ಹಳಿಯಾಳ: ರಾಷ್ಟ್ರೀಯ ಪರೀಕ್ಷಾ ಮಂಡಳಿ ನಡೆಸುವ ಸ್ಪರ್ಧಾತ್ಮಕ ನೀಟ್ (NEET) ಪರೀಕ್ಷೆಯಲ್ಲಿ ಅತ್ಯುತ್ತಮ ರಾಂಕಿಂಗ್ ಪಡೆದು ಸಾಧನೆ ಗೈದ ಕು. ಪ್ರೀತಮ್ ಚೌಹಾನ್ ಅವರಿಗೆ ಅರ್ಜುನ ವಿಜ್ಞಾನ ಪದವಿ ಪೂರ್ವ ಮಹಾವಿದ್ಯಾಲಯ ಧಾರವಾಡ ಹಾಗೂ ವಿಮಲಾ ವಿ. ದೇಶಪಾಂಡೆ ಪ್ರೌಢಶಾಲೆಯ ಸಂಯುಕ್ತ ಆಶ್ರಯದಲ್ಲಿ ಸನ್ಮಾನ ಪತ್ರ ನೀಡಿ ಅಭಿನಂದಿಸಲಾಯಿತು.
ದ್ವಿತೀಯ ಪಿಯುಸಿ ನಂತರ ತಮ್ಮ ವೈದ್ಯಕೀಯ ಕನಸನ್ನು ನನಸಾಗಿಸಿಕೊಳ್ಳಲು ನೀಟ್ ಪರೀಕ್ಷೆ ಬರೆದಿದ್ದ ಸಂಸ್ಥೆಯ ವಿದ್ಯಾರ್ಥಿ ಪ್ರೀತಮ್, 720 ಅಂಕಗಳಿಗೆ 598 ಅಂಕಗಳನ್ನು (ಶೇ. 99.46, ಅಖಿಲ ಭಾರತ ಸಾಮಾನ್ಯ ಶ್ರೇಣಿ 4397) ಗಳಿಸುವ ಮೂಲಕ ಸಂಸ್ಥೆ ಹಾಗೂ ಪೋಷಕರು ಹೆಮ್ಮೆ ಪಡುವಂತೆ ಮಾಡಿದ್ದಾರೆ.

ಈ ಸನ್ಮಾನ ಸಮಾರಂಭದಲ್ಲಿ ಮಾತನಾಡಿದ ಶಾಲೆಯ ಪ್ರಾಂಶುಪಾಲರಾದ ಬಸವರಾಜ ಅವರು, ವಿದ್ಯಾರ್ಥಿಯ ಸಾಧನೆಗೆ ಹರ್ಷ ವ್ಯಕ್ತಪಡಿಸಿದರು. ಸತತ ಪ್ರಯತ್ನ, ಪರಿಶ್ರಮ ಮತ್ತು ಸರಿಯಾದ ಮಾರ್ಗದರ್ಶನ ದೊರೆತರೆ ಪ್ರತಿಯೊಬ್ಬ ವಿದ್ಯಾರ್ಥಿಯೂ ಸಾಧನೆ ಮಾಡಬಲ್ಲ ಎಂಬುದಕ್ಕೆ ಪ್ರೀತಮ್ ನಿದರ್ಶನವಾಗಿದ್ದಾರೆ ಎಂದರು. ಶಾಲೆಯ ದಿನಗಳಿಂದಲೂ ಆತನ ಪರಿಶ್ರಮ, ಉತ್ತಮ ನಡವಳಿಕೆ ಹಾಗೂ ಪ್ರತಿಯೊಬ್ಬರೊಂದಿಗೂ ಹೊಂದಿದ್ದ ಉತ್ತಮ ಬಾಂಧವ್ಯವನ್ನು ಸ್ಮರಿಸಿ, ವಿದ್ಯಾರ್ಥಿಯ ಮುಂದಿನ ಭವಿಷ್ಯಕ್ಕೆ ಶುಭ ಹಾರೈಸಿದರು.

ಸನ್ಮಾನ ಸ್ವೀಕರಿಸಿ ಮಾತನಾಡಿದ ಪ್ರೀತಮ್ ಚೌಹಾನ್, ತಾನು ಕಲಿತ ಶಾಲೆಯ ಜೊತೆಗೆ ಅರ್ಜುನ ಕಾಲೇಜಿನಲ್ಲಿ ಕಳೆದ ದಿನಗಳನ್ನು ನೆನಪಿಸಿಕೊಂಡರು. ಶಿಕ್ಷಕರು, ಶಿಕ್ಷಕೇತರ ಸಿಬ್ಬಂದಿ ನೀಡಿದ ಪ್ರೋತ್ಸಾಹ, ತಂದೆ-ತಾಯಿಯ ಬೆಂಬಲ ಹಾಗೂ ಸಂಸ್ಥೆಯ ಉತ್ತಮ ವ್ಯವಸ್ಥೆಯೇ ತನ್ನ ಈ ಸಾಧನೆಗೆ ಕಾರಣ ಎಂದು ಕೃತಜ್ಞತೆ ಸಲ್ಲಿಸಿದರು. ಜೊತೆಗೆ, ಶಾಲೆಯ ಇತರ ವಿದ್ಯಾರ್ಥಿಗಳಿಗೆ ಪ್ರೇರಣೆಯಾಗುವಂತಹ ಮಾತುಗಳನ್ನು ಆಡಿದರು. ಈ ಕಾರ್ಯಕ್ರಮದಲ್ಲಿ ಅರ್ಜುನ ಸಂಸ್ಥೆಯ ನಿರ್ದೇಶಕರು, ಪ್ರಾಚಾರ್ಯರು, ವಿವಿಡಿ ಸಂಸ್ಥೆಯ ಶಿಕ್ಷಕ ವೃಂದ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
