ಹೊನ್ನಾವರದ ಮಠವೊಂದರ ಹಣಕಾಸು ಹಾಗೂ ಸ್ಥಿರ ಆಸ್ತಿ ನಿರ್ವಹಣೆಯಲ್ಲಿ ಅಕ್ರಮಗಳು ನಡೆದಿವೆ ಎಂದು ಆರೋಪಿಸಿರುವ ಸದಾಶಿವಗಡದ ಅಜಿತ್ ಪೊಕಳೆ ಅವರು, ಈ ಕುರಿತು ಉನ್ನತ ಮಟ್ಟದ ತನಿಖೆ ನಡೆಸಬೇಕೆಂದು ಆಗ್ರಹಿಸಿದ್ದಾರೆ.
ನಗರದ ಜಿಲ್ಲಾ ಪತ್ರಿಕಾ ಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಮಠದ ಆಡಳಿತಕ್ಕೆ ಸಂಬಂಧಿಸಿದಂತೆ ಜುಲೈ 5 ರಂದು ಸಂಬಂಧಪಟ್ಟ ಅಧಿಕಾರಿಗಳಿಗೆ ದೂರು ನೀಡಲಾಗಿತ್ತು ಎಂದು ತಿಳಿಸಿದರು. ದೂರಿನನ್ವಯ ಜುಲೈ 16 ರಂದು ಅಧಿಕಾರಿಗಳು ಸ್ಥಳ ತಪಾಸಣೆ ನಡೆಸಿದ್ದು, ಸೂಕ್ತ ಕ್ರಮದ ಭರವಸೆ ನೀಡಿದ್ದರೂ ಇದುವರೆಗೆ ನಿರೀಕ್ಷಿತ ಪ್ರಗತಿಯಾಗಿಲ್ಲ ಎಂದು ಅವರು ಬೇಸರ ವ್ಯಕ್ತಪಡಿಸಿದರು.
ಅಕ್ರಮವಾಗಿ ಸಮಿತಿ ರಚಿಸಿಕೊಂಡು ಮಠದ ನಿರ್ವಹಣೆಯಲ್ಲಿ ಗೊಂದಲ ಮೂಡಿಸಲಾಗುತ್ತಿದೆ ಎಂದು ಸ್ವಾಮೀಜಿ ಹಾಗೂ ಅವರ ಬೆಂಬಲಿಗರ ವಿರುದ್ಧ ಪೊಕಳೆ ಆರೋಪಿಸಿದರು. ಕಾರವಾರ, ಬೆಳಗಾವಿ, ಗೋವಾ ಮತ್ತು ಮಹಾರಾಷ್ಟ್ರ ಭಾಗದ ಸಮಾಜದ ಪ್ರಮುಖರನ್ನು ಕಡೆಗಣಿಸಿ ನಿರ್ಧಾರಗಳನ್ನು ತೆಗೆದುಕೊಳ್ಳಲಾಗುತ್ತಿದೆ ಎಂದ ಅವರು, ಮುಂದಿನ ಒಂದು ವಾರದೊಳಗೆ ಸಂಬಂಧಪಟ್ಟವರು ಪೊಲೀಸ್ ಠಾಣೆಗೆ ಹಾಜರಾಗಿ ಸ್ಪಷ್ಟನೆ ನೀಡದಿದ್ದರೆ ಹೊಸ ದೂರು ದಾಖಲಿಸುವುದಾಗಿ ಎಚ್ಚರಿಸಿದರು.
