ಅಪ್ರಾಪ್ತ ವಯಸ್ಸಿನ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಗಂಭೀರ ಅಪರಾಧಕ್ಕಾಗಿ ಕುಮಟಾ ತಾಲೂಕಿನ ಹೊಸಕಟ್ಟಾ ಗ್ರಾಮದ ತೊರೆಗಜನಿ ನಿವಾಸಿ ಗೋವಿಂದ ಚೌಡು ಹರಿಕಂತ್ರ (48) ಎಂಬಾತನಿಗೆ 20 ವರ್ಷಗಳ ಜೈಲು ಶಿಕ್ಷೆ ಹಾಗೂ 1 ಲಕ್ಷ ರೂ. ದಂಡ ವಿಧಿಸಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ತೀರ್ಪು ನೀಡಿದೆ. ಉತ್ತರ ಕನ್ನಡ ಜಿಲ್ಲೆಯ ತ್ವರಿತಗತಿ ವಿಶೇಷ ನ್ಯಾಯಾಲಯದ ನ್ಯಾಯಾಧೀಶರಾದ ಪ್ರತಿಭಾ ಬಂಡೂರಾವ್ ಕುಲಕರ್ಣಿಯವರು ಈ ಮಹತ್ವದ ಆದೇಶವನ್ನು ಹೊರಡಿಸಿದ್ದಾರೆ.
2022 ರಲ್ಲಿ ನಡೆದಿದ್ದ ಈ ಘಟನೆಗೆ ಸಂಬಂಧಿಸಿದಂತೆ ಆರೋಪಿಯ ವಿರುದ್ಧ ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಾಗಿತ್ತು. ಪ್ರಕರಣದ ತನಿಖೆಯನ್ನು ಕೈಗೆತ್ತಿಕೊಂಡಿದ್ದ ಅಂದಿನ ಪೊಲೀಸ್ ಇನ್ಸ್‌ಪೆಕ್ಟರ್ (ಪಿ.ಐ) ವಸಂತ ಆಚಾರ್ ಅವರು ಸಮಗ್ರ ತನಿಖೆ ನಡೆಸಿ, ಅಗತ್ಯ ಸಾಕ್ಷ್ಯಾಧಾರಗಳೊಂದಿಗೆ ನ್ಯಾಯಾಲಯಕ್ಕೆ ದೋಷಾರೋಪಣೆ ಪಟ್ಟಿಯನ್ನು ಸಲ್ಲಿಸಿದ್ದರು. ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಲಯವು ಸಲ್ಲಿಸಲಾದ ಸಾಕ್ಷಿ ಪುರಾವೆಗಳನ್ನು ಪರಿಶೀಲಿಸಿ, ಆರೋಪಿಯ ಮೇಲಿನ ಅಪರಾಧ ಸಾಬೀತಾದ ಹಿನ್ನೆಲೆಯಲ್ಲಿ ಈ ಶಿಕ್ಷೆಯನ್ನು ಪ್ರಕಟಿಸಿದೆ. ನ್ಯಾಯಾಂಗ ಹೋರಾಟದಲ್ಲಿ ಸರ್ಕಾರದ ಪರವಾಗಿ ವಿಶೇಷ ಸಾರ್ವಜನಿಕ ಅಭಿಯೋಜಕರಾದ ಗುರುಶಾಂತಯ್ಯ ಕುರ್ಡಿಕೇರಿ ಅವರು ಅತ್ಯಂತ ಸಮರ್ಥವಾಗಿ ವಾದ ಮಂಡಿಸಿದ್ದರು. ಪೊಲೀಸ್ ಇಲಾಖೆಯ ದಕ್ಷ ತನಿಖೆ ಮತ್ತು ನ್ಯಾಯಾಲಯದ ಈ ಕಠಿಣ ತೀರ್ಪಿನ ಮೂಲಕ ನೊಂದ ಅಪ್ರಾಪ್ತ ಬಾಲಕಿಗೆ ಕೊನೆಗೂ ಸೂಕ್ತ ನ್ಯಾಯ ದೊರೆತಂತಾಗಿದೆ.
