ಉತ್ತರ ಕನ್ನಡ ಜಿಲ್ಲೆಯ ಮುಂಡಗೋಡ ಗ್ರಾಮೀಣ ಭಾಗದ ಬಡಜನರ ಆರ್ಥಿಕ ಭದ್ರತೆಗಾಗಿ ಜಾರಿಗೆ ತರಲಾದ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ (ನರೇಗಾ) ನಿಯಮಾವಳಿಗಳ ಪ್ರಕಾರ ಸಿಗಬೇಕಾದ ‘ನಿರುದ್ಯೋಗ ಭತ್ಯೆ’ ಇಂದಿಗೂ ಸಕಾಲಕ್ಕೆ ತಲುಪಿಲ್ಲ ಎಂಬ ದೂರುಗಳು ಕೇಳಿಬರುತ್ತಿವೆ. ಮುಂಡಗೋಡ ತಾಲೂಕಿನ ವಿವಿಧ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಉದ್ಯೋಗ ಕೋರಿ ಅರ್ಜಿ ಸಲ್ಲಿಸಿದರೂ ಸೂಕ್ತ ಸಮಯದಲ್ಲಿ ಕೆಲಸ ಸಿಗದೇ, ನಿಯಮಗಳ ಪ್ರಕಾರ ದೊರೆಯಬೇಕಾದ ಭತ್ಯೆಯೂ ಕೈಸೇರದೆ ನೂರಕ್ಕೂ ಹೆಚ್ಚು ಕಾರ್ಮಿಕರು ಕಾಯುವಂತಾಗಿದೆ. ಉದ್ಯೋಗ ಖಾತರಿ ಯೋಜನೆಯ ನವೀಕೃತ ಹಂತದಲ್ಲೂ ಹಳೆಯ ಬಾಕಿಗಳು ಇತ್ಯರ್ಥವಾಗದಿರುವುದು ಶ್ರಮಿಕರ ಕಳವಳಕ್ಕೆ ಕಾರಣವಾಗಿದೆ. 2025-26ನೇ ಸಾಲಿನಲ್ಲಿ ತಾಲೂಕಿನ ವಿವಿಧ ಗ್ರಾಪಂ ವ್ಯಾಪ್ತಿಯಲ್ಲಿ ಅರ್ಜಿ ಸಲ್ಲಿಸಿದ್ದ ಸುಮಾರು 105 ಕೂಲಿ ಕಾರ್ಮಿಕರಿಗೆ ಒಟ್ಟು 1,22,840 ರೂಪಾಯಿಗಳ ಭತ್ಯೆ ಪಾವತಿಯಾಗುವುದು ಬಾಕಿಯಿದೆ.
ವಿವಿಧ ಗ್ರಾಮ ಪಂಚಾಯತಿಗಳ ವ್ಯಾಪ್ತಿಯಲ್ಲಿ ಈ ಬಾಕಿ ಮೊತ್ತ ಹಂಚಿಕೆಯಾಗಿದ್ದು, ಹುನಗುಂದ ಗ್ರಾಪಂ ವ್ಯಾಪ್ತಿಯಲ್ಲಿ ಗರಿಷ್ಠ 45 ಕಾರ್ಮಿಕರಿಗೆ 57,540 ರೂಪಾಯಿ ತಲುಪಬೇಕಿದೆ. ಉಳಿದಂತೆ ಚವಡಳ್ಳಿ ಗ್ರಾಪಂನ 13 ಕಾರ್ಮಿಕರಿಗೆ 14,800 ರೂಪಾಯಿ, ಬೇಡಸಗಾವ್ ಗ್ರಾಪಂನ 12 ಕಾರ್ಮಿಕರಿಗೆ 14,430 ರೂಪಾಯಿ, ಮಳಗಿ ಗ್ರಾಪಂನ 11 ಕಾರ್ಮಿಕರಿಗೆ 13,690 ರೂಪಾಯಿ, ಕಾತೂರ ಗ್ರಾಪಂನ 11 ಕಾರ್ಮಿಕರಿಗೆ 12,765 ರೂಪಾಯಿ, ಗುಂಜಾವತಿ ಗ್ರಾಪಂನ 10 ಕಾರ್ಮಿಕರಿಗೆ 10,915 ರೂಪಾಯಿ ಹಾಗೂ ಬಾಚಣಿಕೆ ಗ್ರಾಪಂನ 3 ಕಾರ್ಮಿಕರಿಗೆ 3,700 ರೂಪಾಯಿ ಭತ್ಯೆ ಪಾವತಿಯಾಗಬೇಕಿದೆ.
ನಿಯಮಗಳ ಪ್ರಕಾರ ಕೆಲಸ ಕೋರಿ ಅರ್ಜಿ ಸಲ್ಲಿಸಿದ 15 ದಿನಗಳ ಒಳಗೆ ಕೆಲಸ ನೀಡದಿದ್ದರೆ ನಿರುದ್ಯೋಗ ಭತ್ಯೆ ನೀಡುವುದು ಕಡ್ಡಾಯವಾಗಿದೆ. ಆದರೆ ಕಾಯಿದೆಯ ನಿಯಮಾವಳಿಗಳು ಹಾಗೂ ಹಕ್ಕುಗಳ ಬಗ್ಗೆ ಸೂಕ್ತ ಜಾಗೃತಿಯ ಕೊರತೆಯಿಂದಾಗಿ ಗ್ರಾಮೀಣ ಬಡ ಕಾರ್ಮಿಕರು ತಮ್ಮ ಹಕ್ಕಿನ ಸೌಲಭ್ಯದಿಂದ ದೂರ ಉಳಿಯುವಂತಾಗಿದೆ. ಪ್ರಸ್ತುತ ಗ್ರಾಮ ಪಂಚಾಯತಿಗಳಲ್ಲಿ ಆಡಳಿತಾಧಿಕಾರಿಗಳ ಆಡಳಿತ ಜಾರಿಯಲ್ಲಿದ್ದು, ಸಂಬಂಧಪಟ್ಟ ತಾಲೂಕು ಮತ್ತು ಜಿಲ್ಲಾ ಮಟ್ಟದ ಅಧಿಕಾರಿಗಳು ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಬೇಕಿದೆ. ಸಾರ್ವಜನಿಕ ಹಿತದೃಷ್ಟಿಯಿಂದ ಹಾಗೂ ಯೋಜನೆಯ ಮೂಲ ಉದ್ದೇಶ ಈಡೇರುವಂತೆ, ಬಾಕಿ ಇರುವ 1.22 ಲಕ್ಷಕ್ಕೂ ಹೆಚ್ಚಿನ ನಿರುದ್ಯೋಗ ಭತ್ಯೆಯನ್ನು ತಕ್ಷಣವೇ ಅರ್ಹ ಕಾರ್ಮಿಕರ ಬ್ಯಾಂಕ್ ಖಾತೆಗಳಿಗೆ ಜಮಾ ಮಾಡಲು ಕ್ರಮ ಕೈಗೊಳ್ಳಬೇಕೆಂಬ ಒತ್ತಾಯ ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿದೆ.
