ಸೆಪ್ಟೆಂಬರ್ 10, 2026
ಗುರುವಾರ

ನಮ್ಮನ್ನು ಅನುಸರಿಸಿ

Uttara-Kannada

ಉತ್ತರ ಕನ್ನಡವನ್ನು ಧಾರವಾಡ ಹೈಕೋರ್ಟ್ ಪೀಠದಲ್ಲೇ ಮುಂದುವರಿಸಿ: ಎಂಪಿ ವಿಶ್ವೇಶ್ವರ ಹೆಗಡೆ ಕಾಗೇರಿ 

Pakka News Web • 11 ಆಗಸ್ಟ್ 2026,

ಕಾರವಾರ: ಉತ್ತರ ಕನ್ನಡ ಜಿಲ್ಲೆಯ ನ್ಯಾಯಾಲಯದ ಅಧಿಕಾರ ವ್ಯಾಪ್ತಿಯನ್ನು ಪ್ರಸ್ತಾಪಿತ ಮಂಗಳೂರು ಉಚ್ಚ ನ್ಯಾಯಾಲಯದ ಪೀಠಕ್ಕೆ ಸೇರಿಸುವ ಪ್ರಸ್ತಾವನೆಗೆ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ. 

ಕಳೆದ 18 ವರ್ಷಗಳಿಂದ ಜಿಲ್ಲೆಯು ಧಾರವಾಡ ಉಚ್ಚ ನ್ಯಾಯಾಲಯ ಪೀಠದ ವ್ಯಾಪ್ತಿಯಲ್ಲಿದ್ದು, ಮುಂದೆಯೂ ಧಾರವಾಡ ಪೀಠದಲ್ಲೇ ಮುಂದುವರಿಯಬೇಕು ಎಂಬುದು ಜಿಲ್ಲೆಯ ಸಮಸ್ತ ಸಾರ್ವಜನಿಕರ ಹಾಗೂ ವಕೀಲ ಸಮುದಾಯದ ಒಮ್ಮತದ ಬೇಡಿಕೆಯಾಗಿದೆ ಎಂದು ಅವರು ಹೇಳಿದ್ದಾರೆ.

ಈ ಕುರಿತು ಪತ್ರಿಕಾ ಪ್ರಕಟಣೆ ಬಿಡುಗಡೆ ಮಾಡಿರುವ ಅವರು, ಜಿಲ್ಲೆಯ ಪ್ರಾದೇಶಿಕ ಮತ್ತು ಸಾರ್ವಜನಿಕ ಹಿತದೃಷ್ಟಿಯಿಂದ ಉತ್ತರ ಕನ್ನಡವನ್ನು ಧಾರವಾಡ ಪೀಠದಲ್ಲೇ ಕಾಯ್ದುಕೊಳ್ಳುವಂತೆ ಕೋರಿ ಮುಖ್ಯಮಂತ್ರಿಗಳು ಹಾಗೂ ಕರ್ನಾಟಕ ಉಚ್ಚ ನ್ಯಾಯಾಲಯದ ಮುಖ್ಯ ನ್ಯಾಯಮೂರ್ತಿಗಳಿಗೆ ಈಗಾಗಲೇ ಮನವಿ ಪತ್ರ ಸಲ್ಲಿಸಿರುವುದಾಗಿ ತಿಳಿಸಿದ್ದಾರೆ.

ಭೌಗೋಳಿಕ ಅಂತರ ಹಾಗೂ ಸಾರಿಗೆ ಸೌಲಭ್ಯಗಳ ದೃಷ್ಟಿಯಿಂದ ಕಾರವಾರ, ಹಳಿಯಾಳ ಸೇರಿದಂತೆ ಜಿಲ್ಲೆಯ ಎಲ್ಲಾ ತಾಲೂಕುಗಳ ಸಾರ್ವಜನಿಕರಿಗೆ ಮಂಗಳೂರಿಗಿಂತ ಧಾರವಾಡ ತಲುಪುವುದು ಅತ್ಯಂತ ಸುಲಭ ಹಾಗೂ ಸಮಯ ಉಳಿತಾಯವಾಗುತ್ತದೆ. ‘ನ್ಯಾಯ ಮನೆಬಾಗಿಲಿಗೆ ತಲುಪಬೇಕು’ ಎಂಬ ತತ್ತ್ವದಡಿಯಲ್ಲೂ ಧಾರವಾಡ ಪೀಠವೇ ಜಿಲ್ಲೆಯ ಜನರಿಗೆ ಅತ್ಯಂತ ಸಮೀಪ ಹಾಗೂ ಸೂಕ್ತವಾಗಿದೆ ಎಂದು ಕಾಗೇರಿ ಅಭಿಪ್ರಾಯಪಟ್ಟಿದ್ದಾರೆ.

ಆದ್ದರಿಂದ, ಜನಸಾಮಾನ್ಯರ ಹಾಗೂ ಕಕ್ಷಿದಾರರ ಹಿತಾಸಕ್ತಿಯನ್ನು ಗಮನದಲ್ಲಿಟ್ಟುಕೊಂಡು ಉತ್ತರ ಕನ್ನಡ ಜಿಲ್ಲೆಯನ್ನು ಯಾವುದೇ ಕಾರಣಕ್ಕೂ ಪ್ರಸ್ತಾಪಿತ ಮಂಗಳೂರು ಪೀಠಕ್ಕೆ ಸೇರಿಸದೇ, ಹಾಲಿ ಇರುವ ಧಾರವಾಡ ಉಚ್ಚ ನ್ಯಾಯಾಲಯದ ಪೀಠದಲ್ಲೇ ಮುಂದುವರಿಸಲು ಸೂಕ್ತ ನಿರ್ದೇಶನ ನೀಡಬೇಕೆಂದು ಅವರು ಮಾನ್ಯ ಮುಖ್ಯಮಂತ್ರಿಗಳು ಹಾಗೂ ಗೌರವಾನ್ವಿತ ಮುಖ್ಯ ನ್ಯಾಯಮೂರ್ತಿಗಳನ್ನು ಒತ್ತಾಯಿಸಿದ್ದಾರೆ.


ಪ್ರಚಾರ W26
ಜಾಹೀರಾತು ಸ್ಥಳ ಲಭ್ಯವಿದೆ
300x250