ಸೆಪ್ಟೆಂಬರ್ 10, 2026
ಗುರುವಾರ

ನಮ್ಮನ್ನು ಅನುಸರಿಸಿ

Uttara-Kannada

ಕದಂಬ ನೌಕಾನೆಲೆಯಲ್ಲಿ ಕನ್ನಡಕ್ಕೆ ನಿರ್ಲಕ್ಷ್ಯ: ಕರವೇ 15 ದಿನಗಳ ಗಡುವು

Pakka News Web • 1 ಆಗಸ್ಟ್ 2026,

ಕಾರವಾರ:ಇಲ್ಲಿನ ಅರ್ಗಾದಲ್ಲಿರುವ ಭಾರತೀಯ ನೌಕಾಪಡೆಯ ‘ಸೀಬರ್ಡ್’ ಕದಂಬ ನೌಕಾನೆಲೆಯ ನೂತನ ಮುಖ್ಯದ್ವಾರದಲ್ಲಿ ಕನ್ನಡ ನಾಮಫಲಕವನ್ನು ಅಳವಡಿಸದೆ ರಾಜ್ಯದ ಅಧಿಕೃತ ಭಾಷೆಯನ್ನು ಸಂಪೂರ್ಣವಾಗಿ ಕಡೆಗಣಿಸಲಾಗಿದೆ ಎಂದು ಆರೋಪಿಸಿ, ಕರ್ನಾಟಕ ರಕ್ಷಣಾ ವೇದಿಕೆ (ನಾರಾಯಣ ಗೌಡ ಬಣ) ಜಿಲ್ಲಾಡಳಿತದ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿ ತೀವ್ರ ಆಕ್ರೋಶ ವ್ಯಕ್ತಪಡಿಸಿದೆ.

ಕನ್ನಡ ಭಾಷೆಯ ಆಧಾರದ ಮೇಲೆಯೇ ಕರ್ನಾಟಕ ರಾಜ್ಯ ರಚನೆಯಾಗಿದ್ದು, 1963ರ ಅಧಿಕೃತ ಭಾಷಾ ಕಾಯ್ದೆ ಹಾಗೂ ಸರ್ಕಾರದ ವಿವಿಧ ಆದೇಶಗಳ ಪ್ರಕಾರ ರಾಜ್ಯದ ವ್ಯಾಪ್ತಿಯಲ್ಲಿರುವ ಸಾರ್ವಜನಿಕ ಸಂಪರ್ಕದ ಕಚೇರಿಗಳು ಮತ್ತು ಸಂಸ್ಥೆಗಳ ನಾಮಫಲಕಗಳಲ್ಲಿ ಕನ್ನಡಕ್ಕೆ ಪ್ರಮುಖ ಸ್ಥಾನ ನೀಡುವುದು ಕಡ್ಡಾಯವಾಗಿದೆ. 

ಜೊತೆಗೆ ಸಂವಿಧಾನದ 350ಎ ಮತ್ತು 351ನೇ ವಿಧಿಗಳು ಸ್ಥಳೀಯ ಭಾಷೆಗಳ ಸಂರಕ್ಷಣೆಗೆ ಒತ್ತು ನೀಡುತ್ತವೆ. ಕೇಂದ್ರ ಸರ್ಕಾರದ ಸಂಸ್ಥೆಗಳು ಕಾರ್ಯನಿರ್ವಹಿಸುವ ರಾಜ್ಯದ ಭಾಷೆಗೆ ಗೌರವ ನೀಡುವುದು ಒಕ್ಕೂಟ ವ್ಯವಸ್ಥೆಯ ಮೂಲ ಆಶಯವಾಗಿದೆ ಎಂದು ವೇದಿಕೆ ನೆನಪಿಸಿದೆ.

ಕರ್ನಾಟಕದ ಪ್ರಪ್ರಥಮ ರಾಜವಂಶವಾದ ‘ಕದಂಬ’ರ ಹೆಸರು ಈ ನೌಕಾನೆಲೆಗಿದೆ. ಕದಂಬ ಹೆಸರು ನಾಡಿನ ಇತಿಹಾಸ, ಸಂಸ್ಕೃತಿ ಮತ್ತು ಸ್ವಾಭಿಮಾನದ ಸಂಕೇತವಾಗಿದೆ. ನೌಕಾಪಡೆಯ ಸೇವೆಯ ಬಗ್ಗೆ ದೇಶಕ್ಕೆ ಅಪಾರ ಗೌರವವಿದ್ದರೂ, ಕನ್ನಡಿಗರ ಹೆಮ್ಮೆಯ ‘ಕದಂಬ’ ಹೆಸರನ್ನು ಬಳಸಿಕೊಂಡು ಅದೇ ಮುಖ್ಯದ್ವಾರದಲ್ಲಿ ಕನ್ನಡಕ್ಕೆ ಸ್ಥಾನ ನೀಡದಿರುವುದು ತೀವ್ರ ವಿಪರ್ಯಾಸದ ಸಂಗತಿಯಾಗಿದೆ. ಇದು ಕನ್ನಡಿಗರನ್ನು ಎರಡನೇ ದರ್ಜೆಯ ಪ್ರಜೆಗಳಂತೆ ಕಾಣುವಂತೆ ಮಾಡಿದೆ ಎಂದು ಕರವೇ ಬೇಸರ ವ್ಯಕ್ತಪಡಿಸಿದೆ.

ಬೃಹತ್ ಹೋರಾಟದ ಎಚ್ಚರಿಕೆ: ಜಿಲ್ಲಾಡಳಿತವು ತಕ್ಷಣವೇ ಭಾರತೀಯ ನೌಕಾಪಡೆ ಹಾಗೂ ರಕ್ಷಣಾ ಸಚಿವಾಲಯದ ಅಧಿಕಾರಿಗಳೊಂದಿಗೆ ಸಮನ್ವಯ ಸಾಧಿಸಿ, ನೌಕಾನೆಲೆಯ ಮುಖ್ಯದ್ವಾರ ಸೇರಿದಂತೆ ಎಲ್ಲಾ ಸೂಚನಾ ಫಲಕಗಳಲ್ಲಿ ಕನ್ನಡವನ್ನು ಪ್ರಮುಖವಾಗಿ ಅಳವಡಿಸಲು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಲಾಗಿದೆ.

ಈ ಮನವಿ ಸ್ವೀಕರಿಸಿದ 15 ದಿನಗಳ ಒಳಗಾಗಿ ಕನ್ನಡ ನಾಮಫಲಕ ಅಳವಡಿಸದಿದ್ದರೆ, ಜಿಲ್ಲಾಡಳಿತ ಕಚೇರಿಯ ಎದುರು ಧರಣಿ ಹಾಗೂ ಸೀಬರ್ಡ್ ಮುಖ್ಯದ್ವಾರದ ಬಳಿ ಬೃಹತ್ ಕನ್ನಡ ಜಾಗೃತಿ ಚಳವಳಿ ಸೇರಿದಂತೆ ಕಾನೂನುಬದ್ಧ ಹೋರಾಟ ಹಮ್ಮಿಕೊಳ್ಳಲಾಗುವುದು. ಆ ಸಂದರ್ಭದಲ್ಲಿ ಉಂಟಾಗುವ ಕಾನೂನು-ಸುವ್ಯವಸ್ಥೆಯ ಕುಸಿತಕ್ಕೆ ಸಂಬಂಧಪಟ್ಟ ಅಧಿಕಾರಿಗಳ ನಿರ್ಲಕ್ಷ್ಯವೇ ನೇರ ಹೊಣೆ ಎಂದು ಸಂಘಟನೆ ಎಚ್ಚರಿಸಿದೆ.

ಕರವೇ ಜಿಲ್ಲಾಧ್ಯಕ್ಷ ಅರುಣ, ಹರ್ಕಡೆ ನೇತೃತ್ವದಲ್ಲಿ ಜಿಲ್ಲಾಧಿಕಾರಿ ಕೆ. ಲಕ್ಷ್ಮೀಪ್ರಿಯಾ ಅವರಿಗೆ ಮನವಿ ಸಲ್ಲಿಸಲಾಯಿತು. ಈ ವೇಳೆ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಗಣಪತಿ ನಾಯ್ಕ , ಜಿಲ್ಲಾ ಸಂಘಟನಾ ಕಾರ್ಯದರ್ಶಿ ಶ್ರೀಪಾದ ಶೇಟ್ , ಜಿಲ್ಲಾ ಯುವ ಘಟಕ ಅಧ್ಯಕ್ಷರು ಮಂಜುನಾಥ ನಾಯಕ, ಕಾರವಾರ ನಗರ ಘಟಕ ಅಧ್ಯಕ್ಷ ರಾಜಾ ನಾಯ್ಕ, ಸಾಮಾಜಿಕ ಜಾಲ ತಾಣ ಸಂಚಾಲಕ ಶ್ರೀಕಾಂತ ಪಟಗಾರ , ವಿಕಿ , ಮುಂತಾದವರು ಉಪಸ್ಥಿತರಿದ್ದರು


ಪ್ರಚಾರ W26
ಜಾಹೀರಾತು ಸ್ಥಳ ಲಭ್ಯವಿದೆ
300x250