ಸೆಪ್ಟೆಂಬರ್ 10, 2026
ಗುರುವಾರ

ನಮ್ಮನ್ನು ಅನುಸರಿಸಿ

Uttara-Kannada

ಸೀಬರ್ಡ್, ಕೈಗಾದಲ್ಲಿ ಸ್ಥಳೀಯರಿಗೆ ಉದ್ಯೋಗದ ಆದ್ಯತೆ ನೀಡಿ: ಸಚಿವ ಲಕ್ಷ್ಮಣ್ ಸವದಿ ಅವರಿಗೆ ಮನವಿ

Pakka News Web • 15 ಆಗಸ್ಟ್ 2026,

ಕಾರವಾರ:ಉತ್ತರ ಕನ್ನಡ ಜಿಲ್ಲೆಯ ಮಹತ್ವಾಕಾಂಕ್ಷೆಯ ಬೃಹತ್ ರಾಷ್ಟ್ರೀಯ ಯೋಜನೆಗಳಾದ ಸೀಬರ್ಡ್ ನೌಕಾನೆಲೆ ಮತ್ತು ಕೈಗಾ ಅಣು ವಿದ್ಯುತ್ ಸ್ಥಾವರಗಳಲ್ಲಿ ಕಾರವಾರ ಹಾಗೂ ಅಂಕೋಲಾ ತಾಲೂಕಿನ ಸ್ಥಳೀಯ ಅರ್ಹ ಯುವಕರಿಗೆ ಉದ್ಯೋಗಾವಕಾಶಗಳಲ್ಲಿ ಮೊದಲ ಆದ್ಯತೆ ನೀಡಬೇಕೆಂದು ಒತ್ತಾಯಿಸಿ ಜಿಲ್ಲಾ ಉಸ್ತುವಾರಿ ಸಚಿವರಾದ ಲಕ್ಷ್ಮಣ್ ಸವದಿ ಅವರಿಗೆ ಯುವ ಮುಖಂಡರ ನಿಯೋಗವು ಮನವಿ ಪತ್ರ ಸಲ್ಲಿಸಿತು.

ಕಾರವಾರ ನಗರದಲ್ಲಿ ಸಚಿವರನ್ನು ಭೇಟಿಯಾದ ಮುಖಂಡರು, ಸ್ಥಳೀಯ ಯುವ ಸಮುದಾಯ ಎದುರಿಸುತ್ತಿರುವ ತೀವ್ರ ನಿರುದ್ಯೋಗ ಸಮಸ್ಯೆಯ ಕುರಿತು ಅವರ ಗಮನ ಸೆಳೆದರು. ಕಾರವಾರ ಮತ್ತು ಅಂಕೋಲಾ ಭಾಗದ ನೂರಾರು ಕುಟುಂಬಗಳು ದೇಶದ ರಕ್ಷಣೆ ಮತ್ತು ಇಂಧನ ಭದ್ರತೆಗೆ ಪೂರಕವಾದ ಈ ಬೃಹತ್ ಯೋಜನೆಗಳಿಗಾಗಿ ತಮ್ಮ ಫಲವತ್ತಾದ ಕೃಷಿ ಭೂಮಿ, ಮನೆ ಹಾಗೂ ನೈಸರ್ಗಿಕ ಸಂಪನ್ಮೂಲಗಳನ್ನು ತ್ಯಾಗ ಮಾಡಿವೆ.

ಆದರೆ, ಯೋಜನೆಗಳು ಪೂರ್ಣಗೊಂಡು ವರ್ಷಗಳು ಕಳೆದರೂ ಇಲ್ಲಿನ ಸ್ಥಳೀಯ ವಿದ್ಯಾವಂತ ನಿರುದ್ಯೋಗಿ ಯುವಕರಿಗೆ ಸೂಕ್ತ ಉದ್ಯೋಗಾವಕಾಶಗಳು ದೊರೆಯುತ್ತಿಲ್ಲ. ಹೊರಗಿನಿಂದ ಬರುವವರಿಗೆ ಪ್ರಾಶಸ್ತ್ಯ ಸಿಗುತ್ತಿದ್ದು, ಭೂಮಿ ಕಳೆದುಕೊಂಡ ಹಾಗೂ ಸ್ಥಳೀಯ ಯುವ ಸಮುದಾಯ ಅನ್ಯಾಯಕ್ಕೆ ಒಳಗಾಗುತ್ತಿದೆ ಎಂಬ ತೀವ್ರ ಅಸಮಾಧಾನವನ್ನು ಸಚಿವರ ಮುಂದೆ ವ್ಯಕ್ತಪಡಿಸಲಾಯಿತು.

ಕೈಗಾ ಮತ್ತು ಸೀಬರ್ಡ್ ಯೋಜನೆಗಳ ತಾಂತ್ರಿಕ, ತಾಂತ್ರಿಕೇತರ, ಗ್ರೂಪ್-ಸಿ ಮತ್ತು ಡಿ ವೃಂದದ ಹುದ್ದೆಗಳು ಸೇರಿದಂತೆ ಗುತ್ತಿಗೆ ಹಾಗೂ ಹೊರಗುತ್ತಿಗೆ ಆಧಾರದ ನೇಮಕಾತಿಗಳಲ್ಲಿ ಕಾರವಾರ-ಅಂಕೋಲಾದ ಸ್ಥಳೀಯರಿಗೆ ಮೊದಲ ಆದ್ಯತೆ ಕಲ್ಪಿಸಬೇಕು. ಈ ನಿಟ್ಟಿನಲ್ಲಿ ರಾಜ್ಯ ಸರ್ಕಾರವು ಮಧ್ಯಪ್ರವೇಶಿಸಿ, ಕೇಂದ್ರ ರಕ್ಷಣಾ ಸಚಿವಾಲಯ ಹಾಗೂ ಅಣುಶಕ್ತಿ ಇಲಾಖೆಯೊಂದಿಗೆ ಮಾತುಕತೆ ನಡೆಸಿ ಸ್ಥಳೀಯರಿಗೆ ಕಡ್ಡಾಯ ಮೀಸಲಾತಿ ಅಥವಾ ಆದ್ಯತೆ ನೀಡುವ ನಿಯಮಾವಳಿಯನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಬೇಕು ಎಂದು ಒತ್ತಾಯಿಸಲಾಯಿತು.

ಮನವಿಯನ್ನು ಸ್ವೀಕರಿಸಿ ಮಾತನಾಡಿದ ಸಚಿವರು, ಈ ಗಂಭೀರ ವಿಷಯವನ್ನು ಸರ್ಕಾರದ ಮಟ್ಟದಲ್ಲಿ ಚರ್ಚಿಸಿ, ಸಂಬಂಧಪಟ್ಟ ಯೋಜನಾ ಪ್ರಾಧಿಕಾರಗಳೊಂದಿಗೆ ಸಮಾಲೋಚನೆ ನಡೆಸಿ ಸ್ಥಳೀಯ ಯುವಕರಿಗೆ ನ್ಯಾಯ ಕೊಡಿಸಲು ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ಭರವಸೆ ನೀಡಿದರು.

ಶಾಸಕ ಸತೀಶ್ ಸೈಲ್ ಸಮ್ಮುಖದಲ್ಲಿ ಯುವ  ಮುಖಂಡರಾದ ದರ್ಶನ್ ಕೃಷ್ಣಾನಂದ್ ನಾಯ್ಕ, ನೂತನ್ ಜೈನ್, ನಾಗರಾಜ್ ಗೌಡ, ಅಭಿಷೇಕ್ ರಾಣೆ, ಅಭಿ ಬಾಡ್ಕರ್, ನಾಗರಾಜ್ ಅಮದಳ್ಳಿ, ಸಂತೋಷ್ ನಾಯ್ಕ ಸೇರಿದಂತೆ ಹಲವು ಪ್ರಮುಖ ಯುವ ಕಾರ್ಯಕರ್ತರು ಉಪಸ್ಥಿತರಿದ್ದರು.


ಪ್ರಚಾರ W26
ಜಾಹೀರಾತು ಸ್ಥಳ ಲಭ್ಯವಿದೆ
300x250