ನೀಟ್ ಪರೀಕ್ಷೆಯ ಅಕ್ರಮಗಳ ನೆಪವಿಟ್ಟುಕೊಂಡು ಕಾಂಗ್ರೆಸ್, ಕಾಕ್ರೋಚ್, ಆಮ್ ಆದ್ಮಿ ಪಾರ್ಟಿ ಹಾಗೂ ಇತರ ವಿರೋಧ ಪಕ್ಷಗಳು ದೇಶದಲ್ಲಿ ಅಭದ್ರತೆ ಮತ್ತು ಅಸ್ಥಿರತೆಯನ್ನು ಸೃಷ್ಟಿಸಲು ಯತ್ನಿಸುತ್ತಿವೆ ಎಂದು ಆರೋಪಿಸಿ ಉತ್ತರ ಕನ್ನಡ ಜಿಲ್ಲಾ ಬಿಜೆಪಿ ಘಟಕದ ವತಿಯಿಂದ ಗುರುವಾರ ಕಾರವಾರದ ಜಿಲ್ಲಾಧಿಕಾರಿ ಕಚೇರಿಯ ಎದುರು ಬೃಹತ್ ಪ್ರತಿಭಟನೆ ನಡೆಸಲಾಯಿತು.
ಪ್ರತಿಭಟನಾ ಸಭೆಯನ್ನುದ್ದೇಶಿಸಿ ಮಾತನಾಡಿದ ನಾಯಕರು, ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ನೇತೃತ್ವದ ಸರ್ಕಾರದ ಸತತ ಗೆಲುವನ್ನು ಸಹಿಸಿಕೊಳ್ಳಲಾಗದೆ ವಿಪಕ್ಷಗಳು ಕಂಗಾಲಾಗಿವೆ. ಜೆನ್-ಜಿ ಯುವಜನರ ಮತ್ತು ವಿದ್ಯಾರ್ಥಿಗಳ ಪ್ರತಿಭಟನೆಯ ಲಾಭ ಪಡೆದುಕೊಂಡು ಪಶ್ಚಿಮ ಬಂಗಾಳ, ನೇಪಾಳ ಹಾಗೂ ಶ್ರೀಲಂಕಾಗಳಲ್ಲಿ ಸರ್ಕಾರಗಳನ್ನು ಉರುಳಿಸಿದ ರೀತಿಯಲ್ಲೇ, ಇಲ್ಲೂ ಪ್ರಜಾಸತ್ತಾತ್ಮಕವಾಗಿ ಆಯ್ಕೆಯಾದ ಸರ್ಕಾರವನ್ನು ಕೆಳಗಿಳಿಸಲು ರಾಹುಲ್ ಗಾಂಧಿ ಸೇರಿದಂತೆ ವಿಪಕ್ಷಗಳ ನಾಯಕರು ದೆಹಲಿಯ ಜಂತರ್ ಮಂತರ್‌ನಲ್ಲಿ ಗೂಡುಕಟ್ಟಿ ಷಡ್ಯಂತ್ರ ರೂಪಿಸುತ್ತಿದ್ದಾರೆ. ನೈಜ ವಿದ್ಯಾರ್ಥಿಗಳ ಹೋರಾಟವನ್ನು ಈ ಪಕ್ಷಗಳು ಸಂಪೂರ್ಣವಾಗಿ ‘ಹೈಜಾಕ್’ ಮಾಡಿವೆ ಎಂದು ತೀವ್ರವಾಗಿ ಆಕ್ರೋಶ ವ್ಯಕ್ತಪಡಿಸಿದರು.
ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಗುರುಪ್ರಸಾದ್ ಮಾತನಾಡಿ, ನೀಟ್ ಪರೀಕ್ಷೆಯಲ್ಲಿ ನಡೆದಿರುವ ಅಕ್ರಮಗಳ ಕುರಿತು ನಮಗೂ ತೀವ್ರ ವಿಷಾದವಿದೆ. ಕೇಂದ್ರ ಸರ್ಕಾರ, ಪ್ರಧಾನಿ ನರೇಂದ್ರ ಮೋದಿ ಹಾಗೂ ರಕ್ಷಣಾ ಸಚಿವರು ಈ ವಿಚಾರದಲ್ಲಿ ಸಂಪೂರ್ಣ ಪಾರದರ್ಶಕ ತನಿಖೆ ನಡೆಸಿ ವಿದ್ಯಾರ್ಥಿಗಳಿಗೆ ನ್ಯಾಯ ಒದಗಿಸುವ ಭರವಸೆ ನೀಡಿದ್ದಾರೆ. ಯುವಜನತೆ ಮತ್ತು ವಿದ್ಯಾರ್ಥಿಗಳ ಭವಿಷ್ಯ ನಮಗೆ ಅತ್ಯಂತ ಮುಖ್ಯ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪ್ರತಿಭಟನೆ ಮಾಡುವುದು ವಿದ್ಯಾರ್ಥಿಗಳ ಹಕ್ಕು, ನಾವು ಅದರ ವಿರುದ್ಧವಿಲ್ಲ. ಆದರೆ ವಿದ್ಯಾರ್ಥಿಗಳ ಭವಿಷ್ಯದ ಜೊತೆ ಚೆಲ್ಲಾಟವಾಡಿ, ನೈಜ ಹೋರಾಟವನ್ನು ಸ್ವಂತ ರಾಜಕೀಯ ಲಾಭಕ್ಕೆ ಬಳಸಿಕೊಳ್ಳುತ್ತಿರುವುದು ಖಂಡನೀಯ ಎಂದರು.
ಮುಂದುವರಿದು ರಾಜ್ಯ ಸರ್ಕಾರವನ್ನು ತೊಳೆಯುತ್ತಾ, ಕರ್ನಾಟಕದಲ್ಲಿ ತೀವ್ರ ಮಳೆ ಅಭಾವದಿಂದ ರೈತರು ಕಂಗಾಲಾಗಿದ್ದಾರೆ. ಕಾನೂನು ಸುವ್ಯವಸ್ಥೆ ಹದಗೆಟ್ಟು ಡ್ರಗ್ಸ್ ಪ್ರಕರಣಗಳು ಹೆಚ್ಚಾಗುತ್ತಿವೆ. ಇಂತಹ ಗಂಭೀರ ಪರಿಸ್ಥಿತಿಯಲ್ಲಿ ರಾಜ್ಯದ ಜನರನ್ನು ಕಷ್ಟಕ್ಕೆ ತಳ್ಳಿ, ಮುಖ್ಯಮಂತ್ರಿಗಳು ಹಾಗೂ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ದೆಹಲಿಗೆ ಓಡಿಹೋಗಿ ಪ್ರತಿಭಟನೆಯಲ್ಲಿ ಭಾಗವಹಿಸಿ ರಾಜಕೀಯ ಮಾಡಲು ಆದ್ಯತೆ ನೀಡುತ್ತಿದ್ದಾರೆ ಎಂದು ಕಟುವಾಗಿ ಟೀಕಿಸಿದರು.
ಬಿಜೆಪಿ ಪ್ರಮುಖ ನಾಗರಾಜ್ ನಾಯಕ ಮಾತನಾಡಿ, ಸಿದ್ಧಾಂತವಿಲ್ಲದ ವಿರೋಧ ಪಕ್ಷಗಳನ್ನು ಹಾಗೂ ಹೊಸದಾಗಿ ಹುಟ್ಟಿಕೊಳ್ಳುತ್ತಿರುವ ಪಕ್ಷಗಳನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡರು. ಹಿಂದೆ ಜನತಾ ಪಕ್ಷ, ಸಮಾಜವಾದಿ ಪಕ್ಷ, ಜನತಾ ದಳಗಳಂತಹ ಸಿದ್ಧಾಂತ ಆಧಾರಿತ ಪಕ್ಷಗಳಿದ್ದವು. ಆದರೆ ಇಂದಿನ ಹೊಸ ಪಕ್ಷಗಳಲ್ಲಿ ಯಾವುದೇ ಸ್ಪಷ್ಟ ಸಿದ್ಧಾಂತವಿಲ್ಲ, ದೇಶದ ಅಥವಾ ಯುವಕರ ಹಿತಾಸಕ್ತಿಯೂ ಇಲ್ಲ. ನೀಟ್ ವಿಚಾರದಲ್ಲಿ ಅಕ್ರಮ ನಡೆದಿದ್ದರೆ ಪ್ರತಿಭಟಿಸುವುದು ಸಂವಿಧಾನಾತ್ಮಕ ಹಕ್ಕು. ಇಂತಹ ಪ್ರಜಾಪ್ರಭುತ್ವದ ಮೌಲ್ಯಗಳಿಗೆ ಮತ್ತು ಪ್ರತಿಭಟನೆಗಳಿಗೆ ಗೌರವ ಹಾಗೂ ಅವಕಾಶ ಸಿಗುತ್ತಿರುವುದು ನರೇಂದ್ರ ಮೋದಿಯವರ ಭಾರತದಲ್ಲಿ. ಇಲ್ಲದೇ ಹೋಗಿದ್ದರೆ ದೇಶ ಉತ್ತರ ಕೊರಿಯಾದಂತಹ ಸರ್ವಾಧಿಕಾರಿ ಆಡಳಿತಕ್ಕೆ ಒಳಗಾಗುತ್ತಿತ್ತು ಎಂದು ಬಣ್ಣಿಸಿದರು.
ಈ ಪ್ರತಿಭಟನಾ ಸಭೆಯಲ್ಲಿ ಕುಮಟಾ ಶಾಸಕ ದಿನಕರ್ ಶೆಟ್ಟಿ, ಪ್ರಮುಖ ನಾಯಕರಾದ ಕೆ.ಜಿ. ನಾಯ್ಕ ಸೇರಿದಂತೆ ಜಿಲ್ಲೆಯ ಹಲವು ಬಿಜೆಪಿ ಮುಖಂಡರು, ಜನಪ್ರತಿನಿಧಿಗಳು ಹಾಗೂ ನೂರಾರು ಕಾರ್ಯಕರ್ತರು ಭಾಗವಹಿಸಿ, ವಿರೋಧ ಪಕ್ಷಗಳು ಮತ್ತು ಕೇಂದ್ರ ಸರ್ಕಾರದ ವಿರುದ್ಧ ಅಪಪ್ರಚಾರ ನಡೆಸುತ್ತಿರುವ ನಾಯಕರ ವಿರುದ್ಧ ಘೋಷಣೆಗಳನ್ನು ಕೂಗಿದರು.
