ಸೆಪ್ಟೆಂಬರ್ 10, 2026
ಗುರುವಾರ

ನಮ್ಮನ್ನು ಅನುಸರಿಸಿ

Uttara-Kannada

ದೇಶದ ಯುವಜನತೆಗೆ ಪ್ರಚಾರದ ರೀಲ್ಸ್ ಬೇಡ, ಹೊಣೆಗಾರಿಕೆಯ ಆಡಳಿತ ಹಾಗೂ ನ್ಯಾಯ ಬೇಕು: ಸುರಜ್ ನಾಯ್ಕ

Pakka News Web • 1 ಆಗಸ್ಟ್ 2026,

ಕಾರವಾರ: ದೇಶದ ಯುವಜನತೆ ಇಂದು ರಾಜಕೀಯ ಪ್ರಚಾರದ ರೀಲ್ಸ್‌ಗಳನ್ನು ಬಯಸುತ್ತಿಲ್ಲ. ಅವರಿಗೆ ನ್ಯಾಯ, ಸುರಕ್ಷಿತ ಹಾಗೂ ಪಾರದರ್ಶಕ ಶಿಕ್ಷಣ ವ್ಯವಸ್ಥೆ ಮತ್ತು ತಮ್ಮ ಭವಿಷ್ಯದ ಬಗ್ಗೆ ಸರ್ಕಾರದ ಹೊಣೆಗಾರಿಕೆ ಬೇಕಾಗಿದೆ ಎಂದು ಅಖಿಲ ಭಾರತ ಕಾಂಗ್ರೆಸ್ ಸೇವಾದಳದ ರಾಷ್ಟ್ರೀಯ ಸಂಯೋಜಕ ಸುರಜ್ ಜಿ. ನಾಯ್ಕ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಕಳೆದ ಹಲವು ವರ್ಷಗಳಿಂದ ಪರೀಕ್ಷಾ ಅಕ್ರಮಗಳು ಮತ್ತು ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣಗಳು ದೇಶದ ಶಿಕ್ಷಣ ವ್ಯವಸ್ಥೆಯ ವಿಶ್ವಾಸಾರ್ಹತೆಯನ್ನು ಪ್ರಶ್ನಿಸುವಂತೆ ಮಾಡಿವೆ. ಲಕ್ಷಾಂತರ ವಿದ್ಯಾರ್ಥಿಗಳು ವರ್ಷಗಳ ಕಾಲ ಶ್ರಮಪಟ್ಟು ಸಿದ್ಧರಾಗುವಾಗ ಇಂತಹ ಘಟನೆಗಳು ಅವರ ಭವಿಷ್ಯಕ್ಕೆ ದೊಡ್ಡ ಹೊಡೆತ ನೀಡುತ್ತವೆ. ಇಂತಹ ಸಂದರ್ಭಗಳಲ್ಲಿ ವಿದ್ಯಾರ್ಥಿಗಳ ನೋವನ್ನು ಆಲಿಸಿ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದು ಸರ್ಕಾರದ ಮೊದಲ ಕರ್ತವ್ಯವಾಗಿದೆ. ಆದರೆ, ನ್ಯಾಯ ಕೇಳುವ ವಿದ್ಯಾರ್ಥಿಗಳ ಮೇಲೆಯೇ ಗಂಭೀರ ಆರೋಪಗಳನ್ನು ಹೊರಿಸುವುದು ದುರದೃಷ್ಟಕರ. ಪ್ರಶ್ನೆ ಕೇಳುವುದು ಮತ್ತು ಭವಿಷ್ಯಕ್ಕಾಗಿ ನ್ಯಾಯ ಒತ್ತುವುದು ಪ್ರತಿಯೊಬ್ಬ ವಿದ್ಯಾರ್ಥಿಯ ಪ್ರಜಾಸತ್ತಾತ್ಮಕ ಹಕ್ಕಾಗಿದೆ.

ಸಾಮಾಜಿಕ ಮಾಧ್ಯಮಗಳಲ್ಲಿ ಪ್ರಚಾರದ ವೀಕ್ಷಣೆಗಳನ್ನು ಹೆಚ್ಚಿಸಿಕೊಳ್ಳಬಹುದು. ಆದರೆ ಕೃತಕ ಪ್ರಚಾರದಿಂದ ಜನರ ವಿಶ್ವಾಸ ಗಳಿಸಲು ಸಾಧ್ಯವಿಲ್ಲ. ಜನರಿಗೆ ಬೇಕಿರುವುದು ಫಲಿತಾಂಶ, ಪಾರದರ್ಶಕತೆ ಮತ್ತು ಹೊಣೆಗಾರಿಕೆ. ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಪರೀಕ್ಷಾ ಅಕ್ರಮಗಳ ಕುರಿತು ಸಂಪೂರ್ಣ, ಸ್ವತಂತ್ರ ಹಾಗೂ ಪಾರದರ್ಶಕ ತನಿಖೆ ನಡೆಯಬೇಕು ಮತ್ತು ಯಾವುದೇ ರಾಜಕೀಯ ಒತ್ತಡವಿಲ್ಲದೆ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಅವರು ಆಗ್ರಹಿಸಿದ್ದಾರೆ.

ಸ್ಥಳೀಯ ಬಿಜೆಪಿ ನಾಯಕರಿಗೆ ಪ್ರಶ್ನೆಗಳ ಸುರಿಮಳೆ:

ಕಾಂಗ್ರೆಸ್ ಸರ್ಕಾರದ ವಿರುದ್ಧ ಆರೋಪ ಮಾಡುವ ಮೊದಲು ಕಾರವಾರದ ಬಿಜೆಪಿ ನಾಯಕರು ತಮ್ಮ ಆಡಳಿತಾವಧಿಯ ಲೆಕ್ಕವನ್ನು ಜನರ ಮುಂದಿಡಬೇಕು ಎಂದು ಸುರಜ್ ಜಿ. ನಾಯ್ಕ್ ಸವಾಲು ಹಾಕಿದ್ದಾರೆ. ರಾಜ್ಯದಲ್ಲಿದ್ದ ಬಿಜೆಪಿ ಆಡಳಿತಾವಧಿಯಲ್ಲಿ ಕೇಳಿಬಂದ ಭ್ರಷ್ಟಾಚಾರದ ಆರೋಪಗಳು, ಪಿಎಸ್‌ಐ ನೇಮಕಾತಿ ಅಕ್ರಮ ಹಾಗೂ ರೈತರ ಸಮಸ್ಯೆಗಳ ಕುರಿತು ಸ್ಪಷ್ಟನೆ ನೀಡಲಿ. ಕೇಂದ್ರ ಬಿಜೆಪಿ ಸರ್ಕಾರದ ಅವಧಿಯಲ್ಲಿ ಎದುರಾದ ನಿರುದ್ಯೋಗ, ಬೆಲೆ ಏರಿಕೆಯಂತಹ ಸಮಸ್ಯೆಗಳಿಗೆ ಉತ್ತರ ನೀಡದೆ, ಕಾಂಗ್ರೆಸ್ ಸರ್ಕಾರದ ಜನಪ್ರಿಯ ಗ್ಯಾರಂಟಿ ಯೋಜನೆಗಳನ್ನು ಟೀಕಿಸುವುದು ಸರಿಯಲ್ಲ ಎಂದು ಕಿಡಿಕಾರಿದ್ದಾರೆ.

ಇತ್ತೀಚೆಗೆ ಜಿಲ್ಲಾಧಿಕಾರಿ ಕಚೇರಿಯ ಗೇಟ್ ತಳ್ಳಿ ಒಳನುಗ್ಗಿದ ಘಟನೆಯನ್ನು ಉಲ್ಲೇಖಿಸಿದ ಅವರು, ಸರ್ಕಾರಿ ಕಚೇರಿಗಳು ಜನರ ಅಹವಾಲು ಆಲಿಸುವ ಸ್ಥಳಗಳೇ ಹೊರತು ರಾಜಕೀಯ ಪ್ರದರ್ಶನದ ಅಖಾಡಗಳಲ್ಲ. ಪ್ರಜಾಸತ್ತಾತ್ಮಕವಾಗಿ ಪ್ರತಿಭಟನೆ ನಡೆಸುವುದು ಹೌದಾದರೂ, ಕಾನೂನು-ಸುವ್ಯವಸ್ಥೆಗೆ ಧಕ್ಕೆ ತರುವುದನ್ನು ಸಮರ್ಥಿಸಲು ಸಾಧ್ಯವಿಲ್ಲ ಎಂದಿದ್ದಾರೆ.

ಭಾರತದ ಯುವಕರ ಭವಿಷ್ಯ ರಾಜಕೀಯ ಪ್ರಚಾರಕ್ಕಿಂತ ದೊಡ್ಡದಾಗಿದೆ. ರೀಲ್ಸ್ ಅಥವಾ ನಾಟಕಗಳ ಮೂಲಕ ನೈಜ ಪ್ರಶ್ನೆಗಳನ್ನು ಮರೆಮಾಚಲು ಸಾಧ್ಯವಿಲ್ಲ. ಯಾರು ಜನರ ಪರ ಕೆಲಸ ಮಾಡುತ್ತಿದ್ದಾರೆ ಮತ್ತು ಯಾರು ರಾಜಕೀಯ ನಾಟಕ ಮಾಡುತ್ತಿದ್ದಾರೆ ಎಂಬುದನ್ನು ಜನರೇ ತೀರ್ಮಾನಿಸಲಿದ್ದಾರೆ ಎಂದು ಸುರಜ್ ಜಿ. ನಾಯ್ಕ ಪ್ರಕಟಣೆಯಲ್ಲಿ ಅಭಿಪ್ರಾಯಪಟ್ಟಿದ್ದಾರೆ.


ಪ್ರಚಾರ W26
ಜಾಹೀರಾತು ಸ್ಥಳ ಲಭ್ಯವಿದೆ
300x250