ಆಧುನಿಕ ಕೃಷಿ ಪದ್ಧತಿಯತ್ತ ಹೆಜ್ಜೆ ಇಡಬಯಸುವ ಕರಾವಳಿಯ ರೈತರಿಗೆ ಕೃಷಿ ಇಲಾಖೆಯು ಭರ್ಜರಿ ಕೊಡುಗೆಯೊಂದನ್ನು ತಂದಿದೆ. ಪ್ರಸಕ್ತ ಸಾಲಿನ ಕೃಷಿ ಯಾಂತ್ರೀಕರಣ ಹಾಗೂ ತುಂತುರು ನೀರಾವರಿ ಯೋಜನೆಯಡಿ ಅತ್ಯಾಧುನಿಕ ಯಂತ್ರೋಪಕರಣಗಳನ್ನು ಪಡೆದುಕೊಳ್ಳಲು ಅರ್ಹ ರೈತರಿಂದ ಅರ್ಜಿ ಆಹ್ವಾನಿಸಲಾಗಿದೆ.
ಈ ಯೋಜನೆಯಡಿ ಸಾಮಾನ್ಯ ವರ್ಗದ ರೈತರಿಗೆ ಶೇಕಡಾ 50 ರಷ್ಟು ಭಾರಿ ರಿಯಾಯಿತಿ ಸಿಗಲಿದ್ದರೆ, ಪರಿಶಿಷ್ಟ ಜಾತಿ ವರ್ಗದ ರೈತರಿಗೆ ಬರೋಬ್ಬರಿ ಶೇಕಡಾ 90 ರಷ್ಟು ರಿಯಾಯಿತಿ ದರದಲ್ಲಿ ಮಿನಿ ಟ್ರ್ಯಾಕ್ಟರ್, ಪವರ್ ಟಿಲ್ಲರ್, ರೋಟೊರವೆಟರ್, ಕಳೆ ಕೊಚ್ಚುವ ಯಂತ್ರಗಳು, ಪವರ್ ವಿಡರ್, ಪವರ್ ಸ್ಪ್ರೇಯರ್ ಹಾಗೂ ಡೀಸೆಲ್ ಪಂಪಸೆಟ್ಗಳನ್ನು ವಿತರಿಸಲಾಗುತ್ತಿದೆ. ಇದರೊಂದಿಗೆ, ನೀರಿನ ಸದ್ಬಳಕೆಗಾಗಿ ರೈತರು ಹೆಚ್ಚು ಇಷ್ಟಪಡುವ ತುಂತುರು ನೀರಾವರಿ ಘಟಕವನ್ನು (ಹೆಚ್ಡಿಪಿಇ ಪೈಪ್) ಸಹ ಶೇಕಡಾ 90 ರಷ್ಟು ಸಬ್ಸಿಡಿ ದರದಲ್ಲಿ ಪಡೆದುಕೊಳ್ಳಬಹುದಾಗಿದೆ.
ಈ ಆಕರ್ಷಕ ಯೋಜನೆಯ ಲಾಭ ಪಡೆಯಲು ಆಸಕ್ತರಿರುವ ಕೃಷಿಕರು ತಮ್ಮ ಭೂಮಿಯ ಪಹಣಿ (ಆರ್.ಟಿ.ಸಿ), ಆಧಾರ್ ಕಾರ್ಡ್, ಬ್ಯಾಂಕ್ ಪಾಸ್ ಪುಸ್ತಕದ ಜೆರಾಕ್ಸ್ ಪ್ರತಿ, ಎರಡು ಭಾವಚಿತ್ರ ಹಾಗೂ 100 ರೂಪಾಯಿಯ ಛಾಪಾ ಕಾಗದದೊಂದಿಗೆ (ಬಾಂಡ್ ಪೇಪರ್) ತಕ್ಷಣವೇ ತಮ್ಮ ವ್ಯಾಪ್ತಿಯ ಹೋಬಳಿಯ ರೈತ ಸಂಪರ್ಕ ಕೇಂದ್ರಗಳಿಗೆ ಭೇಟಿ ನೀಡಿ ಅರ್ಜಿ ಸಲ್ಲಿಸಬೇಕಾಗಿದೆ. ಈ ಸೌಲಭ್ಯದ ಕುರಿತು ಇನ್ನು ಹೆಚ್ಚಿನ ಮಾಹಿತಿ ಅಥವಾ ಗೊಂದಲಗಳಿದ್ದಲ್ಲಿ ರೈತರು ತಮ್ಮ ಹತ್ತಿರದ ರೈತ ಸಂಪರ್ಕ ಕೇಂದ್ರ ಅಥವಾ ಸಹಾಯಕ ಕೃಷಿ ನಿರ್ದೇಶಕರ ಕಚೇರಿಯನ್ನು ನೇರವಾಗಿ ಸಂಪರ್ಕಿಸಬಹುದು ಎಂದು ಕಾರವಾರದಲ್ಲಿ ಸಹಾಯಕ ಕೃಷಿ ನಿರ್ದೇಶಕರು ಅಧಿಕೃತ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ರೈತರಿಗೆ ಭರ್ಜರಿ ಕೊಡುಗೆ; ತಪ್ಪದೆ ಅರ್ಜಿ ಸಲ್ಲಿಸಿ!
