ಮ ಹಾಗೂ ಭದ್ರತೆಯ ಆಯಕಟ್ಟು ಪ್ರದೇಶದಲ್ಲಿ ಕೆಲಸ ಮಾಡುವ ಇಂತಹ ಹಂಗಾಮಿ ನೌಕರರು ಈ ಹಿಂದೆ ಹಲವು ಕಾನೂನುಬಾಹಿರ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿರುವುದು ಎಲ್ಲರಿಗೂ ತಿಳಿದಿರುವ ವಿಷಯವಾಗಿದೆ.
ಹಿಂದೆ ಇಷ್ಟೆಲ್ಲಾ ಭದ್ರತಾ ಲೋಪಗಳು ನಡೆಯುತ್ತಿದ್ದಾಗ ಬಾಯಿ ಮುಚ್ಚಿ ತೆಪ್ಪಗಿದ್ದ ಬಿಜೆಪಿ ನಾಯಕರು, ಇದೀಗ ಕಾಂಗ್ರೆಸ್ ಸರ್ಕಾರವು ಕಾನೂನುಬದ್ಧವಾಗಿ ಅರ್ಹ ನಾಗರಿಕರಿಗೆ ತೊಂದರೆಯಾಗಬಾರದೆಂಬ ಉದ್ದೇಶದಿಂದ ರಹವಾಸಿ ಪತ್ರ ನೀಡುತ್ತಿರುವುದನ್ನು ಸಹಿಸದೆ ಇಲ್ಲಸಲ್ಲದ ಆರೋಪ ಮಾಡುತ್ತಿದ್ದಾರೆ ಎಂದು ತಿಳಿಸಿದ್ದಾರೆ.
