ಕಾರವಾರ: ಪ್ರೇಮ ಆಶ್ರಮ ಚ್ಯಾರಿಟೆಬಲ್ ಟ್ರಸ್ಟ್ ಅಮದಳ್ಳಿ ವತಿಯಿಂದ ಟ್ರಸ್ಟ್ ಅಡಿಯಲ್ಲಿ ನಡೆಯುತ್ತಿರುವ ಪ್ರೇಮ ಆಶ್ರಮ ಬಾಲಕಿಯರ ವಸತಿ ನಿಲಯದಲ್ಲಿ SSLC ಪರೀಕ್ಷೆಯಲ್ಲಿ ಸಾಧನೆ ಮಾಡಿದ ವಿದ್ಯಾರ್ಥಿನಿಯರಿಗೆ ಮತ್ತು ಅವರ ಸಾಧನೆಗೆ ಪ್ರೇರಕ ಶಕ್ತಿಯಾದ ಗುರುಗಳಿಗೆ ಗುರುಪೂರ್ಣಿಮೆ ಅಂಗವಾಗಿ ಸನ್ಮಾನ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.
ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ವಿಜ್ಞಾನಿ ಡಾ. ಅನೀಲ ಗಾಂವಕರ್ ಅವರು, “ಶಿಕ್ಷಣದೊಂದಿಗೆ ಸಂಸ್ಕಾರವೂ ಅಗತ್ಯ. ಕಷ್ಟಪಟ್ಟು ಓದಿದ ಪ್ರತಿಯೊಬ್ಬ ಮಗುವಿನ ಸಾಧನೆಯ ಹಿಂದೆ ಗುರುಗಳು ಮತ್ತು ಪೋಷಕರ ತ್ಯಾಗವಿದೆ. ಈ ಸಾಧನೆಯನ್ನು ಜೀವನದ ಮೊದಲ ಮೆಟ್ಟಿಲು ಎಂದು ಭಾವಿಸಿ ಮುಂದಿನ ಗುರಿಗಳತ್ತ ಹೆಜ್ಜೆ ಹಾಕಿ” ಎಂದು ಮಕ್ಕಳಿಗೆ ಕಿವಿಮಾತು ಹೇಳಿದರು.
ಟ್ರಸ್ಟಿ ಪ್ರಕಾಶ ಗಾಂವಕರ್ ಅವರು ಮಕ್ಕಳನ್ನು ಉದ್ದೇಶಿಸಿ ಮಾತನಾಡಿ, “ನಿಮ್ಮ ಶ್ರಮಕ್ಕೆ ಇಂದು ಫಲ ಸಿಕ್ಕಿದೆ. ಮುಂದೆಯೂ ಇದೇ ಉತ್ಸಾಹದಿಂದ ಓದಿ, ಸಮಾಜಕ್ಕೆ ಉತ್ತಮ ಕೊಡುಗೆ ನೀಡುವ ನಾಗರಿಕರಾಗಿ” ಎಂದು ಹಾರೈಸಿದರು.
ಹಾಸ್ಟೆಲ್ ಉಸ್ತುವಾರಿ ಹಾಗೂ ಟ್ರಸ್ಟಿ ಶ್ಯಾಮಕುಮಾರ ದೇಸಾಯಿ ಅವರು ಮಾತನಾಡಿ, ಹಾಸ್ಟೆಲ್ ವಿದ್ಯಾರ್ಥಿಗಳ ಶಿಸ್ತು, ಪರಿಶ್ರಮ ಮತ್ತು ಸಾಧನೆಯನ್ನು ಮುಕ್ತವಾಗಿ ಪ್ರಶಂಸಿಸಿದರು. “ಸೀಮಿತ ಸೌಲಭ್ಯಗಳ ನಡುವೆಯೂ ಇಷ್ಟು ಉತ್ತಮ ಫಲಿತಾಂಶ ತಂದಿರುವುದು ಹೆಮ್ಮೆಯ ವಿಷಯ” ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಟ್ರಸ್ಟ್ ಅಧ್ಯಕ್ಷ ಸೀತಾರಾಮ ಗಾಂವಕರ್ ಅವರು, ಟ್ರಸ್ಟ್ ಬೆಳೆದು ಬಂದ ದಾರಿ ಮತ್ತು ಬಾಲಕಿಯರ ವಸತಿ ನಿಲಯವನ್ನು ಆರಂಭಿಸಿದ ಉದ್ದೇಶವನ್ನು ವಿವರಿಸಿದರು. “ಆರ್ಥಿಕವಾಗಿ ಹಿಂದುಳಿದ ಪ್ರತಿಭಾವಂತ ಮಕ್ಕಳಿಗೆ ವಿದ್ಯಾಭ್ಯಾಸಕ್ಕೆ ಆಶ್ರಯ ನೀಡುವುದೇ ನಮ್ಮ ಗುರಿ. ಇಂದಿನ ಸಾಧಕ ಮಕ್ಕಳನ್ನು ನೋಡಿ ಆ ಗುರಿ ಈಡೇರಿದ ತೃಪ್ತಿಯಾಗಿದೆ” ಎಂದು ಹೇಳಿ ಎಲ್ಲಾ ಸಾಧಕ ವಿದ್ಯಾರ್ಥಿನಿಯರಿಗೂ ಅಭಿನಂದನೆ ಸಲ್ಲಿಸಿದರು.
ಕಾರ್ಯಕ್ರಮದಲ್ಲಿ ಸಾಧಕ ವಿದ್ಯಾರ್ಥಿನಿಯರಾದ ಅಶ್ವಿತಾ ದೇಸಾಯಿ,ನಾಗರತ್ನಾ ವೇಳಿಫ,ಶ್ರದ್ಧಾ ಮಿರಾಶಿ ಮತ್ತು ಮಾರ್ಗದರ್ಶನ ನೀಡಿದ ಮುಖ್ಯಾಧ್ಯಾಪಕರಾದ ಡಾ.ಗಣೇಶ ಬಿಷ್ಟಣ್ಣನವರಿಗೆ ಸ್ಮರಣಿಕೆ ನೀಡಿ ಗೌರವಿಸಲಾಯಿತು.ಟ್ರಸ್ಟ್ ಪದಾಧಿಕಾರಿಗಳು, ಪೋಷಕರು ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಮುಖ್ಯಾಧ್ಯಾಪಕರಾದ ಡಾ.ಗಣೇಶ ಬಿಷ್ಟಣ್ಣನವರ ಸ್ವಾಗತಿಸಿ,ನಿರೂಪಿಸಿದರು,ಶಿಕ್ಷಕ ಸಂತೋಷ ಕಾಂಬಳೆ ವಂದಿಸಿದರು.
