ಜುಲೈ 26, 2026
ಭಾನುವಾರ

ನಮ್ಮನ್ನು ಅನುಸರಿಸಿ

Uttara-Kannada

ರೋಟರಿ ಕ್ಲಬ್ ಪಶ್ಚಿಮ ಕಾರವಾರದಿಂದ ‘CREATE LASTING IMPACT’ ಅಡಿ ವನಮಹೋತ್ಸವ

Pakka News Web • 15 ಜುಲೈ 2026,


ಕಾರವಾರ:ಪರಿಸರ ಜಾಗೃತಿ ಮೂಡಿಸುವುದು ಮತ್ತು ಮಕ್ಕಳಲ್ಲಿ ಹಸಿರು ಪ್ರೀತಿ ಬೆಳೆಸುವ ಉದ್ದೇಶದಿಂದ ರೋಟರಿ ಕ್ಲಬ್ ಪಶ್ಚಿಮ ಕಾರವಾರ, RID 3170 ವತಿಯಿಂದ ಅಸ್ನೋಟಿಯ ಶಿವಾಜಿ ವಿದ್ಯಾ ಮಂದಿರದಲ್ಲಿ ವನಮಹೋತ್ಸವ ಕಾರ್ಯಕ್ರಮವನ್ನು ಅದ್ದೂರಿಯಾಗಿ ಆಚರಿಸಲಾಯಿತು.


ಶಾಲಾ ಆವರಣದಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ರೋಟರಿ ಕ್ಲಬ್ ಪಶ್ಚಿಮ ಕಾರವಾರದ ಅಧ್ಯಕ್ಷರು, ಕಾರ್ಯದರ್ಶಿ, ನಿರ್ದೇಶಕರು, ಸದಸ್ಯರು ಹಾಗೂ ಶಾಲೆಯ ಮುಖ್ಯೋಪಾಧ್ಯಾಯರು, ಶಿಕ್ಷಕರು, ಬೋಧಕೇತರ ಸಿಬ್ಬಂದಿ ಮತ್ತು 8 ರಿಂದ 10ನೇ ತರಗತಿಯ ವಿದ್ಯಾರ್ಥಿಗಳು ಉತ್ಸಾಹದಿಂದ ಭಾಗವಹಿಸಿದ್ದರು.
ಕಾರ್ಯಕ್ರಮದ ಪ್ರಮುಖ ಆಕರ್ಷಣೆಯಾಗಿ ಶಾಲಾ ಆವರಣದಲ್ಲಿ ಹಣ್ಣಿನ ಸಸಿಯನ್ನು ನೆಡಲಾಯಿತು. ರೋಟರಿ ಕ್ಲಬ್ ಪದಾಧಿಕಾರಿಗಳು, ಶಾಲಾ ಮುಖ್ಯೋಪಾಧ್ಯಾಯರು ಮತ್ತು ವಿದ್ಯಾರ್ಥಿಗಳು ಜಂಟಿಯಾಗಿ ಸಸಿಗೆ ನೀರು ಹಾಯಿಸಿ, ಅದನ್ನು ರಕ್ಷಿಸುವ ಮತ್ತು ಬೆಳೆಸುವ ಸಂಕಲ್ಪ ಮಾಡಿದರು. “CREATE LASTING IMPACT” ಎಂಬ ರೋಟರಿ ಘೋಷಣೆಯೊಂದಿಗೆ ಈ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.


ಈ ಸಂದರ್ಭದಲ್ಲಿ ಮಾತನಾಡಿದ ರೋಟರಿ ಕ್ಲಬ್ ಪಶ್ಚಿಮ ಕಾರವಾರದ ಕಾರ್ಯದರ್ಶಿ ರೊ. ರತ್ನಾಕರ ಅಂಬಿಗ ಅವರು, ಜಾಗತಿಕ ತಾಪಮಾನ ಏರಿಕೆ ಮತ್ತು ಮರಗಳ ಕಡಿತದಿಂದಾಗುವ ಅನಾಹುತಗಳ ಬಗ್ಗೆ ವಿದ್ಯಾರ್ಥಿಗಳಿಗೆ ತಿಳಿಸಿದರು. “ಒಬ್ಬ ವಿದ್ಯಾರ್ಥಿ ಕನಿಷ್ಠ 5 ಗಿಡ ನೆಟ್ಟು ಅದನ್ನು ಮರವಾಗಿಸುವ ಜವಾಬ್ದಾರಿ ತೆಗೆದುಕೊಂಡರೆ ನಮ್ಮ ಊರು ಹಸಿರಾಗುತ್ತದೆ. ಪರಿಸರವೇ ನಮ್ಮ ಭವಿಷ್ಯ” ಎಂದು ಅವರು ಕರೆ ನೀಡಿದರು.
ರೋಟರಿ ಕ್ಲಬ್ ಪಶ್ಚಿಮ ಕಾರವಾರದ ಅಧ್ಯಕ್ಷರಾದ ರೊ. ಡಾಲರೀಚ್ ಫರ್ನಾಂಡೀಸ್ ಅವರು ಮಾತನಾಡಿ, ಶಿಕ್ಷಣದ ಜೊತೆಗೆ ಸಾಮಾಜಿಕ ಕಾರ್ಯಗಳಲ್ಲಿಯೂ ಉತ್ತಮ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲು ನಿರ್ಧರಿಸಲಾಗಿದೆ ಎಂದರು. ಈ ಹಿಂದೆ ಈ ಶಾಲೆಯಲ್ಲಿ ಇಂಟ್ರಾಕ್ಟ್ ಕ್ಲಬ್ ಸ್ಥಾಪಿಸಿದ್ದನ್ನು ಶ್ಲಾಘಿಸಿದ ಅವರು, ಮುಂದೆಯೂ ಇಂಟ್ರಾಕ್ಟ್ ಕ್ಲಬ್ ಮೂಲಕ ಮಕ್ಕಳಲ್ಲಿ ಸೇವಾ ಮನೋಭಾವ, ಜವಾಬ್ದಾರಿ ಮತ್ತು ಪ್ರಕೃತಿ ಪ್ರೀತಿಯನ್ನು ಬೆಳೆಸಲಾಗುವುದು ಎಂದು ಹೇಳಿದರು.


ರೋಟರಿ ಜಿಲ್ಲೆ 3170ರ ಅಸಿಸ್ಟೆಂಟ್ ಗೌರ್ನರ್ ರೊ. ಶಿವಾನಂದ ನಾಯ್ಕ ಅವರು ಮಾತನಾಡಿ, ಮಕ್ಕಳಲ್ಲಿ ಶಾಲಾ ದಿನಗಳಲ್ಲೇ ನಾಯಕತ್ವ ಗುಣ ಬೆಳೆಯಬೇಕು. ಆ ನಿಟ್ಟಿನಲ್ಲಿ ನಾವು ಅವರಿಗೆ ಮಾರ್ಗದರ್ಶನ ಮಾಡುತ್ತೇವೆ ಎಂದು ತಿಳಿಸಿದರು.
ವೇದಿಕೆಯ ಮೇಲೆ ಕ್ಲಬ್ ಮಾಜಿ ಅಧ್ಯಕ್ಷರಾದ ರೊ. ಅರವಿಂದ ನಾಯಕ, ಇವೆಂಟ್ ಚೇರ್‌ಪರ್ಸನ್ ರೊ. ಶಿಲ್ಪಾ ಶಿವಾನಂದ ನಾಯ್ಕ, ಶಿಕ್ಷಕರಾದ ವಿಜಯಕುಮಾರ ನಾಯ್ಕ, ಸಂತೋಷ ಕಾಂಬಳೆ, ಜೆ.ಬಿ. ತಿಪ್ಪೇಸ್ವಾಮಿ, ವಿಕ್ರಾಂತ ತಾಂಡೇಲ್, ರೂಪಾಲಿ ಸಾವಂತ್ ಉಪಸ್ಥಿತರಿದ್ದರು.
ಕುಮಾರಿ ಅನುಷ್ಕಾ ಸಾವಂತ್ ಹಾಗೂ ಸಂಗಡಿಗರ ಪ್ರಾರ್ಥನೆಯೊಂದಿಗೆ ಆರಂಭಗೊಂಡ ಕಾರ್ಯಕ್ರಮವನ್ನು ಶಾಲಾ ಮುಖ್ಯಾಧ್ಯಾಪಕ ಡಾ. ಗಣೇಶ ಎನ್. ಬಿಷ್ಟಣ್ಣನವರು ಸ್ವಾಗತಿಸಿ ನಿರೂಪಿಸಿದರು. ಕೊನೆಯಲ್ಲಿ ಹಣ್ಣಿನ ಸಸಿಗಳನ್ನು ನೆಡುವ ಮೂಲಕ ಹಸಿರು ಆವರಣ ಸೃಷ್ಟಿಯಾಗಬೇಕು, ಪರಿಸರ ಉಳಿಯಬೇಕು ಎಂದು ಎಲ್ಲಾ ವಿದ್ಯಾರ್ಥಿಗಳು “ನಾವು ಗಿಡ ಬೆಳೆಸುತ್ತೇವೆ, ಮರ ರಕ್ಷಿಸುತ್ತೇವೆ” ಎಂದು ಪ್ರತಿಜ್ಞೆ ಸ್ವೀಕರಿಸಿದರು.


ಪ್ರಚಾರ #7
ಜಾಹೀರಾತು ಸ್ಥಳ ಲಭ್ಯವಿದೆ
336x280
ಪ್ರಚಾರ #26
ಜಾಹೀರಾತು ಸ್ಥಳ ಲಭ್ಯವಿದೆ
300x250