ಕಾರವಾರ: ತಾಲೂಕಿನ ಅಸ್ನೋಟಿಯ ಪ್ರತಿಷ್ಠಿತ ಅಸ್ನೋಟಿ ಶಿಕ್ಷಣ ಸಂಸ್ಥೆಯಲ್ಲಿ 80 ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಅತ್ಯಂತ ಸಂಭ್ರಮ ಮತ್ತು ದೇಶಭಕ್ತಿಯಿಂದ ಆಚರಿಸಲಾಯಿತು.
ಶಾಲಾ ಆವರಣ ರಾಷ್ಟ್ರಧ್ವಜದ ಬಣ್ಣಗಳಿಂದ ಕಂಗೊಳಿಸುತ್ತಿತ್ತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಸಂಸ್ಥೆಯ ಉಪಾಧ್ಯಕ್ಷರಾದ ಗಿರೀಶ್ ದೇಸಾಯಿ ಅವರು ಬೆಳಿಗ್ಗೆ 7.45 ಗಂಟೆಗೆ ರಾಷ್ಟ್ರಧ್ವಜವನ್ನು ಹಾರಿಸಿ, ನೆರೆದಿದ್ದ ವಿದ್ಯಾರ್ಥಿಗಳು, ಶಿಕ್ಷಕರು ಮತ್ತು ಪೋಷಕರಿಗೆ ಶುಭ ಹಾರೈಸಿ,
ಈ ಸಂದರ್ಭದಲ್ಲಿ ಮಾತನಾಡಿದ ಅವರು, ಸ್ವಾತಂತ್ರ್ಯ ಎಂದರೆ ಕೇವಲ ರಜಾದಿನವಲ್ಲ. ನಮ್ಮ ಹಿರಿಯರು ನೀಡಿದ ತ್ಯಾಗದ ಫಲ. ಇಂದಿನ ವಿದ್ಯಾರ್ಥಿಗಳೇ ನಾಳೆಯ ದೇಶದ ಆಸ್ತಿ. ಶಿಸ್ತು, ಪ್ರಾಮಾಣಿಕತೆ ಮತ್ತು ದೇಶಸೇವೆಯ ಮನೋಭಾವ ಪ್ರತಿಯೊಬ್ಬರಲ್ಲೂ ಇರಬೇಕು. ಶಿಕ್ಷಣದ ಜೊತೆಗೆ ಸಂಸ್ಕಾರವೂ ಅಷ್ಟೇ ಮುಖ್ಯ ಎಂದು ಕರೆ ನೀಡಿದರು.
ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಸಂಸ್ಥೆಯ ಕಾರ್ಯದರ್ಶಿ ಸಂಜಯ ಸಾಳುಂಕೆ ಯವರು ದೇಶದ ಪ್ರಸ್ತುತ ಸ್ಥಿತಿಗತಿ ಮತ್ತು ಭವಿಷ್ಯದ ಬಗ್ಗೆ ವಿಸ್ತಾರವಾಗಿ ಮಾತನಾಡಿದರು. ಇಂದು ಭಾರತ ವಿಶ್ವದಲ್ಲೇ ವೇಗವಾಗಿ ಬೆಳೆಯುತ್ತಿರುವ ರಾಷ್ಟ್ರ. ತಂತ್ರಜ್ಞಾನ, ವಿಜ್ಞಾನ, ಕ್ರೀಡೆ ಎಲ್ಲಾ ಕ್ಷೇತ್ರದಲ್ಲೂ ನಮ್ಮ ಯುವಕರು ಸಾಧನೆ ಮಾಡುತ್ತಿದ್ದಾರೆ.
ಆದರೆ ಅದೇ ಸಮಯದಲ್ಲಿ ಜಾತಿ, ಧರ್ಮ, ಭ್ರಷ್ಟಾಚಾರದಂತಹ ಸಮಸ್ಯೆಗಳನ್ನೂ ನಾವು ಎದುರಿಸಬೇಕಾಗಿದೆ. ಈ ಸವಾಲುಗಳನ್ನು ಎದುರಿಸಿ ದೇಶವನ್ನು ಇನ್ನಷ್ಟು ಬಲಿಷ್ಠಗೊಳಿಸುವ ಜವಾಬ್ದಾರಿ ನಿಮ್ಮ ಮೇಲಿದೆ” ಎಂದು ವಿದ್ಯಾರ್ಥಿಗಳಿಗೆ ಪ್ರೇರಣೆ ನೀಡಿದರು.
ಕಾರ್ಯಕ್ರಮದಲ್ಲಿ ಸಂಸ್ಥೆಯ ಸದಸ್ಯರಾದ ಶಶಿಕಾಂತ ಸಾಳುಂಕೆ ನ್ಯೂಮಾಡಲ್ ಇಂಗ್ಲಿಷ್ ಸ್ಕೂಲ ಅಸ್ನೋಟಿ ಮುಖ್ಯಾಧ್ಯಾಪಕಿಯರಾದ ಶೃತಿಕಾ ದೇಸಾಯಿ, ಜಯಲಕ್ಷ್ಮೀ ಬಾಂದೇಕರ,ಸವಿತಾ ನಾಯ್ಕ ಉಪಸ್ಥಿತರಿದ್ದು ವಿದ್ಯಾರ್ಥಿಗಳಿಗೆ ಶುಭ ಕೋರಿದರು.
ಸ್ಕೌಟ್ ಮತ್ತು ಗೈಡ್ ವಿದ್ಯಾರ್ಥಿಗಳು ಗೌರವ ವಂದನೆ ಸಲ್ಲಿಸಿದರು. ದೈಹಿಕ ಶಿಕ್ಷಕರಾದ ಶರತ್ ಗಾಂವಕರ್ ಅವರು ಧ್ವಜಾರೋಹಣ ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ನಡೆಸಿಕೊಟ್ಟರು.ಸದರಿ ಕಾರ್ಯಕ್ರಮಕ್ಕೆ ಸಹಶಿಕ್ಷಕರಾದ ಸಂತೋಷ ಕಾಂಬಳೆ ಯವರು ಸಹಕಾರ ನೀಡಿದರು.
ಶಿವಾಜಿ ವಿದ್ಯಾ ಮಂದಿರ ಮುಖ್ಯಾಧ್ಯಾಪಕರಾದ ಡಾ. ಗಣೇಶ ಬಿಷ್ಟಣ್ಣನವರ ಅವರು ಕಾರ್ಯಕ್ರಮ ನಿರ್ವಹಿಸಿ, ಆಗಮಿಸಿದ ಎಲ್ಲಾ ಅತಿಥಿಗಳಿಗೆ ಮತ್ತು ಪೋಷಕರಿಗೆ ವಂದಿಸಿದರು. ದೇಶಭಕ್ತಿ ಗೀತೆಗಳು, ಭಾಷಣ ಸ್ಪರ್ಧೆ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು ಕಾರ್ಯಕ್ರಮಕ್ಕೆ ಮೆರುಗು ನೀಡಿದವು.ಸಮಾರಂಭದಲ್ಲಿ ಮಾಜಿ ಸೈನಿಕರು, ಶಿಕ್ಷಕ ವರ್ಗ, ಸಂಸ್ಥೆಯ ಸಿಬ್ಬಂದಿ, ವಿದ್ಯಾರ್ಥಿಗಳು ಮತ್ತು ಪಾಲಕರು ಗ್ರಾಮಸ್ಥರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
