ಜುಲೈ 26, 2026
ಭಾನುವಾರ

ನಮ್ಮನ್ನು ಅನುಸರಿಸಿ

Uttara-Kannada

ಕೇಣಿ ಬಂದರು ವಿರೋಧಿ ಹೋರಾಟ: ಅಮರಣಾಂತ ಉಪವಾಸ ಸತ್ಯಾಗ್ರಹಕ್ಕೆ ನಾವು ಸಿದ್ದ!

Pakka News Web • 19 ಜುಲೈ 2026,

ಕಾರವಾರ: ಅಂಕೋಲಾ ತಾಲೂಕಿನ ಭಾವಿಕೇರಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಕೇಣಿಯಲ್ಲಿ ನಿರ್ಮಾಣ ಉದ್ದೇಶಿತ ಖಾಸಗಿ ಆಳಸಮುದ್ರ ಗ್ರೀನ್‌ಫೀಲ್ಡ್ ಬಂದರು ಯೋಜನೆಯನ್ನು ವಿರೋಧಿಸಿ, ಜುಲೈ 22ರ ಬುಧವಾರ ಅಂಕೋಲಾದಿಂದ ಕಾರವಾರದ ಜಿಲ್ಲಾಧಿಕಾರಿಗಳ ಕಚೇರಿಯವರೆಗೆ ಬೃಹತ್ ಪ್ರತಿಭಟನಾ ಪಾದಯಾತ್ರೆ ನಡೆಸಲಾಗುವುದು ಎಂದು ‘ಅಂಕೋಲಾ ಉತ್ತರಕನ್ನಡ ಉಳಿಸಿ ಸರ್ವ ಸಮಾಜಗಳ ಹಿತರಕ್ಷಣಾ ವೇದಿಕೆ ಪ್ರಮುಖರಾದ ಸಂಜೀವ ಬಲೇಗಾರ ಹೇಳಿದ್ದಾರೆ.

ಕಾರವಾರ ನಗರದ ಜಿಲ್ಲಾ ಪತ್ರಿಕಾಭವನದಲ್ಲಿ ಶನಿವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು ಅಂಕೋಲಾ ಪುರಸಭೆ ವ್ಯಾಪ್ತಿಯ ಸ್ವಾತಂತ್ರ್ಯ ಸಂಗ್ರಾಮ ಸ್ಮಾರಕ ಭವನದ ಗಾಂಧಿ ಮೂರ್ತಿಗೆ ಮಾಲಾರ್ಪಣೆ ಮಾಡಿ ಶಾಂತಿಯುತ ಸಾಂಕೇತಿಕ ಪಾದಯಾತ್ರೆಗೆ ಚಾಲನೆ ನೀಡಲಾಗುವುದು ಎಂದು ತಿಳಿಸಿದರು.

ರಾಷ್ಟ್ರೀಯ ಹೆದ್ದಾರಿ 66ರ ಮೂಲಕ ಕಾರವಾರ ನಗರದವರೆಗೆ ಸಾಗುವ ಈ ಪಾದಯಾತ್ರೆ ಜಿಲ್ಲಾಧಿಕಾರಿಗಳ ಕಚೇರಿ ಬಳಿ ತಲುಪಿ, ವಿನಾಶಕಾರಿ ಬಂದರು ಯೋಜನೆಯನ್ನು ಕೈಬಿಡುವಂತೆ ಜಿಲ್ಲಾಡಳಿತದ ಮೂಲಕ ಸರ್ಕಾರವನ್ನು ಒತ್ತಾಯಿಸಲಿದೆ ಎಂದು ಅವರು ಹೇಳಿದರು. ಪಾದಯಾತ್ರೆಗೆ ಪೂರ್ವಾನುಮತಿ ಕೋರಿ ಜಿಲ್ಲಾಧಿಕಾರಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ, ಕಾರವಾರ ಉಪ ವಿಭಾಗಾಧಿಕಾರಿ, ಎರಡೂ ತಾಲೂಕುಗಳ ತಹಶೀಲ್ದಾರರು, ಪೊಲೀಸ್ ಠಾಣೆಗಳು, ಪುರಸಭೆ, ನಗರಸಭೆ, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಹಾಗೂ ಪಾದಯಾತ್ರೆ ಸಾಗುವ ಮಾರ್ಗದ ಎಲ್ಲ ಗ್ರಾಮ ಪಂಚಾಯತಿಗಳಿಗೆ ಈಗಾಗಲೇ ಜುಲೈ 8ರಂದೇ ಅರ್ಜಿ ಸಲ್ಲಿಸಲಾಗಿದೆ ಎಂದು ಅವರು ವಿವರಿಸಿದರು. ಪೂರ್ವಾನುಮತಿ ದೊರೆಯದಿದ್ದಲ್ಲಿ ಎಲ್ಲರೂ ಸೇರಿ ಜಿಲ್ಲಾಧಿಕಾರಿ ಕಚೇರಿ ಬಳಿ ಅಮರಣಾಂತ ಹೋರಾಟ ಆರಂಭಿಸಲಾಗುವುದು ಎಂದು ಎಚ್ಚರಿಕೆ ನೀಡಿದ ಅವರು, ಕೆಲವರು ಒಪ್ಪಿಗೆ ನೀಡಿದ್ದೇವೆ ಎಂದು ಹೇಳಿಕೆ ನೀಡುತ್ತಿದ್ದರೂ, ಪ್ರತ್ಯೇಕ ಫೋಟೊ ಒದಗಿಸಿ ನಕಲಿ ವರದಿ ಸಲ್ಲಿಸಲಾಗುತ್ತಿದೆ ಎಂದು ಆರೋಪಿಸಿದರು.

ಕೇಣಿ ಬಂದರು ವಿರೋಧಿ ಹೋರಾಟ ದಿನಾಂಕ 25-11-2024ರಂದು ಆರಂಭಗೊಂಡಿದ್ದು, ಈಗಾಗಲೇ ಸುಮಾರು 600 ದಿನಗಳಿಗೆ ಸಮೀಪಿಸುತ್ತಿದೆ. ಈ ಅವಧಿಯಲ್ಲಿ ಪ್ರತಿಭಟನೆ, ಮನವಿ, ಧರಣಿ ಸತ್ಯಾಗ್ರಹ, ಪಾದಯಾತ್ರೆ ಸೇರಿದಂತೆ ಹಲವು ಶಾಂತಿಯುತ ಮಾರ್ಗಗಳ ಮೂಲಕ ಸರ್ಕಾರವನ್ನು ಒತ್ತಾಯಿಸಲಾಗಿದೆ. ಅಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಮೂರು ಬಾರಿ ಖುದ್ದಾಗಿ ಭೇಟಿಯಾಗಿ ಯೋಜನೆಯ ದುಷ್ಪರಿಣಾಮಗಳ ಬಗ್ಗೆ ವಿವರಿಸಲಾಗಿತ್ತು ಎಂದು ಬಲೆಗಾರ ಸ್ಮರಿಸಿದರು. ಆಗಸ್ಟ್ 22, 2025ರಂದು ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ನಡೆದ ಪರಿಸರ ಸಾರ್ವಜನಿಕ ಆಲಿಕೆ ಸಭೆಯಲ್ಲಿ 10 ಸಾವಿರಕ್ಕೂ ಹೆಚ್ಚು ಜನ ಯೋಜನೆಗೆ ವಿರೋಧ ವ್ಯಕ್ತಪಡಿಸಿದ್ದರೂ, ಒಂದು ವರ್ಷವಾದರೂ ಸರ್ಕಾರದಿಂದ ಯೋಜನೆ ಕೈಬಿಡುವ ಕುರಿತು ಯಾವುದೇ ಸ್ಪಷ್ಟ ನಿರ್ಧಾರ ಬಂದಿಲ್ಲ ಎಂದು ಅವರು ಬೇಸರ ವ್ಯಕ್ತಪಡಿಸಿದರು.

ಕಾರವಾರ ಮತ್ತು ಅಂಕೋಲಾ ತಾಲೂಕಿನ ಮೀನುಗಾರ ಸಂಘಟನೆಗಳು ಸ್ವಯಂಪ್ರೇರಿತವಾಗಿ ಮೀನುಗಾರಿಕೆ ಸ್ಥಗಿತಗೊಳಿಸಿ ಪಾದಯಾತ್ರೆಗೆ ಬೆಂಬಲ ನೀಡಲಿದ್ದು, ರೈತರು, ಕೃಷಿ ಕೂಲಿಕಾರ್ಮಿಕರು, ವಿದ್ಯಾರ್ಥಿ ಸಂಘಟನೆಗಳು, ವಕೀಲರ ಸಂಘ, ಟೆಂಪೋ-ಟ್ಯಾಕ್ಸಿ-ರಿಕ್ಷಾ ಯೂನಿಯನ್, ಕಾರ್ಮಿಕ ಸಂಘಟನೆಗಳು ಸೇರಿದಂತೆ ಜಾತಿ-ಧರ್ಮ ಮರೆತು ಎಲ್ಲಾ ವರ್ಗದವರು ಪಾಲ್ಗೊಳ್ಳುವ ನಿರೀಕ್ಷೆ ಇದೆ ಎಂದು ಅವರು ತಿಳಿಸಿದರು. ಬಂದರು ಯೋಜನೆಯಿಂದ ಅಂಕೋಲಾ, ಗೋಕರ್ಣ ಮತ್ತು ಕಾರವಾರದ ಸುಮಾರು 103 ಹಳ್ಳಿಗಳ ಜನರು ಬಾಧಿತರಾಗಲಿದ್ದು, ಈ ಎಲ್ಲಾ ಪ್ರದೇಶಗಳ ಜನರು ಶಾಂತಿಯುತ ಹೋರಾಟಕ್ಕೆ ಸಹಕರಿಸಬೇಕೆಂದು ಮನವಿ ಮಾಡಿದರು.

ಪಾದಯಾತ್ರೆಯ ಸಂದರ್ಭದಲ್ಲಿ ಕಾನೂನು ಸುವ್ಯವಸ್ಥೆಗೆ ಧಕ್ಕೆಯಾಗದಂತೆ, ಸಾರ್ವಜನಿಕ ಆಸ್ತಿಪಾಸ್ತಿಗೆ ಹಾನಿಯಾಗದಂತೆ, ವಾಹನ ಸಂಚಾರಕ್ಕೆ ಅಡ್ಡಿಯಾಗದಂತೆ ಹಾಗೂ ಯಾವುದೇ ರಾಜಕೀಯ ಪಕ್ಷ ಅಥವಾ ರಾಜಕಾರಣಿಗಳ ವಿರುದ್ಧದ ಘೋಷಣೆ ಇಲ್ಲದಂತೆ, ಕೇವಲ ಯೋಜನೆಯ ವಿರುದ್ಧದ ಶಾಂತಿಯುತ ಸಂವಿಧಾನಬದ್ಧ ಪ್ರತಿಭಟನೆಯಾಗಿ ಇದನ್ನು ನಡೆಸಲಾಗುವುದು ಎಂದು ಬಲೆಗಾರ ಸ್ಪಷ್ಟಪಡಿಸಿದರು. ಈ ಹಿಂದಿನ ಹೋರಾಟಗಳಲ್ಲಿ ಪೊಲೀಸ್ ಇಲಾಖೆ ಹಾಗೂ ಆಡಳಿತ ವರ್ಗ ಸಕಾರಾತ್ಮಕವಾಗಿ ಸ್ಪಂದಿಸಿರುವುದನ್ನು ಶ್ಲಾಘಿಸಿದ ಅವರು, ಈ ಬಾರಿಯೂ ಪೂರ್ವಾನುಮತಿ ನೀಡಿ ಸೂಕ್ತ ಪೊಲೀಸ್ ಬಂದೋಬಸ್ತ್ ಒದಗಿಸಬೇಕೆಂದು ಜಿಲ್ಲಾಡಳಿತವನ್ನು ಒತ್ತಾಯಿಸಿದರು.

ಶಾಂತಿಯುತ ಪಾದಯಾತ್ರೆ ಮತ್ತು ಪ್ರತಿಭಟನೆ ನಡೆಸುವುದು ಸಂವಿಧಾನ ನೀಡಿದ ಮೂಲಭೂತ ಹಕ್ಕಾಗಿದ್ದು, ಈ ಹಕ್ಕನ್ನು ಹತ್ತಿಕ್ಕುವ ಪ್ರಯತ್ನ ಮುಂದುವರಿದಲ್ಲಿ ಸಾವಿರಾರು ಸಾರ್ವಜನಿಕರು ಜಿಲ್ಲಾಧಿಕಾರಿಗಳ ಕಚೇರಿ ಎದುರು ಅಮರಣಾಂತ ಉಪವಾಸ ಸತ್ಯಾಗ್ರಹ ನಡೆಸಬೇಕಾಗುತ್ತದೆ ಎಂದು ಅವರು ಎಚ್ಚರಿಕೆ ನೀಡಿದರು. ಸುದ್ದಿಗೋಷ್ಠಿಯಲ್ಲಿ ಕೇಶವ ನಾಯ್ಕ, ಕೃಷ್ಣ ಮೂರ್ತಿ ನಾಯಕ, ಹನುಮಾ ಎಚ್ ಗೌಡ, ರವಿಗೌಡ, ಚಂದ್ರಕಾಂತ ಹರಿಕಂತ್ರ, ವೆಂಕಟೇಶ ದುರ್ಗೇಕರ್, ನಿಲೇಶ್ ಜ್ಞಾನೇಶ್ವರ್ ಹರಿಕಂತ್ರ, ರಾಘವೇಂದ್ರ ಹಾಗೂ ಗಿರೀಶ್ ಬಲೆಗಾರ ಸೇರಿದಂತೆ ಹೋರಾಟಗಾರರು ಉಪಸ್ಥಿತರಿದ್ದರು.


ಪ್ರಚಾರ #7
ಜಾಹೀರಾತು ಸ್ಥಳ ಲಭ್ಯವಿದೆ
336x280
ಪ್ರಚಾರ #26
ಜಾಹೀರಾತು ಸ್ಥಳ ಲಭ್ಯವಿದೆ
300x250