ಹೊನ್ನಾವರ ತಾಲೂಕಿನ ಪ್ರತಿಷ್ಠಿತ ಅಳ್ಳಂಕಿ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ 80ನೇ ಸ್ವಾತಂತ್ರ್ಯ ದಿನಾಚರಣೆಯನ್ನು ದೇಶಭಕ್ತಿ ಮತ್ತು ಸಂಭ್ರಮದ ವಾತಾವರಣದಲ್ಲಿ ಆಚರಿಸಲಾಯಿತು. ಕಾಲೇಜಿನ ಪ್ರಾಂಶುಪಾಲ ಕಿಶೋರ ನಾಯ್ಕ ಅವರು ಧ್ವಜಾರೋಹಣ ನೆರವೇರಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಬಳಿಕ ನಡೆದ ಸಭಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಸಂಸ್ಥೆಯ ಉಪಾಧ್ಯಕ್ಷ ಚಂದ್ರಕಾಂತ ಕೊಚರೇಕರ ಅವರು ಮಾತನಾಡಿ, ಇಂದಿನ ವಿದ್ಯಾರ್ಥಿಗಳೇ ದೇಶದ ಅಮೂಲ್ಯ ಆಸ್ತಿಯಾಗಿದ್ದು, ಶಿಸ್ತು, ಪ್ರಾಮಾಣಿಕತೆ ಹಾಗೂ ದೇಶಭಕ್ತಿ ಪ್ರತಿಯೊಬ್ಬರಲ್ಲೂ ಇರಬೇಕು ಎಂದು ಹೇಳಿದರು.
ಶಿಕ್ಷಣದ ಜೊತೆಗೆ ಉತ್ತಮ ಸಂಸ್ಕಾರವೂ ಅಷ್ಟೇ ಮುಖ್ಯವಾಗಿದ್ದು, ಸ್ವಾತಂತ್ರ್ಯವನ್ನು ಸ್ವೇಚ್ಛಾಚಾರವೆಂದು ಭಾವಿಸಬಾರದು ಎಂದು ಕಿವಿಮಾತು ಹೇಳಿದರು. ದೇಶವನ್ನು ಕಾಡುತ್ತಿರುವ ಭ್ರಷ್ಟಾಚಾರ ಎಂಬ ಪಿಡುಗನ್ನು ನಿರ್ಮೂಲನೆ ಮಾಡಲು ಎಲ್ಲರೂ ಸಂಕಲ್ಪ ಮಾಡಬೇಕಿದ್ದು, ಮತದಾನದ ಪಾವಿತ್ರ್ಯವನ್ನು ಕಾಪಾಡುವ ಮೂಲಕ ಜನರು ಮಾದರಿಯಾಗಬೇಕು ಎಂದು ಕರೆ ನೀಡಿದರು.
ಹಿರಿಯ ಉಪನ್ಯಾಸಕ ಜಿ.ಜಿ. ಹೆಗಡೆ ಅವರು ಮಾತನಾಡಿ, ಭಾರತವು ಇಂದು ವಿಶ್ವದಲ್ಲೇ ವೇಗವಾಗಿ ಅಭಿವೃದ್ಧಿ ಹೊಂದುತ್ತಿರುವ ರಾಷ್ಟ್ರವಾಗಿದ್ದು, ತಂತ್ರಜ್ಞಾನ, ವಿಜ್ಞಾನ ಹಾಗೂ ಕ್ರೀಡಾ ಕ್ಷೇತ್ರಗಳಲ್ಲಿ ಯುವಕರು ಗಮನಾರ್ಹ ಸಾಧನೆ ಮಾಡುತ್ತಿದ್ದಾರೆ ಎಂದು ಹೇಳಿದರು. ಆದರೆ ಜಾತಿ, ಧರ್ಮ ಹಾಗೂ ಭ್ರಷ್ಟಾಚಾರದಂತಹ ಸವಾಲುಗಳೂ ಸಮಾಜದ ಮುಂದಿದ್ದು, ಅವುಗಳನ್ನು ಎದುರಿಸಿ ದೇಶವನ್ನು ಮತ್ತಷ್ಟು ಬಲಿಷ್ಠಗೊಳಿಸುವ ಜವಾಬ್ದಾರಿ ಯುವ ಪೀಳಿಗೆಯ ಮೇಲಿದೆ ಎಂದು ವಿದ್ಯಾರ್ಥಿಗಳಿಗೆ ಪ್ರೇರಣೆ ನೀಡಿದರು.
ಕಾರ್ಯಕ್ರಮದಲ್ಲಿ ಕಾಲೇಜು ಅಭಿವೃದ್ಧಿ ಸಮಿತಿಯ ಸದಸ್ಯ ಜಿ.ಟಿ. ಹಳ್ಳೇರ ಅವರು ಸಹ ಮಾತನಾಡಿದರು. ಅಧ್ಯಕ್ಷತೆ ವಹಿಸಿದ್ದ ಪ್ರಾಂಶುಪಾಲ ಕಿಶೋರ ನಾಯ್ಕ ಅವರು ವಿದ್ಯಾರ್ಥಿಗಳು ತಮ್ಮ ಆಚಾರ-ವಿಚಾರ, ನಡೆ-ನುಡಿಗಳನ್ನು ಇತರರಿಗೆ ಮಾದರಿಯಾಗುವಂತೆ ರೂಪಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಈ ಸಂದರ್ಭದಲ್ಲಿ ವಿದ್ಯಾರ್ಥಿಗಳಿಂದ ದೇಶಭಕ್ತಿ ಗೀತೆಗಳು, ಭಾಷಣಗಳು ಹಾಗೂ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು. ಅಲ್ಲದೆ ಕಾಲೇಜು ಆವರಣದ ಹೊರಭಾಗದಲ್ಲಿ ಗಿಡ ನೆಡುವ ಮೂಲಕ ಪರಿಸರ ಕಾಳಜಿಯ ಸಂದೇಶವನ್ನು ಸಾರಲಾಯಿತು.
ಕಾರ್ಯಕ್ರಮದ ವೇದಿಕೆಯಲ್ಲಿ ಜಾಫರ್ ಸಾಬ್, ಹಿರಿಯ ಉಪನ್ಯಾಸಕರಾದ ಜಿ.ಜಿ. ಹೆಗಡೆ, ಕುಮಟಾಕರ, ಮಂಜುನಾಥ ನಾಯ್ಕ, ಶೇಖರ ನಾಯ್ಕ, ರೇಷ್ಮಾ ನಾಯ್ಕ, ಅರ್ಚನಾ ನಾಯ್ಕ, ವೃಂದಾ ಹೆಗಡೆ, ಸತೀಶ ನಾಯ್ಕ ಸೇರಿದಂತೆ ಹಲವರು ಉಪಸ್ಥಿತರಿದ್ದರು. ಸಮಿಯಾ ಭಾನು ಸ್ವಾಗತಿಸಿದರು. ಪದ್ಮಾವತಿ ನಾಯ್ಕ ವಂದನಾರ್ಪಣೆ ಸಲ್ಲಿಸಿದರೆ, ಕು. ಸ್ವಾತಿ ಮೇಸ್ತ ಕಾರ್ಯಕ್ರಮವನ್ನು ನಿರೂಪಿಸಿದರು.
