ಮನೆಯೊಳಗೆ ಹಾಯಾಗಿ ನಿದ್ರಿಸುತ್ತಿದ್ದ ವೃದ್ಧೆಯೊಬ್ಬರ ಪಾಲಿಗೆ ಆ ಕ್ಷಣ ಅಕ್ಷರಶಃ ಉಸಿರು ಬಿಗಿಹಿಡಿಯುವಂತಿತ್ತು. ನೋಡನೋಡುತ್ತಿದ್ದಂತೆ ಮನೆಯ ಛಾವಣಿ ಸೀಳಿಕೊಂಡು ಬೃಹತ್ ಮರದ ಕೊಂಬೆಯೊಂದು ಆಕೆಯ ತಲೆ ಮೇಲೆಯೇ ಅಪ್ಪಳಿಸಿದ ಘಟನೆ ದಾಂಡೇಲಿ ನಗರದ ಹಳಿಯಾಳ ರಸ್ತೆಯ ನಿವಾಸದಲ್ಲಿ ಶನಿವಾರ ಸಂಭವಿಸಿದೆ.
ಘಟನೆಯಲ್ಲಿ ತೀವ್ರವಾಗಿ ಗಾಯಗೊಂಡ ವೃದ್ಧೆಯನ್ನು ಬಿ.ಬಿ. ಜಹೇರಾ ಎಂದು ಗುರುತಿಸಲಾಗಿದೆ. ಮನೆಯ ಹಿಂಭಾಗದಲ್ಲಿದ್ದ ಅಪಾಯಕಾರಿ ಮರದ ದೊಡ್ಡ ಕೊಂಬೆಯೊಂದು ಏಕಾಏಕಿ ಮುರಿದು, ಶೀಟ್ ಛಾವಣಿಯನ್ನು ಪುಡಿಪುಡಿ ಮಾಡಿ ಒಳಗಿದ್ದ ಜಹೇರಾ ಅವರ ತಲೆಗೆ ಸೀದಾ ಬಿದ್ದಿದೆ. ಪರಿಣಾಮವಾಗಿ ಆಕೆಯ ತಲೆಗೆ ತೀವ್ರ ಗಾಯಗಳಾಗಿದ್ದು, ರಕ್ತಸಿಕ್ತಗೊಂಡ ಆಕೆಯನ್ನು ಕುಟುಂಬಸ್ಥರು ತಕ್ಷಣವೇ ನಗರದ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದ್ದಾರೆ.

ಈ ಘಟನೆಯಿಂದ ರೊಚ್ಚಿಗೆದ್ದ ಗಾಯಾಳುವಿನ ಪುತ್ರ ಮೆಹಬೂಬ್ ಕಾಕರ ಅರಣ್ಯ ಇಲಾಖೆಯ ಬೇಜವಾಬ್ದಾರಿಯನ್ನು ತೀವ್ರವಾಗಿ ತೊಳೆಯ್ದಿದ್ದಾರೆ. ಸುಮಾರು 5-6 ತಿಂಗಳ ಹಿಂದೆಯೇ ಈ ಮರದಿಂದ ಅಪಾಯವಿದೆ ಎಂದು ಇಲಾಖೆಗೆ ಲಿಖಿತ ಮನವಿ ನೀಡಿದ್ದೆವು. ಮರ ತೆರವುಗೊಳಿಸಿ ಎಂದು ಎಷ್ಟೇ ಗೋಗರೆದರೂ ಅಧಿಕಾರಿಗಳು ಕಣ್ಣಿದ್ದು ಕುರುಡರಂತೆ ಕುಳಿತರು. ಅವರ ಈ ನಿರ್ಲಕ್ಷ್ಯವೇ ಇಂದು ನನ್ನ ತಾಯಿಯ ಜೀವವನ್ನು ಕಂಟಕಕ್ಕೆ ತಳ್ಳಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇಷ್ಟೇ ಅಲ್ಲದೆ, ಮನೆಯ ಪಕ್ಕದಲ್ಲೇ ಇರುವ ತೆಂಗಿನ ಮರವೂ ಛಾವಣಿಗೆ ಹಾನಿ ಮಾಡುತ್ತಿದ್ದು, ಸಣ್ಣ ಮಕ್ಕಳು ಹಾಗೂ ವಯೋವೃದ್ಧರಿರುವ ಈ ಮನೆಯಲ್ಲಿ ಮುಂದೆ ಇನ್ನೇನಾದರೂ ಅನಾಹುತ ಸಂಭವಿಸಿದರೆ ಅದಕ್ಕೆ ಯಾರು ಹೊಣೆ ಎಂದು ಅವರು ಪ್ರಶ್ನಿಸಿದ್ದಾರೆ. ಸಂಬಂಧಪಟ್ಟ ಅಧಿಕಾರಿಗಳು ಇನ್ಮುಂದೆಯಾದರೂ ನಿದ್ರೆಯಿಂದ ಎದ್ದು, ಅಪಾಯಕಾರಿ ಸ್ಥಿತಿಯಲ್ಲಿರುವ ಮರಗಳನ್ನು ತಕ್ಷಣ ತೆರವುಗೊಳಿಸಬೇಕೆಂದು ಅವರು ಆಗ್ರಹಿಸಿದ್ದಾರೆ.
