ದಾಂಡೇಲಿ:ರಾಜ್ಯ ಕಾಂಗ್ರೆಸ್ ಸರ್ಕಾರದಲ್ಲಿ ಇತ್ತೀಚೆಗೆ ನಡೆದ ಸಚಿವ ಸಂಪುಟ ಪುನಾರಚನೆ ಹಾಗೂ ನೂತನ 19 ಸಚಿವರ ಸೇರ್ಪಡೆಯು ಸ್ವಾಗತಾರ್ಹವಾಗಿದ್ದರೂ, ಹಳಿಯಾಳ-ದಾಂಡೇಲಿ ಮತ್ತು ಜೋಯಿಡಾ ಕ್ಷೇತ್ರದ ಹಿರಿಯ ಹಾಗೂ ಜನಪ್ರಿಯ ಶಾಸಕರಾದ ಆರ್. ವಿ. ದೇಶಪಾಂಡೆ ಅವರಿಗೆ ಸಚಿವ ಸ್ಥಾನ ನೀಡದಿರುವುದು ತೀವ್ರ ಬೇಸರ ತಂದಿದೆ ಎಂದು ದಾಂಡೇಲಿ ತಾಲೂಕು ಹಿಂದುಳಿದ ವರ್ಗಗಳ ಅಧ್ಯಕ್ಷರಾದ ವಿನಾಯಕ್ ಬಾರೆಕರ್ ಹೇಳಿದ್ದಾರೆ.
ಉತ್ತರ ಕನ್ನಡ ಜಿಲ್ಲೆಯಲ್ಲಿ ಅಭಿವೃದ್ಧಿ ಹಾಗೂ ಉದ್ಯೋಗ ಸೃಷ್ಟಿಗೆ ಸಂಬಂಧಿಸಿದಂತೆ ಹಲವು ಹೊಸ ಯೋಜನೆಗಳು ಜಾರಿಯಾಗಬೇಕಿದೆ. ಜಿಲ್ಲೆಯಲ್ಲಿ ನಿರುದ್ಯೋಗ ಸೇರಿದಂತೆ ಸಾಲು ಸಾಲು ಸಮಸ್ಯೆಗಳಿರುವಾಗ, ಇಲ್ಲಿಂದ ಆಯ್ಕೆಯಾದ ನಾಲ್ವರು ಶಾಸಕರಲ್ಲಿ ಯಾರಿಗೂ ಸಚಿವ ಸಂಪುಟದಲ್ಲಿ ಅವಕಾಶ ನೀಡದಿರುವುದು ವಿಷಾದನೀಯ. ಇದು ಮುಂದಿನ ಚುನಾವಣೆಗಳ ಮೇಲೆ ಪಕ್ಷದ ಮೇಲೆ ವ್ಯತಿರಿಕ್ತ ಪರಿಣಾಮ ಬೀರಬಹುದು, ಎಂದು ಕಳವಳ ವ್ಯಕ್ತಪಡಿಸಿದರು.
ಆದ್ದರಿಂದ, ಹಿರಿಯ ನಾಯಕರಾದ ಆರ್. ವಿ. ದೇಶಪಾಂಡೆ ಅವರ ಸುದೀರ್ಘ ಆಡಳಿತ ಅನುಭವವನ್ನು ಪರಿಗಣಿಸಿ ಅವರಿಗೆ ತಕ್ಷಣವೇ ಸಚಿವ ಸಂಪುಟದಲ್ಲಿ ಸೂಕ್ತ ಸ್ಥಾನಮಾನ ನೀಡಬೇಕು. ಈ ಕುರಿತು ಮುಖ್ಯಮಂತ್ರಿ ಡಿ. ಕೆ. ಶಿವಕುಮಾರ್ ಅವರಿಗೆ ಪಕ್ಷದ ಕಾರ್ಯಕರ್ತರು ಹಾಗೂ ಉತ್ತರ ಕನ್ನಡ ಜಿಲ್ಲೆಯ ಸಾರ್ವಜನಿಕರ ಪರವಾಗಿ ಶೀಘ್ರದಲ್ಲೇ ಲಿಖಿತ ಮನವಿ ಸಲ್ಲಿಸಲಾಗುವುದು ಎಂದು ಬಾರೆಕರ್ ತಿಳಿಸಿದರು.
