ಕಾರವಾರ:ಸಚಿವ ಸಂಪುಟ ವಿಸ್ತರಣೆ ಪ್ರಕ್ರಿಯೇ ಶೀಘ್ರದಲ್ಲೇ ಆಗಲಿದೆ ಎಂದು ಶಿರಸಿ ಶಾಸಕ ಭೀಮಣ್ಣ ನಾಯ್ಕ ವಿಶ್ವಾಸ ವ್ಯಕ್ತಪಡಿಸಿದರು.
ಕಾರವಾರ ನಗರದಲ್ಲಿ ಸೋಮವಾರ ಮಾತನಾಡಿದ ಅವರು ಸಚಿವ ಸ್ಥಾನದ ಆಯ್ಕೆ ಮತ್ತು ಬದಲಾವಣೆಯ ಅಂತಿಮ ನಿರ್ಧಾರ ಹೈಕಮಾಂಡ್‌ಗೆ ಬಿಟ್ಟದ್ದಾಗಿದ್ದರೂ, ಮಧು ಬಂಗಾರಪ್ಪ ಅವರೇ ಸಚಿವರಾಗಿ ಮುಂದುವರೆಯಲಿದ್ದಾರೆ ಎಂಬ ದೃಢ ನಿರೀಕ್ಷೆ ತಮಗಿದೆ ಎಂದು ಅವರು ಆಶಾವಾದ ವ್ಯಕ್ತಪಡಿಸಿದ್ದಾರೆ.
ಭೀಮಣ್ಣ ನಾಯ್ಕ ಸಮುದಾಯದ ಪ್ರಾತಿನಿಧ್ಯದ ಕುರಿತೂ ಮಾತನಾಡಿದರು. ಪ್ರಸ್ತುತ ವಿಧಾನಸಭೆಯಲ್ಲಿ ತಾವೂ ಸೇರಿ ಒಟ್ಟು ನಾಲ್ಕು ಜನ ನಾಮದಾರಿ ಸಮುದಾಯದ ಶಾಸಕರಿದ್ದು, ಈ ನಾಲ್ವರಲ್ಲಿ ಹೈಕಮಾಂಡ್ ಯಾರಿಗೆ ಸಚಿವ ಸ್ಥಾನ ನೀಡಿದರೂ ಮುಕ್ತ ಮನಸ್ಸಿನಿಂದ ಸ್ವಾಗತಿಸುವುದಾಗಿ ಸ್ಪಷ್ಟಪಡಿಸಿದರು.
ರಾಜ್ಯ ಸಚಿವ ಸಂಪುಟ ವಿಸ್ತರಣೆಯ ಚಟುವಟಿಕೆಗಳು ಗರಿಗೆದರಿರುವ ಹಿನ್ನೆಲೆಯಲ್ಲಿ, ಪ್ರಸಕ್ತ ಸಚಿವರಾಗಿರುವ ಮಧು ಬಂಗಾರಪ್ಪ ಅವರನ್ನು ಸಂಪುಟದಲ್ಲಿ ಮುಂದುವರಿಸಬೇಕು ಎಂಬ ಒತ್ತಾಯ ಕೇಳಿಬಂದಿದೆ. ಮಧು ಬಂಗಾರಪ್ಪನವರನ್ನು ಸಚಿವ ಸ್ಥಾನದಲ್ಲಿ ಮುಂದುವರಿಸಬೇಕು ಎನ್ನುವುದೇ ತಮ್ಮ ಆಶಯವಾಗಿದ್ದು, ಈ ಕುರಿತು ಕಾಂಗ್ರೆಸ್ ಹೈಕಮಾಂಡ್‌ಗೆ ಅಧಿಕೃತವಾಗಿ ವಿನಂತಿ ಸಲ್ಲಿಸಲಾಗಿದೆ ಎಂದು ಭೀಮಣ್ಣ ನಾಯ್ಕ ವಿವರಿಸಿದರು. ವೈಯಕ್ತಿಕ ಹಾಗೂ ಸಮುದಾಯದ ಅನಿಸಿಕೆಗಳನ್ನು ವರಿಷ್ಠರ ಗಮನಕ್ಕೆ ತರಲಾಗಿದೆ ಎಂದು ಅವರು ತಿಳಿಸಿದರು.
