ಸೆಪ್ಟೆಂಬರ್ 10, 2026
ಗುರುವಾರ

ನಮ್ಮನ್ನು ಅನುಸರಿಸಿ

Uttara-Kannada

ಯಶಪಾಲ್ ಸುವರ್ಣ ಹೇಳಿಕೆ ಸಂವಿಧಾನ ವಿರೋಧಿ: ಕಾಂಗ್ರೆಸ್ ನಾಯಕ ಸೂರಜ್ ನಾಯ್ಕ ತೀವ್ರ ಆಕ್ರೋಶ

Pakka News Web • 29 ಜುಲೈ 2026,

ಕಾರವಾರ: ರಾಹುಲ್ ಗಾಂಧಿ ಹಾಗೂ ಅವರ ಕುಟುಂಬದ ವಿರುದ್ಧ ಉಡುಪಿ ಶಾಸಕ ಯಶಪಾಲ್ ಸುವರ್ಣ ಅವರು ನೀಡಿದ್ದಾರೆನ್ನಲಾದ ಹೇಳಿಕೆಯು ತೀವ್ರ ಅಸಂವಿಧಾನಿಕ, ಖಂಡನೀಯ ಹಾಗೂ ದ್ವೇಷದ ರಾಜಕಾರಣದ ದ್ಯೋತಕವಾಗಿದೆ ಎಂದು ಅಖಿಲ ಭಾರತ ಕಾಂಗ್ರೆಸ್ ಸೇವಾದಳದ ಸಾಮಾಜಿಕ ಮಾಧ್ಯಮ ಮತ್ತು ಪ್ರಚಾರ ಸಮಿತಿಯ ರಾಷ್ಟ್ರೀಯ ಸಂಯೋಜಕರಾದ ಸೂರಜ್ ಜಿ. ನಾಯ್ಕ ತೀವ್ರ ವಾಗ್ದಾಳಿ ನಡೆಸಿದ್ದಾರೆ.

ರಾಹುಲ್ ಗಾಂಧಿ ಕುಟುಂಬವನ್ನು ಬಾಬರಿ ಮಸೀದಿಯಂತೆ ಧ್ವಂಸ ಮಾಡುತ್ತೇವೆ ಎಂಬ ಹೇಳಿಕೆ ನೀಡಿರುವುದು ಬಿಜೆಪಿ ನಾಯಕರ ಭ್ರಷ್ಟ ರಾಜಕೀಯ ಸಂಸ್ಕೃತಿಯನ್ನು ಬಯಲುಗೆಳೆದಿದೆ ಎಂದು ಪ್ರಕಟಣೆಯಲ್ಲಿ ಹೇಳಿರುವ ಅವರು, ಪ್ರಜಾಪ್ರಭುತ್ವದಡಿಯಲ್ಲಿ ಸೈದ್ಧಾಂತಿಕವಾಗಿ ಎದುರಿಸಲಾಗದವರು ಹೀಗೆ ಬೆದರಿಕೆ ಹಾಗೂ ದ್ವೇಷದ ಭಾಷೆಯನ್ನು ಬಳಸುತ್ತಾರೆ.

ಆದರೆ ಗಾಂಧಿ ಕುಟುಂಬದ ಇತಿಹಾಸವು ತ್ಯಾಗ, ಸೇವೆ ಹಾಗೂ ದೇಶಭಕ್ತಿಯಿಂದ ಕೂಡಿದ್ದು, ಇಂತಹ ಬೆದರಿಕೆಗಳಿಗೆ ಅವರು ಹೆದರುವುದಿಲ್ಲ ಎಂದು ತಿರುಗೇಟು ನೀಡಿದ್ದಾರೆ. ದೇಶದ ಏಕತೆಗಾಗಿ ಇಂದಿರಾ ಗಾಂಧಿ ಹಾಗೂ ರಾಜೀವ್ ಗಾಂಧಿ ಅವರು ತಮ್ಮ ಪ್ರಾಣವನ್ನೇ ಅರ್ಪಿಸಿದ್ದರೆ, ಸೋನಿಯಾ ಗಾಂಧಿಯವರು ಅಧಿಕಾರಕ್ಕಿಂತ ದೇಶಹಿತವೇ ಮುಖ್ಯವೆಂದು ಭಾವಿಸಿ ಉದ್ಯೋಗ ಖಾತ್ರಿ, ಉಚಿತ ಆಹಾರ ಭದ್ರತೆ ಮತ್ತು ಆರ್‌ಟಿಐನಂತಹ ಜನಪರ ಯೋಜನೆಗಳನ್ನು ತಂದಿದ್ದಾರೆ ಎಂದು ಸ್ಮರಿಸಿದ್ದಾರೆ.

ಅಲ್ಲದೆ ರಾಹುಲ್ ಗಾಂಧಿ ಹಾಗೂ ಪ್ರಿಯಾಂಕಾ ಗಾಂಧಿಯವರು ರೈತರು, ಕಾರ್ಮಿಕರು, ಯುವಜನರು ಮತ್ತು ಮಹಿಳೆಯರ ಪರವಾಗಿ ಸದಾ ಧ್ವನಿ ಎತ್ತುತ್ತಾ ‘ಭಾರತ್ ಜೋಡೋ’ ಯಾತ್ರೆಗಳ ಮೂಲಕ ಜನರ ಕಷ್ಟಗಳಿಗೆ ಸ್ಪಂದಿಸುತ್ತಿದ್ದಾರೆ. ಆದರೆ ಯಶಪಾಲ್ ಸುವರ್ಣ ಅವರು ಯಾವತ್ತಾದರೂ ರೈತರ, ನಿರುದ್ಯೋಗಿಗಳ ಅಥವಾ ಸಂಕಷ್ಟದಲ್ಲಿರುವ ವಿದ್ಯಾರ್ಥಿಗಳ ಪರವಾಗಿ ಹೋರಾಟ ನಡೆಸಿದ್ದಾರೆಯೇ ಎಂದು ಸುರಾಜ್ ನಾಯಕ್ ಪ್ರಶ್ನಿಸಿದ್ದಾರೆ.

ಪ್ರಜಾಪ್ರಭುತ್ವದಲ್ಲಿ ಭಿನ್ನಾಭಿಪ್ರಾಯಗಳು ಸಹಜ, ಆದರೆ ಸಂವಿಧಾನದ ಚೌಕಟ್ಟು ಮೀರಿ ಧ್ವಂಸ ಮಾಡುತ್ತೇವೆ ಎನ್ನುವ ದ್ವೇಷದ ಭಾಷೆಯನ್ನು ಕರ್ನಾಟಕದ ಜನತೆ ಎಂದಿಗೂ ಒಪ್ಪುವುದಿಲ್ಲ. ಗಾಂಧಿ ಕುಟುಂಬ ಹಾಗೂ ಕಾಂಗ್ರೆಸ್ ಪಕ್ಷವು ಬೆದರಿಕೆಗಳಿಗೆ ಜಗ್ಗದೆ ಜನರ ಹಕ್ಕುಗಳಿಗಾಗಿ ಹೋರಾಟ ಮುಂದುವರಿಸಲಿದ್ದು, ಇಂತಹ ದ್ವೇಷದ ರಾಜಕಾರಣಕ್ಕೆ ದೇಶದ ಜನತೆಯೇ ಪ್ರಜಾಸತ್ತಾತ್ಮಕವಾಗಿ ತಕ್ಕ ಉತ್ತರ ನೀಡಲಿದ್ದಾರೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


ಪ್ರಚಾರ W26
ಜಾಹೀರಾತು ಸ್ಥಳ ಲಭ್ಯವಿದೆ
300x250