ಜುಲೈ 26, 2026
ಭಾನುವಾರ

ನಮ್ಮನ್ನು ಅನುಸರಿಸಿ

Uttara-Kannada

ಭಾರತೀಯ ಯೋಧ ಈಶ್ವರ ನಾಯ್ಕ ನಿಧನ!

Pakka News Web • 20 ಜುಲೈ 2026,

 ದೇಶಸೇವೆಗಾಗಿ ಮನೆ, ಕುಟುಂಬ ತೊರೆದು ದೂರದ ದೆಹಲಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಜೋಯಿಡಾ ತಾಲೂಕಿನ ಗಾಂಗೋಡಾ ಗ್ರಾಮದ ಯೋಧ ಈಶ್ವರ ವಸಂತ ನಾಯ್ಕ (30), ಭಾರತೀಯ ಸೇನೆಯಲ್ಲಿ ನರ್ಸಿಂಗ್ ಅಸಿಸ್ಟೆಂಟ್ ಆಗಿ ಸೇವೆ ಸಲ್ಲಿಸುತ್ತಿದ್ದ ಇವರು ಅನಾರೋಗ್ಯಕ್ಕೆ ತುತ್ತಾಗಿ ದೆಹಲಿಯ ಆರ್ಮಿ ಮೇಡಿಕಲ್ ಕೋರ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಶನಿವಾರ ಕೊನೆಯುಸಿರೆಳೆದಿದ್ದಾರೆ. ಈ ಸುದ್ದಿ ತಿಳಿಯುತ್ತಿದ್ದಂತೆ ಇಡೀ ಗಾಂಗೋಡಾ ಗ್ರಾಮ ಹಾಗೂ ಜೋಯಿಡಾ ತಾಲೂಕಿನಾದ್ಯಂತ ಶೋಕದ ಛಾಯೆ ಆವರಿಸಿದೆ.

ಗಾಂಗೋಡಾ ಗ್ರಾಮ ಪಂಚಾಯತ್ ವ್ಯಾಪ್ತಿಯ ನಿವಾಸಿಯಾಗಿದ್ದ ಈಶ್ವರ ನಾಯ್ಕ ಇಂದಿಗೆ ಸರಿಯಾಗಿ ಹತ್ತು ವರ್ಷಗಳ ಹಿಂದೆ ದೇಶಸೇವೆಯ ಕನಸು ಹೊತ್ತು ಭಾರತೀಯ ಸೇನೆಗೆ ಸೇರ್ಪಡೆಗೊಂಡಿದ್ದರು. ಅಂದಿನಿಂದ ಶ್ರದ್ಧೆ, ಬದ್ಧತೆಯಿಂದ ಕರ್ತವ್ಯ ನಿರ್ವಹಿಸುತ್ತಾ ಬಂದಿದ್ದ ಅವರು, ಇತ್ತೀಚೆಗೆ ಅನಾರೋಗ್ಯಕ್ಕೆ ಒಳಗಾಗಿದ್ದರು. ಸ್ಥಿತಿ ಗಂಭೀರವಾದ ಹಿನ್ನೆಲೆಯಲ್ಲಿ ಅವರನ್ನು ದೆಹಲಿಯ ಆರ್ಮಿ ಮೇಡಿಕಲ್ ಕೋರ್ಸ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ ವೈದ್ಯರ ಎಲ್ಲ ಪ್ರಯತ್ನಗಳ ನಡುವೆಯೂ ಚಿಕಿತ್ಸೆ ಫಲಕಾರಿಯಾಗದೆ ಶನಿವಾರ ಅವರು ಇಹಲೋಕ ತ್ಯಜಿಸಿದ್ದಾರೆ ಎಂದು ಜೋಯಿಡಾ ಪೊಲೀಸ್ ಠಾಣೆಗೆ ಮಾಹಿತಿ ಬಂದಿದೆ.

ಕೇವಲ ಮೂರು ವರ್ಷಗಳ ಹಿಂದೆಯಷ್ಟೇ ವಿವಾಹವಾಗಿದ್ದ ಈಶ್ವರ ನಾಯ್ಕ ಅವರಿಗೆ ಒಂದು ವರ್ಷದ ಪುಟ್ಟ ಗಂಡು ಮಗುವಿದೆ. ಪತಿಯ ಆಕಸ್ಮಿಕ ಅಗಲಿಕೆಯ ಸುದ್ದಿ ಕುಟುಂಬವನ್ನು ದುಃಖದ ಕಡಲಿನಲ್ಲಿ ಮುಳುಗಿಸಿದೆ. ಪತ್ನಿ, ವಯೋವೃದ್ಧ ತಾಯಿ ಹಾಗೂ ಅಪಾರ ಬಂಧು-ಬಳಗವನ್ನು ಅಗಲಿರುವ ಈಶ್ವರ ಅವರ ಸಾವಿನ ಸುದ್ದಿ ಇಡೀ ಊರಿನ ಜನರ ಕಣ್ಣಂಚನ್ನೂ ತೇವಗೊಳಿಸಿದೆ.

ಮೃತ ಯೋಧನ ಪಾರ್ಥಿವ ಶರೀರ ಸೋಮವಾರ ತಡರಾತ್ರಿ ಜೋಯಿಡಾ ತಲುಪುವ ನಿರೀಕ್ಷೆಯಿದೆ. ಈ ಹಿನ್ನೆಲೆಯಲ್ಲಿ ಮಾಜಿ ಸೈನಿಕರ ಸಂಘದಿಂದ ಮಂಗಳವಾರ ಬೆಳಿಗ್ಗೆ 11 ಗಂಟೆಗೆ ಜೋಯಿಡಾ ಶಿವಾಜಿ ವೃತ್ತದಲ್ಲಿ ಶ್ರದ್ಧಾಂಜಲಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಸಂಘದ ಅಧ್ಯಕ್ಷ ಸಂತೋಷ ಸಾವಂತ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ದೇಶಕ್ಕಾಗಿ ದುಡಿದ ಈ ವೀರ ಯೋಧನಿಗೆ ಅಂತಿಮ ನಮನ ಸಲ್ಲಿಸಲು ಗ್ರಾಮಸ್ಥರು, ಸಂಬಂಧಿಕರು ಹಾಗೂ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವ ನಿರೀಕ್ಷೆಯಿದೆ.


ಪ್ರಚಾರ #7
ಜಾಹೀರಾತು ಸ್ಥಳ ಲಭ್ಯವಿದೆ
336x280
ಪ್ರಚಾರ #26
ಜಾಹೀರಾತು ಸ್ಥಳ ಲಭ್ಯವಿದೆ
300x250