ಸೆಪ್ಟೆಂಬರ್ 10, 2026
ಗುರುವಾರ

ನಮ್ಮನ್ನು ಅನುಸರಿಸಿ

Uttara-Kannada

ಭಟ್ಕಳದಲ್ಲಿ ವಿಜೃಂಭಿಸಿದ ಶ್ರೀ ಮಾರಿಕಾಂಬಾ ದೇವಿ

Pakka News Web • 5 ಆಗಸ್ಟ್ 2026,

ಭಟ್ಕಳ: ಉತ್ತರ ಕನ್ನಡ ಜಿಲ್ಲೆಯ ಅತ್ಯಂತ ಶ್ರದ್ಧಾಭಕ್ತಿಯ ಹಬ್ಬಗಳಲ್ಲಿ ಒಂದಾದ ಭಟ್ಕಳದ ಸುಪ್ರಸಿದ್ಧ ಶ್ರೀ ಮಾರಿಕಾಂಬಾ ವಾರ್ಷಿಕ ಜಾತ್ರೋತ್ಸವವು ಬುಧವಾರ ಬೆಳಿಗ್ಗೆ ದೇವಿ ಮೂರ್ತಿಯು ಗದ್ದುಗೆ ಏರುವುದರೊಂದಿಗೆ ವಿಜೃಂಭಣೆಯಿಂದ ಪ್ರಾರಂಭವಾಯಿತು. 

ಈ ಹಿಂದೆ ಗ್ರಾಮದೇವತೆಯ ಉತ್ಸವವಾಗಿ, ಹಿಂದುಳಿದ ಹಾಗೂ ಪರಿಶಿಷ್ಟ ಜಾತಿ-ಪಂಗಡಗಳ ಸಮುದಾಯಗಳ ಪ್ರಮುಖ ನೇತೃತ್ವದಲ್ಲಿ ಆರಂಭಗೊಂಡು ಹಲವು ದಶಕಗಳ ಇತಿಹಾಸ ಹೊಂದಿರುವ ಈ ಜಾತ್ರೆಯು ಇಂದು ನಾಡಿನಾದ್ಯಂತ ಅಪಾರ ಸಂಖ್ಯೆಯ ಭಕ್ತರನ್ನು ಆಕರ್ಷಿಸುತ್ತಿದೆ.

ಮಂಗಳವಾರ ರಾತ್ರಿ ವಿಶ್ವಕರ್ಮ ಸಮಾಜದವರಿಂದ ಮೂರ್ತಿಗೆ ವಿಶೇಷ ಪೂಜೆ ನೆರವೇರಿದ ಬಳಿಕ, ಬುಧವಾರ ಮುಂಜಾನೆ ದೇವಿಯ ಮೂರ್ತಿಯನ್ನು ಭವ್ಯ ಮೆರವಣಿಗೆಯಲ್ಲಿ ಕರೆತರಲಾಯಿತು. ಪುರಾತನ ಸಂಪ್ರದಾಯದಂತೆ ಜೈನ ಸಮುದಾಯದವರಿಂದ ದೇವಿಗೆ ಪ್ರಥಮ ಪೂಜೆ ಸಲ್ಲಿಕೆಯಾದ ನಂತರ, ಮಾರಿಕಾಂಬಾ ದೇವಸ್ಥಾನದ ಎದುರಿನ ಗರ್ಭಗುಡಿಯ ಹೊರಪ್ರಾಂಗಣದಲ್ಲಿ ದೇವಿಯ ಮೂರ್ತಿಯನ್ನು ವಿಧಿವಿಧಾನಗಳೊಂದಿಗೆ ಪ್ರತಿಷ್ಠಾಪಿಸಲಾಯಿತು.

ಎರಡು ದಿನಗಳ ಕಾಲ ಜರುಗುವ ಈ ಸಂಭ್ರಮದ ಹಬ್ಬದಲ್ಲಿ, ಮೊದಲ ದಿನದಂದು ಪರ ಊರಿನವರು ಹಾಗೂ ಎರಡನೇ ದಿನವಾದ ಗುರುವಾರ ಸ್ಥಳೀಯರು ಆಚರಣೆಯಲ್ಲಿ ತೊಡಗಿಸಿಕೊಳ್ಳುವುದು ಇಲ್ಲಿನ ವೈಶಿಷ್ಟ್ಯ. ಸಾಂಪ್ರದಾಯಿಕವಾಗಿ ಭಕ್ತರು ತಮ್ಮ ಮನೆಗಳಲ್ಲೇ ಕೋಳಿ ಕೊಯ್ದು ದೇವಿಗೆ ರಕ್ತ ಸಮರ್ಪಿಸುವ ಆಚರಣೆಯೂ ಜಾರಿಯಲ್ಲಿದೆ. ದೇವಿಯ ದರ್ಶನಕ್ಕಾಗಿ ನೆರೆಹೊರೆಯ ತಾಲೂಕುಗಳಿಂದ ಸಾವಿರಾರು ಭಕ್ತರು ಹರಿದುಬಂದಿದ್ದು, ದೇವಸ್ಥಾನದ ಆವರಣದಲ್ಲಿ ಭಕ್ತಿಯ ವಾತಾವರಣ ಮನೆಮಾಡಿತ್ತು.

ಊರಿಗೆ ಯಾವುದೇ ಕಣ್ಣುಬೇನೆ, ಸಿಡುಬು ಹಾಗೂ ಸಾಂಕ್ರಾಮಿಕ ರೋಗರುಜಿನಗಳು ಬಾರದಂತೆ ಕಾಯುವಂತೆ ಭಕ್ತರು ಮಾರಿದೇವಿಗೆ ಹೂವಿನ ಟೋಪಿ, ಎಲೆಗಳ ಹೂಕಟ್ಟು ಹಾಗೂ ಬೆಳ್ಳಿಯ ಕಣ್ಣುಗಳನ್ನು ಅರ್ಪಿಸಿ ಪ್ರಾರ್ಥಿಸುತ್ತಾರೆ. ತಮ್ಮ ಕಷ್ಟ-ಕಾರ್ಪಣ್ಯಗಳು ಕಳೆದು ಸನ್ಮಂಗಳವಾಗಲಿ ಎಂದು ಹರಕೆ ಹೊತ್ತಿದ್ದ ಸಾವಿರಾರು ಭಕ್ತರು ಈ ಬಾರಿಯೂ ಭಕ್ತಿಯಿಂದ ಹರಕೆ ತೀರಿಸಿದರು.

ಜಾತ್ರೆಯ ಹಿನ್ನೆಲೆಯಲ್ಲಿ ಯಾವುದೇ ಲೋಪಬಾರಂದಂತೆ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದ್ದು, ಮೂರ್ತಿ ಪ್ರತಿಷ್ಠಾಪನೆಗೂ ಮುನ್ನ ಬಾಂಬ್ ನಿಷ್ಕ್ರಿಯ ಹಾಗೂ ಶ್ವಾನದಳದಿಂದ ದೇವಸ್ಥಾನದ ಆವರಣವನ್ನು ಸಂಪೂರ್ಣ ತಪಾಸಣೆಗೊಳಪಡಿಸಲಾಗಿತ್ತು. ಸಾರ್ವಜನಿಕರ ಸುರಕ್ಷತೆಗೆ ಕಟ್ಟುನಿಟ್ಟಿನ ವ್ಯವಸ್ಥೆ ಮಾಡಲಾಗಿದೆ. ಈ ಸಂಭ್ರಮದ ಜಾತ್ರೆಯು ಗುರುವಾರ ಸಂಜೆ ೪.೩೦ಕ್ಕೆ ದೇವಿಯ ಮೂರ್ತಿಯನ್ನು ತಲೆಯ ಮೇಲೆ ಹೊತ್ತು ಮೆರವಣಿಗೆ ಮೂಲಕ ಕೊಂಡೊಯ್ದು, ಕರಿಕಲ್ ಸಮುದ್ರದಲ್ಲಿ ವಿಸರ್ಜಿಸುವುದರೊಂದಿಗೆ ಸಂಪನ್ನಗೊಳ್ಳಲಿದೆ.


ಪ್ರಚಾರ W26
ಜಾಹೀರಾತು ಸ್ಥಳ ಲಭ್ಯವಿದೆ
300x250