ಕಾರವಾರ: ಇತ್ತೀಚಿನ ರಾಜ್ಯ ಸಚಿವ ಸಂಪುಟ ವಿಸ್ತರಣೆಯಲ್ಲಿ ಉತ್ತರಕನ್ನಡ ಜಿಲ್ಲೆಗೆ ಪ್ರಾತಿನಿಧ್ಯ ನೀಡದಿರುವುದು ತೀವ್ರ ನಿರಾಶಾದಾಯಕ ನಿರ್ಧಾರ ಎಂದು ಸಾಮಾಜಿಕ ಕಾರ್ಯಕರ್ತ ಪ್ರಸಾದ ಗಾಂವಕರ್ ಅಮದಳ್ಳಿ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಮಟ್ಟದಲ್ಲಿ ಮಹತ್ವ ಪಡೆದಿರುವ ಹಸನ್ಮುಖಿ ಯೋಜನೆಗಳಿಗೆ ನೆಲೆಯಾಗಿರುವ ಉತ್ತರಕನ್ನಡ ಜಿಲ್ಲೆಯಲ್ಲಿ, ಇನ್ನೂ ಹಲವು ಬೃಹತ್ ಯೋಜನೆಗಳು ಜಾರಿಯಾಗುವ ಹಂತದಲ್ಲಿವೆ.
ಇಂತಹ ಆಡಳಿತಾತ್ಮಕವಾಗಿ ಅತ್ಯಂತ ಪ್ರಮುಖ ಸಂದರ್ಭದಲ್ಲಿ, ಸರ್ಕಾರದ ಮಟ್ಟದಲ್ಲಿ ಜಿಲ್ಲೆಯ ಧ್ವನಿಯಾಗಿ ನಿಂತು ನಾಯಕತ್ವ ವಹಿಸಬಲ್ಲ ಸಚಿವರೊಬ್ಬರ ಉಪಸ್ಥಿತಿ ಅತ್ಯಗತ್ಯವಾಗಿತ್ತು ಎಂದು ಅವರು ಪ್ರತಿಪಾದಿಸಿದ್ದಾರೆ.
ನೆರೆಯ ದಕ್ಷಿಣ ಕನ್ನಡ ಜಿಲ್ಲೆಗೆ ಹೋಲಿಸಿದರೆ ಶಿಕ್ಷಣ, ಆರೋಗ್ಯ ಮತ್ತು ಕೈಗಾರಿಕಾ ಕ್ಷೇತ್ರಗಳಲ್ಲಿ ಉತ್ತರಕನ್ನಡ ಇಂದಿಗೂ ಹಿಂದುಳಿದಿದೆ. ಅಪಾರ ಅರಣ್ಯ ಸಂಪತ್ತು, ನದಿಗಳು ಹಾಗೂ ವಿಸ್ತಾರವಾದ ಸಮುದ್ರ ತೀರವನ್ನು ಒಳಗೊಂಡಿರುವ ರಾಜ್ಯದ ಪ್ರಮುಖ ಜಿಲ್ಲೆಗೆ ಸಚಿವ ಸ್ಥಾನ ನೀಡದಿರುವುದು ಬರಿ ಬೇಸರದ ಸಂಗತಿಯಷ್ಟೇ ಅಲ್ಲ, ಇದು ಜಿಲ್ಲೆಯ ಸಮಗ್ರ ಅಭಿವೃದ್ಧಿಯ ಮೇಲೆಯೂ ನಕಾರಾತ್ಮಕ ಪರಿಣಾಮ ಬೀರುತ್ತದೆ.
ಸಚಿವ ಸ್ಥಾನ ಲಭಿಸಿದ್ದರೆ ಅಭಿವೃದ್ಧಿ ಕಾಮಗಾರಿಗಳಿಗೆ ಹೆಚ್ಚಿನ ವೇಗ ಸಿಗುತ್ತಿತ್ತು; ಪ್ರಸ್ತುತ ಸರ್ಕಾರದ ಈ ನಿರ್ಧಾರ ಜಿಲ್ಲೆಯ ಜನತೆಯ ನಿರೀಕ್ಷೆಗೆ ತಂದೊಡ್ಡಿದ ದೊಡ್ಡ ಧಕ್ಕೆಯಾಗಿದೆ ಎಂದು ಗಾಂವಕರ್ ಹೇಳಿದ್ದಾರೆ.
