ಹೊನ್ನಾವರ:ರಾಜ್ಯದಲ್ಲಿ ಅರಣ್ಯ ಹಕ್ಕು ಕಾಯ್ದೆಯನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಬೇಕು ಹಾಗೂ ಸ್ಥಳ ಮಹಜರು ಪ್ರಕ್ರಿಯೆಗಳ ಮೂಲಕ ಸಾಂದರ್ಭಿಕ ಸಾಕ್ಷ್ಯಗಳನ್ನು ಕ್ರೋಡಿಕರಿಸಿ ಅರ್ಹ ಅರಣ್ಯ ಭೂಮಿ ಸಾಗುವಳಿದಾರರಿಗೆ ಅಧಿಭೋಗದ ಹಕ್ಕು ನೀಡಬೇಕು ಎಂದು ಅರಣ್ಯ ಭೂಮಿ ಹಕ್ಕು ಹೋರಾಟ ಸಂಘಟನೆಗಳ ರಾಜ್ಯ ಸಮಿತಿಯ ಅಧ್ಯಕ್ಷ ಚಂದ್ರಕಾಂತ ಕೊಚರೇಕರ ಅವರು ರಾಜ್ಯದ ಮುಖ್ಯ ಕಾರ್ಯದರ್ಶಿಯವರನ್ನು ಆಗ್ರಹಿಸಿದ್ದಾರೆ.
ಈ ಕುರಿತು ಮುಖ್ಯ ಕಾರ್ಯದರ್ಶಿಯವರಿಗೆ ಪತ್ರ ಬರೆದಿರುವ ಅವರು, ಉತ್ತರ ಕನ್ನಡ ಜಿಲ್ಲೆ ಸೇರಿದಂತೆ ರಾಜ್ಯಾದ್ಯಂತ ೨೦೦೫ಕ್ಕಿಂತ ಪೂರ್ವದಿಂದಲೂ ವಸತಿ ಮತ್ತು ಜೀವನೋಪಾಯಕ್ಕಾಗಿ ಅರಣ್ಯ ಭೂಮಿಯನ್ನೇ ನಂಬಿ ಬದುಕುತ್ತಿರುವ ಲಕ್ಷಾಂತರ ಬುಡಕಟ್ಟು ಹಾಗೂ ಇತರ ಪಾರಂಪರಿಕ ಅರಣ್ಯವಾಸಿಗಳು ಇಂದಿಗೂ ಹಕ್ಕಿನಿಂದ ವಂಚಿತರಾಗಿದ್ದಾರೆ ಎಂದು ಕಳವಳ ವ್ಯಕ್ತಪಡಿಸಿದ್ದಾರೆ.
ತಿರಸ್ಕರಿಸಲ್ಪಟ್ಟ ಅರಣ್ಯ ಹಕ್ಕು ಕ್ಲೇಮುಗಳನ್ನು ಪುನರ್ ಪರಿಶೀಲಿಸಲು ಮತ್ತು ಸ್ಥಳ ತನಿಖೆಯ ಮೂಲಕ ಸಾಂದರ್ಭಿಕ ಸಾಕ್ಷ್ಯಗಳನ್ನು ಸಂಗ್ರಹಿಸಿ ಮಹಜರು ನಡೆಸಿ ಹಕ್ಕು ಸೌಲಭ್ಯ ಕಲ್ಪಿಸಲು ಈ ಹಿಂದೆ ಮುಖ್ಯ ಕಾರ್ಯದರ್ಶಿಗಳು ನೀಡಿದ್ದ ಆದೇಶ ಇನ್ನೂ ಪೂರ್ಣ ಪ್ರಮಾಣದಲ್ಲಿ ಅನುಷ್ಠಾನಗೊಂಡಿಲ್ಲ. ಹೀಗಾಗಿ ಸ್ಥಳ ತನಿಖೆ ಮತ್ತು ಮಹಜರು ಪ್ರಕ್ರಿಯೆಗಳನ್ನು ಸಮರ್ಪಕವಾಗಿ ನಡೆಸದಿರುವ ಕ್ರಮವನ್ನು ಸಂಘಟನೆಯು ಸರ್ಕಾರದ ಗಮನಕ್ಕೆ ತಂದಿದೆ.
ಅರಣ್ಯ ಹಕ್ಕು ಕಾಯ್ದೆಯ ಪರಿಣಾಮಕಾರಿ ಅನುಷ್ಠಾನಕ್ಕಾಗಿ ಪ್ರತಿ ಜಿಲ್ಲೆಯಲ್ಲೂ ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ, ಸ್ಥಳೀಯ ಶಾಸಕರು ಹಾಗೂ ಅರಣ್ಯ ಭೂಮಿ ಹಕ್ಕು ಹೋರಾಟ ಸಂಘಟನೆಗಳ ಪ್ರಮುಖರ ಉಪಸ್ಥಿತಿಯಲ್ಲಿ ಉನ್ನತಾಧಿಕಾರ ಮಟ್ಟದ ಸಂವಾದ ಸಭೆ ನಡೆಸಬೇಕು ಎಂದು ಮನವಿಯಲ್ಲಿ ಒತ್ತಾಯಿಸಲಾಗಿದೆ. ಅದರೊಂದಿಗೆ ತಿರಸ್ಕೃತಗೊಂಡಿರುವ ಎಲ್ಲಾ ಅರ್ಜಿಗಳನ್ನು ಪುನರ್ ಪರಿಶೀಲಿಸಿ, ಕ್ಲೇಮುದಾರರ ಪ್ರತ್ಯಕ್ಷ ಸಾಗುವಳಿಯ ಜಿಪಿಎಸ್ ಸರ್ವೆ ನಡೆಸಬೇಕು.
ಸ್ಥಳದಲ್ಲಿನ ಸಾಂದರ್ಭಿಕ ಸಾಕ್ಷ್ಯಗಳನ್ನು ಮಹಜರು ಮೂಲಕ ದೃಢೀಕರಿಸಿ, ಉಪವಿಭಾಗೀಯ ಮಟ್ಟದ ಅರಣ್ಯ ಹಕ್ಕು ಸಮಿತಿಗಳ (SDLC) ಮುಖಾಂತರ ಅರ್ಹರಿಗೆ ಭೂಮಿ ಹಕ್ಕು ನೀಡಲು ಕ್ರಮ ಕೈಗೊಳ್ಳಬೇಕು ಎಂದು ಚಂದ್ರಕಾಂತ ಕೊಚರೇಕರ ಅವರು ಆಗ್ರಹಿಸಿದ್ದಾರೆ.
ಈ ಮನವಿಗೆ ತಕ್ಷಣ ಸ್ಪಂದಿಸಿರುವ ರಾಜ್ಯ ಮಟ್ಟದ ಅರಣ್ಯ ಹಕ್ಕು ಮೇಲ್ವಿಚಾರಣ ಸಮಿತಿಯ ಅಧ್ಯಕ್ಷರೂ ಆಗಿರುವ ಮುಖ್ಯ ಕಾರ್ಯದರ್ಶಿಯವರು, ಈ ಕುರಿತು ಅಗತ್ಯ ಕ್ರಮ ಕೈಗೊಳ್ಳುವಂತೆ ಕಂದಾಯ ಇಲಾಖೆ ಕಾರ್ಯದರ್ಶಿ, ಅರಣ್ಯ ಇಲಾಖೆ ಕಾರ್ಯದರ್ಶಿ ಹಾಗೂ ಪರಿಶಿಷ್ಟ ಪಂಗಡಗಳ ಕಲ್ಯಾಣ ಇಲಾಖೆಯ ನಿರ್ದೇಶಕರಿಗೆ ಸೂಚನೆ ನೀಡಿದ್ದಾರೆ ಎಂದು ಹೋರಾಟ ಸಮಿತಿಯ ಪ್ರಕಟಣೆ ತಿಳಿಸಿದೆ.
ರಾಜ್ಯದಲ್ಲಿ ೧೩-೧೨-೨೦೦೫ಕ್ಕಿಂತ ಮೊದಲು ಅರಣ್ಯ ಜಮೀನು ಅವಲಂಬಿಸಿರುವ ಒಟ್ಟು ೨,೮೮,೫೪೯ ಬುಡಕಟ್ಟು ಮತ್ತು ಇತರ ಪಾರಂಪರಿಕ ಅರಣ್ಯವಾಸಿಗಳು ಹಕ್ಕಿಗಾಗಿ ಅರ್ಜಿ ಸಲ್ಲಿಸಿದ್ದು, ಅದರಲ್ಲಿ ೨,೬೦,೧೩೯ ಅರ್ಜಿಗಳು ಸಾರಾಸಗಟಾಗಿ ತಿರಸ್ಕೃತಗೊಂಡಿದ್ದವು. ಕೇವಲ ಉತ್ತರ ಕನ್ನಡ ಜಿಲ್ಲೆಯೊಂದರಲ್ಲೇ ಸಲ್ಲಿಕೆಯಾಗಿದ್ದ ೮೫,೦೬೫ ಅರ್ಜಿಗಳ ಪೈಕಿ ೬೭,೨೨೬ ಅರ್ಜಿಗಳನ್ನು ಸರಿಯಾದ ವಿಚಾರಣೆ ನಡೆಸದೇ ತಿರಸ್ಕರಿಸಲಾಗಿತ್ತು.
ಈ ಅನ್ಯಾಯದ ವಿರುದ್ಧ ರಾಜ್ಯಾದ್ಯಂತ ತೀವ್ರ ಪ್ರತಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ, ರಾಜ್ಯ ಮಟ್ಟದ ಮೇಲ್ವಿಚಾರಣಾ ಸಮಿತಿಯು ೨೦೧೯ ಮತ್ತು ೨೦೨೫ರಲ್ಲಿ ಎರಡು ಬಾರಿ ಅರ್ಜಿಗಳ ಪುನರ್ ಪರಿಶೀಲನೆಗೆ ಆದೇಶಿಸಿತ್ತು. ಆದಾಗ್ಯೂ, ಇತ್ತೀಚಿನ ಆದೇಶದಂತೆ ರಾಜ್ಯಾದ್ಯಂತ ಮಹಜರು ಪ್ರಕ್ರಿಯೆ ಹಾಗೂ ಪುನರ್ ಪರಿಶೀಲನಾ ಕಾರ್ಯಗಳು ಇನ್ನೂ ಭರದಿಂದ ಆರಂಭವಾಗದಿರುವುದು ಅರಣ್ಯ ಭೂಮಿ ಸಾಗುವಳಿದಾರರಲ್ಲಿ ತೀವ್ರ ಆತಂಕ ಮೂಡಿಸಿದೆ.
