ಸೆಪ್ಟೆಂಬರ್ 10, 2026
ಗುರುವಾರ

ನಮ್ಮನ್ನು ಅನುಸರಿಸಿ

Uttara-Kannada

ಅಕ್ರಮ ಮರಳು ಗಣಿಗಾರಿಕೆ ಆರೋಪ; ಕ್ರಮಕ್ಕೆ ಗ್ರಾಮಸ್ಥರ ಆಗ್ರಹ

Pakka News Web • 2 ಆಗಸ್ಟ್ 2026,

ಉತ್ತರ ಕನ್ನಡ ಜಿಲ್ಲೆಯ ಕಾರವಾರದ ವೈಲವಾಡಾ ಗ್ರಾಮ ಪಂಚಾಯತ್ ವ್ಯಾಪ್ತಿಯ ಖಾರ್ಗೇಜೂಗ್ ಪ್ರದೇಶದಲ್ಲಿ ರಾತ್ರಿ ವೇಳೆ ಯಾಂತ್ರಿಕ ದೋಣಿಗಳನ್ನು ಬಳಸಿಕೊಂಡು ಅಕ್ರಮ ಮರಳು ಗಣಿಗಾರಿಕೆ ನಡೆಸಲಾಗುತ್ತಿದೆ ಎಂದು ಆರೋಪಿಸಿ ಗ್ರಾಮಸ್ಥರು ಜಿಲ್ಲಾಧಿಕಾರಿ ಅವರಿಗೆ ಈಗಾಗಲೇ ಮನವಿ ಸಲ್ಲಿಸಿದ್ದಾರೆ.

ಮನವಿಯಲ್ಲಿ, ಖಾರ್ಗೇಜೂಗ್ ಪ್ರದೇಶವು ಉಸುಕು ಮಿಶ್ರಿತ ಮಣ್ಣಿನಿಂದ ಕೂಡಿದ ನಡುಗಡ್ಡೆ ಪ್ರದೇಶವಾಗಿದ್ದು, ಇಲ್ಲಿ ರಾತ್ರಿ ಸಮಯದಲ್ಲಿ ಹಲವು ಯಾಂತ್ರಿಕ ದೋಣಿಗಳ ಮೂಲಕ ಮರಳು ಗಣಿಗಾರಿಕೆ ನಡೆಯುತ್ತಿದೆ ಎಂದು ತಿಳಿಸಿದ್ದಾರೆ. ಗ್ರಾಮದಲ್ಲಿನ ಮನೆಗಳು ನದಿ ದಂಡೆಯಿಂದ ಕೇವಲ ನೂರು ಮೀಟರ್ ಅಂತರದಲ್ಲಿರುವುದರಿಂದ, ದೋಣಿಗಳಿಗೆ ಅಳವಡಿಸಿರುವ ಇಂಜಿನ್‌ಗಳ ಭಾರೀ ಶಬ್ದದಿಂದ ಗ್ರಾಮಸ್ಥರು ರಾತ್ರಿ ಪೂರ್ತಿ ನಿದ್ರಾಹೀನತೆಯನ್ನು ಅನುಭವಿಸುತ್ತಿದ್ದಾರೆ ಎಂದು ದೂರಿದ್ದಾರೆ.

ಅಲ್ಲದೆ, ಗ್ರಾಮದ ಅನೇಕ ಕುಟುಂಬಗಳು ನದಿಯಲ್ಲಿ ಬಲೆ ಹಾಕಿ ಮೀನು ಹಿಡಿಯುವುದನ್ನೇ ಜೀವನೋಪಾಯವಾಗಿಸಿಕೊಂಡಿದ್ದು, ರಾತ್ರಿ ವೇಳೆಯಲ್ಲಿ ನಡೆಯುತ್ತಿರುವ ಮರಳು ಗಣಿಗಾರಿಕೆಯಿಂದ ಮೀನುಗಾರಿಕೆ ಚಟುವಟಿಕೆಗಳಿಗೆ ಅಡಚಣೆ ಉಂಟಾಗಿ ಜೀವನ ನಿರ್ವಹಣೆಯ ಮೇಲೆಯೂ ಗಂಭೀರ ಪರಿಣಾಮ ಬೀರಿದೆ ಎಂದು ಮನವಿಯಲ್ಲಿ ಉಲ್ಲೇಖಿಸಲಾಗಿದೆ.

ಈ ಹಿನ್ನೆಲೆಯಲ್ಲಿ ಅಕ್ರಮ ಮರಳು ಗಣಿಗಾರಿಕೆಯನ್ನು ತಕ್ಷಣವೇ ನಿಲ್ಲಿಸಿ, ಗ್ರಾಮಸ್ಥರಿಗೆ ಆಗುತ್ತಿರುವ ತೊಂದರೆಗಳನ್ನು ಪರಿಹರಿಸುವಂತೆ ಹಾಗೂ ಗ್ರಾಮದ ಪರಿಸರ ಮತ್ತು ಜನರ ಹಿತಾಸಕ್ತಿಯನ್ನು ಕಾಪಾಡುವಂತೆ ಜಿಲ್ಲಾಡಳಿತವನ್ನು ಗ್ರಾಮಸ್ಥರು ಒತ್ತಾಯಿಸಿದ್ದಾರೆ.

ಮನವಿಯನ್ನು ಪರಿಶೀಲಿಸಿ ಸೂಕ್ತ ಕ್ರಮ ಕೈಗೊಳ್ಳದಿದ್ದಲ್ಲಿ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ನಡೆಸಬೇಕಾಗುತ್ತದೆ ಎಂದು ಗ್ರಾಮಸ್ಥರು ಎಚ್ಚರಿಕೆ ನೀಡಿದ್ದಾರೆ. ಈ ಮನವಿಯನ್ನು ಉತ್ತರ ಕನ್ನಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹಾಗೂ ಹಿರಿಯ ಭೂ ವಿಜ್ಞಾನಿ ಮತ್ತು ಗಣಿಗಾರಿಕಾ ಇಲಾಖೆಯ ಅಧಿಕಾರಿಗಳಿಗೆ ಸಹ ರವಾನಿಸಲಾಗಿದೆ.


ಪ್ರಚಾರ W26
ಜಾಹೀರಾತು ಸ್ಥಳ ಲಭ್ಯವಿದೆ
300x250