ಸೆಪ್ಟೆಂಬರ್ 10, 2026
ಗುರುವಾರ

ನಮ್ಮನ್ನು ಅನುಸರಿಸಿ

Uttara-Kannada

ಅಕ್ಷರ ತಪಸ್ವಿ ಡಾ. ಗಣೇಶ ಬಿಷ್ಟಣ್ಣನವರಿಗೆ ಇಂಡಿಯನ್ ಬಿಸಿನೆಸ್ ಎಕ್ಸಲೆನ್ಸ್ ಪ್ರಶಸ್ತಿ–2026 ಗೌರವ

Pakka News Web • 1 ಆಗಸ್ಟ್ 2026,

ಕಾರವಾರ:ಕಲಿಸುವುದನ್ನೇ ಕಾಯಕವಾಗಿಸಿಕೊಂಡು, ಸಮಾಜ ಸೇವೆಯನ್ನೇ ಬದುಕಿನ ಉಸಿರಾಗಿಸಿಕೊಂಡಿರುವ ಡಾ. ಗಣೇಶ ಬಿಷ್ಟಣ್ಣನವರ ಅವರಿಗೆ ಮತ್ತೊಂದು ರಾಷ್ಟ್ರಮಟ್ಟದ ಗರಿ ಮುಡಿಗೇರಿದೆ.

ಕಾರವಾರದ ಅಸ್ನೋಟಿ ಶಿವಾಜಿ ವಿದ್ಯಾಮಂದಿರದ ಮುಖ್ಯಾಧ್ಯಪಕರಾಗಿ ಅಕ್ಷರ ಸೇವೆ ಸಲ್ಲಿಸುತ್ತಿರುವ ಇವರ ಅಪಾರ ಶೈಕ್ಷಣಿಕ ಹಾಗೂ ಸಾಮಾಜಿಕ ಸಾಧನೆಯನ್ನು ಗುರುತಿಸಿ ‘ಇಂಡಿಯನ್ ಬ್ಯುಸಿನೆಸ್ ಎಕ್ಸಲೆನ್ಸ್ – 2026’ ಮತ್ತು ‘ಅಚೀವ್‌ಮೆಂಟ್ಸ್ ಪ್ರಶಸ್ತಿ’ ಲಭಿಸಿದೆ.

ಹಾವೇರಿ ಜಿಲ್ಲೆಯ ಬ್ಯಾಡಗಿ ತಾಲೂಕಿನ ಗುಡ್ಡದ ಮಲ್ಲಾಪುರದ ನೀಲಪ್ಪ ಮತ್ತು ತಿಪ್ಪವ್ವ ದಂಪತಿಯ ಪುತ್ರರಾದ ಡಾ. ಗಣೇಶ ಬಿಷ್ಟಣ್ಣನವರ ಅವರು ಉತ್ತರ ಕನ್ನಡ ಜಿಲ್ಲೆಯ ಕಾರವಾರಕ್ಕೆ ಆಗಮಿಸಿ ಬರೋಬ್ಬರಿ 22 ವರ್ಷಗಳಾಗಿವೆ. 2೦04 ರಲ್ಲಿ ಅಸ್ನೋಟಿಯ ಶಿವಾಜಿ ವಿದ್ಯಾ ಮಂದಿರಕ್ಕೆ ಶಿಕ್ಷಕರಾಗಿ ಹೆಜ್ಜೆ ಇಟ್ಟ ಅವರು, ಪ್ರಸ್ತುತ ಅದೇ ಸಂಸ್ಥೆಯ ಮುಖ್ಯಾಧ್ಯಪಕರಾಗಿ ಶಾಲೆಯನ್ನು ಪ್ರಗತಿಯ ಹಾದಿಯಲ್ಲಿ ಮುನ್ನಡೆಸುತ್ತಿದ್ದಾರೆ. ಗಡಿಭಾಗದ ಶಾಲೆಯಲ್ಲಿ ಕೇವಲ ಪಾಠ ಮಾಡುವುದಕ್ಕಷ್ಟೇ ತಮ್ಮ ಸೇವೆಯನ್ನು ಸೀಮಿತಗೊಳಿಸದೆ, ಮರಾಠಿ ಪ್ರಭಾವದ ಗಡಿಭಾಗದಲ್ಲಿ ಕನ್ನಡದ ಬಾವುಟವನ್ನು ಎತ್ತಿಹಿಡಿದ ಹೆಗ್ಗಳಿಕೆ ಇವರದ್ದಾಗಿದೆ.

ಅರಣ್ಯ ಹಾಗೂ ಗುಡ್ಡಗಾಡು ಪ್ರದೇಶದ ಶಿಕ್ಷಣ ವಂಚಿತ ಬಡ ವಿದ್ಯಾರ್ಥಿಗಳನ್ನು ಶಾಲೆಗೆ ಕರೆತಂದು, ಅವರಿಗೆ ಉಚಿತ ಅನ್ನ, ಅಕ್ಷರ ಮತ್ತು ಆಶ್ರಯ ಒದಗಿಸುವ ಮೂಲಕ ಹೊಸ ಭವಿಷ್ಯ ಬರೆದಿದ್ದಾರೆ. ವಾಲ್ಮೀಕಿ ನಾಯಕ ಜನಾಂಗದ ಮಕ್ಕಳಿಗೆ ಹಾಗೂ ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿಗಳಿಗೆ ಉಚಿತ ಶಿಕ್ಷಣ ನೀಡುವುದು, ಗಡಿಭಾಗದ 25 ಶಾಲೆಗಳಿಗೆ ಟಿವಿ ಹಾಗೂ ಎಜ್ಯುಸ್ಯಾಟ್ ಶಿಕ್ಷಣದ ವ್ಯವಸ್ಥೆ ಕಲ್ಪಿಸುವುದು, ಹತ್ತು ಸಾವಿರ ಪುಸ್ತಕಗಳನ್ನು ಕೊಡುಗೆಯಾಗಿ ನೀಡುವುದು ಸೇರಿದಂತೆ ನೂರಾರು ಸಮಾಜಮುಖಿ ಕಾರ್ಯಗಳನ್ನು ತಮ್ಮ ಹೆಗಲ ಮೇಲೆ ಹೊತ್ತು ಸಾಗಿದ್ದಾರೆ. ಕರೋನಾ ಕಾಲದಲ್ಲೂ ೨೨೫ ಬಡ ಕುಟುಂಬಗಳಿಗೆ ಆಹಾರ ಕಿಟ್ ವಿತರಿಸಿ, ರೋಗದ ವಿರುದ್ಧ ಜಾಗೃತಿ ಮೂಡಿಸಲು ವಿಶಿಷ್ಟ ನಾಟಕಗಳನ್ನು ರಚಿಸಿ ಪ್ರದರ್ಶಿಸಿದ್ದಾರೆ.

ಸರ್ಕಾರಿ ಸೇವೆಯಲ್ಲಿದ್ದುಕೊಂಡೇ ಎಂ.ಎ., ಬಿ.ಇಡಿ ಮುಗಿಸಿ, ಗೌರವ ಡಾಕ್ಟರೇಟ್ ಪಡೆದಿರುವ ಇವರ ಪ್ರತಿಭೆ ಬಹುಮುಖಿ. ಇವರು ಬರೆದ 150ಕ್ಕೂ ಹೆಚ್ಚು ಅಂಕಣಗಳು, 45೦ಕ್ಕೂ ಅಧಿಕ ಕಾರ್ಯಕ್ರಮಗಳ ನಿರೂಪಣೆ, 475 ಕ್ಕೂ ಮಿಕ್ಕಿ ನೀಡಿದ ವಿಶೇಷ ಉಪನ್ಯಾಸಗಳು ಹಾಗೂ 9 ನಾಟಕಗಳ ಅಭಿನಯ-ನಿರ್ದೇಶನ ಇವರ ಸೃಜನಶೀಲತೆಗೆ ಸಾಕ್ಷಿ. ರಾಜ್ಯಮಟ್ಟದಲ್ಲಿ 13 ಬಾರಿ ಮಿಂಚಿರುವ ಇವರು, ಮಕ್ಕಳ ಸೃಜನಶೀಲತೆಗಾಗಿ ‘ಪ್ರೀತಿ ಪದಗಳ ಪಯಣ’, ‘ದರ್ಪಣ’, ‘ನಮ್ಮ ನಡಿಗೆ ಸಾವಿರದ ನಡಿಗೆ’ ಮುಂತಾದ ವಿನೂತನ ಕಾರ್ಯಕ್ರಮಗಳನ್ನು ಸಂಘಟಿಸಿದ್ದಾರೆ. ರಾಜ್ಯ ಮಟ್ಟದ ‘ಮಿಸ್ ಕಾಲ್ ನೀಡಿ, ಸಮಸ್ಯೆ ಬಗೆಹರಿಸಿಕೊಳ್ಳಿ’ ಕಾರ್ಯಕ್ರಮದ ಮೂಲಕ ಸಾವಿರಾರು ವಿದ್ಯಾರ್ಥಿಗಳು ಪರೀಕ್ಷೆಯಲ್ಲಿ ನೂರಕ್ಕೆ ನೂರು ಅಂಕ ಗಳಿಸಲು ಮಾರ್ಗದರ್ಶಕರಾಗಿದ್ದಾರೆ.

ಸ್ಕೌಟ್ಸ್ ಮತ್ತು ಗೈಡ್ಸ್, ಕನ್ನಡ ಸಾಹಿತ್ಯ ಪರಿಷತ್ತು, ರೆಡ್ ಕ್ರಾಸ್, ಲಯನ್ಸ್ ಕ್ಲಬ್, ದಲಿತ ಸಾಹಿತ್ಯ ಪರಿಷತ್ತು ಸೇರಿದಂತೆ ಹತ್ತಾರು ಸಂಘ-ಸಂಸ್ಥೆಗಳಲ್ಲಿ ಸಕ್ರಿಯ ಅಧಿಕಾರ ವಹಿಸಿಕೊಂಡು ಕಾರವಾರದ ಸಾಂಸ್ಕೃತಿಕ ಹಾಗೂ ಸಾಮಾಜಿಕ ರಂಗದಲ್ಲೂ ಇವರು ಸದಾ ಮುಂಚೂಣಿಯಲ್ಲಿದ್ದಾರೆ. ಉತ್ತರ ಕನ್ನಡ ಜಿಲ್ಲೆಯ ಹೋಂ ಗಾರ್ಡ್ಸ್‌ನ ‘ಡಿಸ್ಟ್ರಿಕ್ಟ್ ಕಮಾಂಡೆಂಟ್’ ಆಗಿಯೂ ಸೇವೆ ಸಲ್ಲಿಸುತ್ತಿರುವುದು ಇವರ ದಕ್ಷತೆಗೆ ಸಾಕ್ಷಿ.

ಇವರ ಈ ನಿಸ್ವಾರ್ಥ ಸೇವೆಯನ್ನು ಗುರುತಿಸಿ ಈಗಾಗಲೇ ರಾಜ್ಯೋತ್ಸವ ಪ್ರಶಸ್ತಿ, ಜವಾಹರಲಾಲ್ ನೆಹರು ಸದ್ಭಾವನಾ ರಾಷ್ಟ್ರೀಯ ಪ್ರಶಸ್ತಿ, ಡಾ. ಅಂಬೇಡ್ಕರ್ ನ್ಯಾಷನಲ್ ಫೆಲೋಶಿಪ್, ಎ.ಪಿ.ಜೆ. ಅಬ್ದುಲ್ ಕಲಾಂ ರಾಷ್ಟ್ರೀಯ ಪ್ರಶಸ್ತಿ, ಸ್ವಾಮಿ ವಿವೇಕಾನಂದ ರಾಷ್ಟ್ರೀಯ ಪ್ರಶಸ್ತಿ ಹಾಗೂ ಇತ್ತೀಚೆಗೆ ಗೌರವಾನ್ವಿತ ಮುಖ್ಯಮಂತ್ರಿ ಸಿದ್ಧರಾಮಯ್ಯನವರಿಂದ ನೀಡಲ್ಪಟ್ಟ ‘ಲೋಕಧ್ವನಿ ಹೆಮ್ಮೆಯ ಸಾಧಕರು’ ಪ್ರಶಸ್ತಿ ಸೇರಿದಂತೆ ಸಾಲು ಸಾಲು ಗೌರವಗಳು ಇವರನ್ನು ಹುಡುಕಿ ಬಂದಿವೆ.

ಆರಾಧ್ಯ ಮೀಡಿಯಾ ಈವೆಂಟ್ಸ್ ಸಂಸ್ಥೆಯು ಯಾವುದೇ ಮುನ್ಸೂಚನೆ ಇಲ್ಲದೆ, ಅತ್ಯಂತ ನಿಷ್ಪಕ್ಷಪಾತ ಸಮೀಕ್ಷೆಯ ಮೂಲಕ ಡಾ. ಗಣೇಶ ಬಿಷ್ಟಣ್ಣನವರ ಅವರ ಶೈಕ್ಷಣಿಕ ನಾಯಕತ್ವ ಹಾಗೂ ಸಾಧನೆಯನ್ನು ಪರಿಗಣಿಸಿ ‘ಇಂಡಿಯನ್ ಬ್ಯುಸಿನೆಸ್ ಎಕ್ಸಲೆನ್ಸ್ ಅವಾರ್ಡ್ – 2೦26’ಗೆ ಆಯ್ಕೆ ಮಾಡಿದೆ. ಆಗಸ್ಟ್  29 ರಂದು ಬೆಂಗಳೂರಿನಲ್ಲಿ ನಡೆಯಲಿರುವ ವೈಭವದ ಸಮಾರಂಭದಲ್ಲಿ ಈ ಪ್ರಶಸ್ತಿಯನ್ನು ಪ್ರದಾನ ಮಾಡಲಾಗುವುದು. ಗಡಿಭಾಗದ ಶಿಕ್ಷಣ ಕ್ಷೇತ್ರಕ್ಕೆ ಇವರು ನೀಡಿದ ನಿಸ್ವಾರ್ಥ ಸೇವೆಗೆ ದಕ್ಕಿದ ಈ ರಾಷ್ಟ್ರಮಟ್ಟದ ಪ್ರಶಸ್ತಿಯು ಉತ್ತರ ಕನ್ನಡ ಜಿಲ್ಲೆಗೆ ಹಾಗೂ ಶಿಕ್ಷಕ ಸಮುದಾಯಕ್ಕೆ ತಂದಿತ್ತ ಹೆಮ್ಮೆಯಾಗಿದೆ.


ಪ್ರಚಾರ W26
ಜಾಹೀರಾತು ಸ್ಥಳ ಲಭ್ಯವಿದೆ
300x250