ಜುಲೈ 26, 2026
ಭಾನುವಾರ

ನಮ್ಮನ್ನು ಅನುಸರಿಸಿ

Uttara-Kannada

ದೇಶದ ಗಡಿ ತೆರೆದಿಟ್ಟಿರುವವರು ಯಾರು? ಅಂಜಲಿ ನಿಂಬಾಳ್ಕರ್ ಪ್ರಶ್ನೆ!

Pakka News Web • 20 ಜುಲೈ 2026,

ಕಾರವಾರ:ಅಕ್ರಮ ವಲಸಿಗರ ಬಗ್ಗೆ ಕೇವಲ ರಾಜಕೀಯ ಆರೋಪಗಳನ್ನು ಮಾಡುತ್ತಿರುವ ಬಿಜೆಪಿ ಮೊದಲು ದೇಶದ ಗಡಿ ರಕ್ಷಣೆಯ ಹೊಣೆ ಯಾರದ್ದು ಎಂಬುದನ್ನು ಸ್ಪಷ್ಟಪಡಿಸಬೇಕು. ಗಡಿ ಕಾಯುವ ಜವಾಬ್ದಾರಿ ಕೇಂದ್ರ ಸರ್ಕಾರದ್ದಾಗಿದ್ದರೂ, ಅಕ್ರಮ ನುಸುಳುವಿಕೆಗೆ ಅವಕಾಶ ಮಾಡಿಕೊಟ್ಟು ಗಡಿ ತೆರೆದಿಟ್ಟಿರುವವರು ಯಾರು? ಎಂದು ಎಐಸಿಸಿ ಕಾರ್ಯದರ್ಶಿ ಅಂಜಲಿ ನಿಂಬಾಳ್ಕರ್ ತೀಕ್ಷ್ಣವಾಗಿ ಪ್ರಶ್ನಿಸಿದ್ದಾರೆ.

ಕಾರವಾರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ದೇಶದ ಗಡಿ ಭದ್ರತೆ, ಸ್ವಾಯತ್ತ ಸಂಸ್ಥೆಗಳ ದುರುಪಯೋಗ ಹಾಗೂ ಮಹಿಳಾ ಮೀಸಲಾತಿ ವಿಚಾರದಲ್ಲಿ ಕೇಂದ್ರ ಸರ್ಕಾರದ ನೀತಿಗಳ ವಿರುದ್ಧ ತೀವ್ರ ಆಕ್ರೋಶ ಹೊರಹಾಕಿದರು.

ಚುನಾವಣಾ ಆಯೋಗ, ಜಾರಿ ನಿರ್ದೇಶನಾಲಯ (ಇಡಿ) ಮತ್ತು ಸಿಬಿಐನಂತಹ ದೇಶದ ಪ್ರಮುಖ ಸ್ವಾಯತ್ತ ಸಂಸ್ಥೆಗಳನ್ನು ಕೇಂದ್ರ ಸರ್ಕಾರವು ತನ್ನ ರಾಜಕೀಯ ಸ್ವಾರ್ಥಕ್ಕಾಗಿ ಬಳಸಿಕೊಳ್ಳುತ್ತಿದೆ ಎಂದು ಆರೋಪಿಸಿದ ಅವರು, ಮತದಾರರ ಪಟ್ಟಿ ಪರಿಷ್ಕರಣೆಯ ಹೆಸರಿನಲ್ಲಿ ಕೋಟ್ಯಂತರ ನಾಗರಿಕರನ್ನು ಮತದಾನದ ಹಕ್ಕಿನಿಂದ ವಂಚಿಸುವ ವ್ಯವಸ್ಥಿತ ಪಿತೂರಿ ನಡೆಯುತ್ತಿದೆ ಎಂದರು.

ವಿಶೇಷವಾಗಿ ಬಿಹಾರ ಹಾಗೂ ಪಶ್ಚಿಮ ಬಂಗಾಳ ರಾಜ್ಯಗಳಲ್ಲಿ ಲಕ್ಷಾಂತರ ಅರ್ಹ ಮತದಾರರ ಹೆಸರುಗಳನ್ನು ಪಟ್ಟಿಯಿಂದ ಕೈಬಿಡುವ ಮೂಲಕ ಮುಂಬರುವ ಚುನಾವಣಾ ಪ್ರಕ್ರಿಯೆಯ ಮೇಲೆಯೇ ಪ್ರಭಾವ ಬೀರಲು ಆಡಳಿತ ಪಕ್ಷ ಯತ್ನಿಸುತ್ತಿದೆ ಎಂದು ಆತಂಕ ವ್ಯಕ್ತಪಡಿಸಿದರು.

ಇದೇ ವೇಳೆ ಮಹಿಳಾ ಮೀಸಲಾತಿ ಜಾರಿ ಕುರಿತು ಮಾತನಾಡಿದ ಅಂಜಲಿ ನಿಂಬಾಳ್ಕರ್, ಕಾಂಗ್ರೆಸ್ ಪಕ್ಷ ಎಂದಿಗೂ ಮಹಿಳಾ ಮೀಸಲಾತಿಗೆ ವಿರೋಧಿಯಲ್ಲ. ಈ ಹಿಂದೆ ಯುಪಿಎ ಸರ್ಕಾರದ ಅವಧಿಯಲ್ಲೇ ರಾಜ್ಯಸಭೆಯಲ್ಲಿ ಶೇ.33ರಷ್ಟು ಮಹಿಳಾ ಮೀಸಲಾತಿ ಮಸೂದೆಯನ್ನು ಅಂಗೀಕರಿಸಲಾಗಿತ್ತು ಎಂಬುದನ್ನು ನೆನಪಿಸಿದರು. ಆದರೆ, ಪ್ರಸ್ತುತ ಕೇಂದ್ರ ಸರ್ಕಾರವು ಮಹಿಳಾ ಮೀಸಲಾತಿಯ ನೆಪದಲ್ಲಿ ದೇಶದಲ್ಲಿ ಕ್ಷೇತ್ರ ಮರುವಿಂಗಡಣೆ (ಡಿಲಿಮಿಟೇಷನ್) ಪ್ರಕ್ರಿಯೆ ನಡೆಸಲು ಮುಂದಾಗಿದ್ದು, ಇದಕ್ಕೆ ಕಾಂಗ್ರೆಸ್‌ನ ಬಲವಾದ ವಿರೋಧವಿದೆ. ಕ್ಷೇತ್ರ ಮರುವಿಂಗಡಣೆಯ ಷರತ್ತನ್ನು ಸಂಪೂರ್ಣವಾಗಿ ಕೈಬಿಟ್ಟು, ನೇರವಾಗಿ ಮಹಿಳಾ ಮೀಸಲಾತಿ ವಿಧೇಯಕವನ್ನು ಜಾರಿಗೆ ತಂದರೆ, ರಾಹುಲ್ ಗಾಂಧಿ ಹಾಗೂ ಮಲ್ಲಿಕಾರ್ಜುನ ಖರ್ಗೆ ಅವರ ನೇತೃತ್ವದ ‘ಇಂಡಿಯಾ’ ಮೈತ್ರಿಕೂಟವು ಸರ್ಕಾರಕ್ಕೆ ಬೇಷರತ್ತಾಗಿ ಬೆಂಬಲ ನೀಡಲಿದೆ ಎಂದು ಅವರು ಸ್ಪಷ್ಟಪಡಿಸಿದರು.


ಪ್ರಚಾರ #7
ಜಾಹೀರಾತು ಸ್ಥಳ ಲಭ್ಯವಿದೆ
336x280
ಪ್ರಚಾರ #26
ಜಾಹೀರಾತು ಸ್ಥಳ ಲಭ್ಯವಿದೆ
300x250