ಕರ್ನಾಟಕ ರೈತ ಸುರಕ್ಷಾ ಪ್ರಧಾನಮಂತ್ರಿ ಫಸಲ್ ಭೀಮಾ ಯೋಜನೆಯಡಿ ಕಾರವಾರ ತಾಲೂಕಿನಲ್ಲಿ ಮುಂಗಾರು ಬೆಳೆಯಾದ (ಮಳೆಯಾಶ್ರಿತ) ಭತ್ತದ ಬೆಳೆಯನ್ನು ಗ್ರಾಮ ಪಂಚಾಯತ್ ಮಟ್ಟದಲ್ಲಿ ಅಧಿಸೂಚಿಸಲಾಗಿದೆ.
ಬಿತ್ತನೆಯಿಂದ ಹಿಡಿದು ಕೊಯ್ಲಿನ ನಂತರದ ಅವಧಿಯವರೆಗೆ ಸಂಭವಿಸುವ ಪ್ರಕೃತಿ ವಿಕೋಪಗಳಿಂದಾಗುವ ಬೆಳೆ ನಷ್ಟಕ್ಕೆ ಪರಿಹಾರ ಕಂಡುಕೊಳ್ಳಲು ಈ ಯೋಜನೆ ಸಹಕಾರಿಯಾಗಿದೆ.
ಈ ಯೋಜನೆಯಡಿ ಮಳೆಯಾಶ್ರಿತ ಭತ್ತದ ಬೆಳೆಗೆ ಪ್ರತಿ ಎಕರೆಗೆ ₹30,595 ವಿಮಾ ಮೊತ್ತ ನಿಗದಿಯಾಗಿದ್ದು, ರೈತರು ಕೇವಲ ₹612 ಪ್ರೀಮಿಯಂ ಹಣ ಪಾವತಿಸಬೇಕಾಗುತ್ತದೆ. ತಾಲೂಕಿನ ಎಲ್ಲಾ ಗ್ರಾಮ ಪಂಚಾಯತ್ ವ್ಯಾಪ್ತಿಯ ರೈತರಿಗೂ ಈ ಯೋಜನೆ ಅನ್ವಯವಾಗಲಿದ್ದು, ಅರ್ಜಿ ಸಲ್ಲಿಸಲು ಆಗಸ್ಟ್ 14 ಕೊನೆಯ ದಿನವಾಗಿದೆ.
ನೋಂದಣಿಗಾಗಿ ರೈತರು ಫ್ರೂಟ್ಸ್ ಐಡಿ (FRUITS ID), ಆಧಾರ್ ಕಾರ್ಡ್, ಬ್ಯಾಂಕ್ ಪಾಸ್ಬುಕ್ ಹಾಗೂ ಜಮೀನಿನ ಪಹಣಿಯೊಂದಿಗೆ ತಮ್ಮ ಸಮೀಪದ ರಾಷ್ಟ್ರೀಕೃತ ಬ್ಯಾಂಕ್, ವ್ಯವಸಾಯ ಸೇವಾ ಸಹಕಾರಿ ಸಂಘ (PCCS), ಸಿಎಸ್ಸಿ ಕೇಂದ್ರ ಅಥವಾ ಗ್ರಾಮ ಒನ್ ಕೇಂದ್ರಗಳನ್ನು ಸಂಪರ್ಕಿಸಿ ಯೋಜನೆಯ ಪ್ರಯೋಜನ ಪಡೆಯುವಂತೆ ಕಾರವಾರ ತಾಲೂಕು ಸಹಾಯಕ ಕೃಷಿ ನಿರ್ದೇಶಕರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
