ಜುಲೈ 26, 2026
ಭಾನುವಾರ

ನಮ್ಮನ್ನು ಅನುಸರಿಸಿ

Uttara-Kannada

ಕೇಣಿ ಬಂದರು ಯೋಜನೆಗೆ ತೀವ್ರಗೊಂಡ ವಿರೋಧ: ಬೃಹತ್ ಪಾದಯಾತ್ರೆ!

Pakka News Web • 22 ಜುಲೈ 2026,

ಅಂಕೋಲಾ ತಾಲೂಕಿನ ಕೇಣಿಯಲ್ಲಿ ಪ್ರಸ್ತಾವಿತ ಗ್ರೀನ್‌ಫೀಲ್ಡ್ ವಾಣಿಜ್ಯ ಬಂದರು ಯೋಜನೆಯನ್ನು ಶಾಶ್ವತವಾಗಿ ಕೈಬಿಡುವಂತೆ ಆಗ್ರಹಿಸಿ ಸ್ಥಳೀಯರ ಹೋರಾಟ ತೀವ್ರ ಸ್ವರೂಪ ಪಡೆದುಕೊಂಡಿದೆ. ಸರ್ವ ಸಮಾಜಗಳ ಹಿತ ರಕ್ಷಣಾ ವೇದಿಕೆ’ಯ ನೇತೃತ್ವದಲ್ಲಿ ನೂರಾರು ಪ್ರತಿಭಟನಾಕಾರರು ಅಂಕೋಲಾದಿಂದ ಬಾಳೆಗುಳಿಯವರೆಗೆ ಬೃಹತ್ ಪಾದಯಾತ್ರೆ ನಡೆಸಿ, ಬಳಿಕ ಕಾರವಾರಕ್ಕೆ ಬಂದು ಮೆರವಣಿಗೆಯ ಮೂಲಕ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.

ಅಂಕೋಲಾದ ಮಹಾತ್ಮ ಗಾಂಧಿ ಪ್ರತಿಮೆಗೆ ಪುಷ್ಪನಮನ ಸಲ್ಲಿಸಿ ಆರಂಭಗೊಂಡ ಈ ಪಾದಯಾತ್ರೆಯು, ಕರಾವಳಿಯ ನೈಸರ್ಗಿಕ ಪರಿಸರ ಮತ್ತು ಸ್ಥಳೀಯರ ಜೀವನೋಪಾಯವನ್ನು ರಕ್ಷಿಸುವ ಧ್ವನಿಯಾಗಿ ಹೊರಹೊಮ್ಮಿತು. ಈ ಯೋಜನೆ ಅನುಷ್ಠಾನಗೊಂಡರೆ ಉತ್ತರ ಕನ್ನಡದ ಸೂಕ್ಷ್ಮ ಪರಿಸರ ವ್ಯವಸ್ಥೆ, ಮೀನುಗಾರಿಕೆ, ಕೃಷಿ, ಪ್ರವಾಸೋದ್ಯಮ ಹಾಗೂ ಜೀವವೈವಿಧ್ಯತೆಗೆ ಚೇತರಿಸಿಕೊಳ್ಳಲಾಗದಷ್ಟು ಗಂಭೀರ ಹಾನಿಯಾಗಲಿದೆ ಎಂದು ಹೋರಾಟಗಾರರು ತೀವ್ರ ಆತಂಕ ವ್ಯಕ್ತಪಡಿಸಿದ್ದಾರೆ.

ಕಳೆದ 2024ರ ನವೆಂಬರ್‌ನಿಂದಲೇ ಧರಣಿ, ಸತ್ಯಾಗ್ರಹ ಹಾಗೂ ಸಹಿ ಸಂಗ್ರಹ ಅಭಿಯಾನಗಳ ಮೂಲಕ ಶಾಂತಿಯುತ ಹೋರಾಟ ನಡೆಯುತ್ತಿದ್ದು, ಹಿಂದೆ ನಡೆದ ಪರಿಸರ ಸಾರ್ವಜನಿಕ ಅಹವಾಲು ಸಭೆಯಲ್ಲಿ 10 ಸಾವಿರಕ್ಕೂ ಹೆಚ್ಚು ಜನ ಭಾಗವಹಿಸಿ ಯೋಜನೆಯನ್ನು ತೀವ್ರವಾಗಿ ವಿರೋಧಿಸಿದ್ದರು. ಇಷ್ಟೊಂದು ವ್ಯಾಪಕ ಸಾರ್ವಜನಿಕ ಪ್ರತಿರೋಧದ ಹೊರತಾಗಿಯೂ ಸರ್ಕಾರವು ಬಂದರು ಯೋಜನೆಯ ಕುರಿತು ತನ್ನ ಅಂತಿಮ ನಿರ್ಧಾರವನ್ನು ಪ್ರಕಟಿಸದಿರುವುದು ಸಾರ್ವಜನಿಕರ ಅಸಮಾಧಾನಕ್ಕೆ ಕಾರಣವಾಗಿದೆ.

ಇದೇ ವೇಳೆ, ಯೋಜನಾ ಪ್ರದೇಶದ ಸುತ್ತಮುತ್ತ ನಡೆಯುತ್ತಿರುವ ಅಕ್ರಮ ಭೂಸವಕಳಿ ಮತ್ತು ಭೂಗಳ್ಳರ ಚಟುವಟಿಕೆಗಳ ಕುರಿತು ಉನ್ನತ ಮಟ್ಟದ ತನಿಖೆ ನಡೆಸುವಂತೆಯೂ ಆಗ್ರಹಿಸಲಾಗಿದೆ. 

ತಾವು ಅಭಿವೃದ್ಧಿಯ ವಿರೋಧಿಗಳಲ್ಲ ಎಂದು ಸ್ಪಷ್ಟಪಡಿಸಿದ ವೇದಿಕೆಯ ಮುಖಂಡರು, ನಿಸರ್ಗಕ್ಕೆ ಮಾರಕವಾಗುವ ಯೋಜನೆಗಳ ಬದಲಿಗೆ ಕರಾವಳಿ ಪ್ರವಾಸೋದ್ಯಮ, ಕೃಷಿ ಮತ್ತು ಮೀನುಗಾರಿಕೆಗೆ ಪೂರಕವಾದ ಸುಸ್ಥಿರ ಅಭಿವೃದ್ಧಿ ಮಾದರಿಗಳಿಗೆ ಆದ್ಯತೆ ನೀಡಬೇಕು ಹಾಗೂ ಕೇಣಿ ಬಂದರು ಯೋಜನೆಯನ್ನು ತಕ್ಷಣವೇ ಸಂಪೂರ್ಣವಾಗಿ ರದ್ದುಗೊಳಿಸಬೇಕು ಎಂದು ಒತ್ತಾಯಿಸಿದ್ದಾರೆ. ಈ ಸಂದರ್ಭದಲ್ಲಿ ವಿವಿಧ ಸಂಘಟನೆಯ ಪದಾಧಿಕಾರಗಳು, ವಿವಿಧ ರಾಜಕೀಯ ಪಕ್ಷದ ಮುಖಂಡರು, ಸರ್ವ ಸಮಾಜಗಳ ಹಿತ ರಕ್ಷಣಾ ವೇದಿಕೆಯ ಪದಾಧಿಕಾರಿಗಳು ಪ್ರತಿಭಟನೆಯಲ್ಲಿ ಭಾಗಿಯಾಗಿದ್ದರು.


ಪ್ರಚಾರ #7
ಜಾಹೀರಾತು ಸ್ಥಳ ಲಭ್ಯವಿದೆ
336x280
ಪ್ರಚಾರ #26
ಜಾಹೀರಾತು ಸ್ಥಳ ಲಭ್ಯವಿದೆ
300x250