ಜುಲೈ 26, 2026
ಭಾನುವಾರ

ನಮ್ಮನ್ನು ಅನುಸರಿಸಿ

Uttara-Kannada

ಹಲ್ಲೆಗೆ ಒಳಗಾದ ಯುವತಿ ಸಾವಿನ ದವಡೆಯಲ್ಲಿ!

Pakka News Web • 21 ಜುಲೈ 2026,

ಸ್ನೇಹ ಎಂದರೆ ನಂಬಿಕೆ, ಆಸರೆ. ಆದರೆ ಅದೇ ಸ್ನೇಹದ ಮುಸುಕಿನಲ್ಲಿ ಬಂದ ದ್ರೋಹದ ಕರಾಳ ಹಸ್ತವೊಂದು, ಯುವತಿಯೊಬ್ಬಳ ಬದುಕನ್ನು ನರಕಕ್ಕೆ ತಳ್ಳಿದೆ. ಕೇವಲ ಕುತ್ತಿಗೆಯಲ್ಲಿದ್ದ ಚಿನ್ನದ ಸರಕ್ಕಾಗಿ ಹೆತ್ತವರ ಕಣ್ಣಿನ ಬೆಳಕಾಗಿದ್ದ ಯುವತಿಯೊಬ್ಬಳು, ಇಂದು ಸಾವು-ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದಾಳೆ. ಆಕೆಯ ಉಸಿರು ಉಳಿಸಿಕೊಳ್ಳಲು ತಂದೆ-ತಾಯಿ ದಾರಿ ಕಾಣದೆ ದಾನಿಗಳ ಮುಂದೆ ಕೈಚಾಚಿ ಕಣ್ಣೀರಿಡುತ್ತಿದ್ದಾರೆ.

ಉಡುಪಿಯ ಮಣಿಪಾಲದಲ್ಲಿ ಕೆಲಸ ಮಾಡುತ್ತಿದ್ದ ಅಂಕೋಲಾ ತಾಲ್ಲೂಕಿನ ಕೂರ್ವೆಯ ಯೋಗೇಶ್ವರಿ ಸೀತಾರಾಮ ಹರಿಕಂತ್ರ ಎನ್ನುವ ಯುವತಿಯೇ ಈ ಕ್ರೂರ ಘಟನೆಗೆ ಬಲಿಯಾದ ದುರದೃಷ್ಟವಂತೆ. ಕಳೆದ ಮೇ 12ರಂದು ರಾತ್ರಿ ರೂಮಿನಲ್ಲಿ ವಿಶ್ರಮಿಸುತ್ತಿದ್ದ ಯೋಗೇಶ್ವರಿ ಮೇಲೆ ಅಂಕೋಲಾದ ಸುಷ್ಮಾ ಅಣ್ಣಪ್ಪ ನಾಯ್ಕ ಎನ್ನುವ ಆಕೆಯದೇ ಗೆಳತಿ, ಕುತ್ತಿಗೆಯಲ್ಲಿದ್ದ ಚಿನ್ನದ ಸರವನ್ನು ದೋಚುವ ದುರಾಶೆಯಿಂದ ಸಿಮೆಂಟ್ ಕಲ್ಲಿನಿಂದ ಅಮಾನವೀಯವಾಗಿ ಹಲ್ಲೆ ನಡೆಸಿದ್ದಳು. ರಕ್ತದ ಮಡುವಿನಲ್ಲಿ ಸುಮಾರು ಮೂರು ಗಂಟೆಗಳ ಕಾಲ ಬಿದ್ದಿದ್ದ ಯೋಗೇಶ್ವರಿಯ ಮೆದುಳಿಗೆ ತೀವ್ರ ಆಘಾತವಾಗಿತ್ತು.

ಮೊದಲಿಗೆ ಈ ಘಟನೆ ಪೋಲಿಸರಿಗೆ ದೊಡ್ಡ ಸವಾಲಾಗಿತ್ತು. ಸಿಟಿಟಿವಿ ಇಲ್ಲದ, ಯಾವುದೇ ಸಾಕ್ಷ್ಯಗಳಿಲ್ಲದ ಪ್ರಕರಣವನ್ನು ಅತ್ಯಂತ ಚಾಣಾಕ್ಷತನದಿಂದ ತನಿಖೆ ನಡೆಸಿದ ಮಣಿಪಾಲ ಪೊಲೀಸರು, ಆಸ್ಪತ್ರೆಗೆ ಸೇರಿಸುವ ನಾಟಕವಾಡಿದ್ದ ಆರೋಪಿ ಸುಷ್ಮಾಳ ಕ್ರೌರ್ಯವನ್ನು ಕೊನೆಗೂ ಬಯಲಿಗೆಳೆದಿದ್ದಾರೆ.

ಆದರೆ, ಅಪರಾಧಿ ಸಿಕ್ಕಿಬಿದ್ದರೂ ಯೋಗೇಶ್ವರಿಯ ಕುಟುಂಬದ ನೋವು ಮಾತ್ರ ಕಡಿಮೆಯಾಗಿಲ್ಲ. ಮೆದುಳಿಗೆ ಬಲವಾದ ಪೆಟ್ಟು ಬಿದ್ದ ಕಾರಣ ಯೋಗೇಶ್ವರಿಯನ್ನು ಮಂಗಳೂರಿನ ಫಸ್ಟ್ ನ್ಯೂರೋ ಆಸ್ಪತ್ರೆಗೆ ದಾಖಲಿಸಲಾಗಿದೆ. ಮಗಳ ಪ್ರಾಣ ಉಳಿಸಿಕೊಳ್ಳಲು ತಂದೆ-ತಾಯಿ ಈಗಾಗಲೇ 10 ಲಕ್ಷಕ್ಕೂ ಅಧಿಕ ಹಣವನ್ನು ಸಾಲ ಮಾಡಿ, ಸಂಬಂಧಿಕರ ಬಳಿ ಪಡೆದು ಚಿಕಿತ್ಸೆಗೆ ವ್ಯಯಿಸಿದ್ದಾರೆ.

ಈಗ ಬಡ ಕುಟುಂಬ ಸಂಪೂರ್ಣವಾಗಿ ಕಂಗಾಲಾಗಿದ್ದು, ಯೋಗೇಶ್ವರಿಯ ಮುಂದಿನ ಚಿಕಿತ್ಸೆಗೆ ಇನ್ನೂ 7 ಲಕ್ಷ ರೂಪಾಯಿಗಳ ತೀವ್ರ ಅಗತ್ಯವಿದೆ. ದಾರಿ ಕಾಣದ ಪೋಷಕರು ಸಮುದಾಯದ ಮುಖಂಡರು, ಜನಪ್ರತಿನಿಧಿಗಳು ಹಾಗೂ ಉದಾರ ಮನಸ್ಸಿನ ದಾನಿಗಳಲ್ಲಿ ಮಗಳನ್ನು ಉಳಿಸಿಕೊಡುವಂತೆ ಕೇಳಿಕೊಳ್ಳುತ್ತಿದ್ದಾರೆ.


ಪ್ರಚಾರ #7
ಜಾಹೀರಾತು ಸ್ಥಳ ಲಭ್ಯವಿದೆ
336x280
ಪ್ರಚಾರ #26
ಜಾಹೀರಾತು ಸ್ಥಳ ಲಭ್ಯವಿದೆ
300x250