ಮುಂಗಾರು ಮಳೆಯ ಕೊರತೆಯಿಂದಾಗಿ ಉಂಟಾಗುವ ಬರ ಪರಿಸ್ಥಿತಿ ಸೇರಿದಂತೆ ಇತರೇ ಸಮಸ್ಯೆಗಳ ನಿರ್ವಹಣೆಯ ಕುರಿತಂತೆ ಮುಖ್ಯಮಂತ್ರಿಗಳು ನೀಡಿರುವ ಸೂಚನೆಗಳನ್ನು ಜಿಲ್ಲೆಯ ಎಲ್ಲಾ ಅಧಿಕಾರಿಗಳು ಕಟ್ಟುನಿಟ್ಟಾಗಿ ಪಾಲಿಸುವಂತೆ ಜಿಲ್ಲಾಧಿಕಾರಿ ಕೆ.ಲಕ್ಷ್ಮಿಪ್ರಿಯಾ ಸೂಚನೆ ನೀಡಿದರು.
ಅವರು ಕಾರವಾರ ನಗರದ ರವಿವಾರ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಅಧಿಕಾರಿಗಳ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಜಿಲ್ಲೆಯಲ್ಲಿ ಮುಂದಿನ ಬೇಸಿಗೆ ಕಾಲದಲ್ಲಿ ಕುಡಿಯುವ ನೀರಿನ ಸಮಸ್ಯೆ ಉದ್ಭವಿಸದಂತೆ ಇಂದಿನಿಂದಲೇ ಸೂಕ್ತ ಯೋಜನೆಯನ್ನು ರೂಪಿಸಬೇಕು. ಕಂದಾಯ ಮತ್ತು ಗ್ರಾಮೀಣಾಭಿವೃದ್ಧಿ ಇಲಾಖೆಗಳಲ್ಲಿ ಮಾತ್ರ ಶೇ. 80 ರಷ್ಟು ಹಾಜರಾತಿ ದಾಖಲಾಗುತ್ತಿದ್ದು, ಕೆಲವು ಇಲಾಖೆಗಳಲ್ಲಿ ಆನ್ ಲೈನ್ ಹಾಜರಾತಿ ಸಮರ್ಪಕವಾಗಿ ಜಾರಿಯಾಗಿಲ್ಲದೇ ಇದ್ದು ತಾಂತ್ರಿಕ ಸಮಸ್ಯೆಗಳಿದ್ದರೆ ಗಮನಕ್ಕೆ ತಂದು ಅದನ್ನು ಬಗೆಹರಿಸಿಕೊಂಡು ಎಲ್ಲಾ ಇಲಾಖೆಗಳ ಅಧಿಕಾರಿಗಳು ಸಿಬ್ಬಂದಿಗಳು ಶೇ.100 ರಷ್ಟು ಆನ್‌ಲೈನ್ ಹಾಜರಾತಿ ಹಾಕಬೇಕು ಎಂದರು.
ಎಲ್ಲಾ ಇಲಾಖೆಗಳು ತಮ್ಮ ವ್ಯಾಪ್ತಿಯಲ್ಲಿ ಕೈಗೊಳ್ಳುವ ಕಾಮಗಾರಿಗಳ ಪಾರದರ್ಶಕತೆಗೆ ಸಂಬಂಧಿಸಿದಂತೆ ಜಿಪಿಎಸ್ ಪೋಟೋಗಳನ್ನು ಕಾಮಗಾರಿಗಳ ಬಿಲ್ ಪಾವತಿಗೆ ಕಡ್ಡಾಯವಾಗಿ ಪಡೆಯುವಂತೆ ಮತ್ತು ಸರ್ಕಾರದಿಂದ ಬರುವ ನಿರ್ದೇಶನಗಳನ್ನು ಕೇವಲ ಮೇಲ್ಮಟ್ಟದಲ್ಲಿ ಇಟ್ಟುಕೊಳ್ಳದೆ, ಅಧೀನ ಅಧಿಕಾರಿಗಳಿಗೆ ಮತ್ತು ಸಿಬ್ಬಂದಿಗಳಿಗೂ ತಲುಪಿಸಿ ಅವುಗಳನ್ನು ಅನುಷ್ಠಾನಗೊಳಿಸಬೇಕು ಎಂದರು.
ವಿಬಿ ರಾಮ್ ಜಿ’ ಯೋಜನೆಯನ್ನು ಸಮರ್ಪಕವಾಗಿ ಬಳಸಿಕೊಳ್ಳುವಂತೆ ಸೂಚಿಸಿದ ಅವರು ಪಂಚಾಯತ್ ಮಟ್ಟದಲ್ಲಿ ಗುತ್ತಿಗೆದಾರರ ಬದಲಾಗಿ ವೈಯಕ್ತಿಕ ಕುಟುಂಬಗಳಿಗೆ ಅನುಕೂಲವಾಗುವ ಜೀವನೋಪಾಯ ಕಾಮಗಾರಿಗಳಿಗೆ ಆದ್ಯತೆ ನೀಡಬೇಕು ಎಂದರು. ಸಭೆಯಲ್ಲಿ ಜಿ.ಪಂ.ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ದಿಲೀಷ್ ಶಶಿ, ಉಪ ಅರಣ್ಯ ಸಂರಕ್ಷಣಾಧಿಕಾರಿ ಯೋಗೇಶ್, ಉಪ ವಿಭಾಗಾಧಿಕಾರಿಗಳು ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳು ಇದ್ದರು.
