ಕಾರವಾರ: ಉತ್ತರ ಕನ್ನಡ ಜಿಲ್ಲೆಯ 1978ರ ಪೂರ್ವದಿಂದ ಅರಣ್ಯ ಭೂಮಿಯಲ್ಲಿ ಸಾಗುವಳಿ ಮಾಡುತ್ತಿರುವ ಅರ್ಹ ರೈತರಿಗೆ ತಕ್ಷಣ ಹಕ್ಕುಪತ್ರ ಹಾಗೂ ಪಹಣಿ ನೀಡಬೇಕು ಸೇರಿದಂತೆ ರೈತರ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ರಾಜ್ಯ ಅನ್ನದಾತ ರೈತ ಸಂಘ ಮತ್ತು ಹಸಿರು ಸೇನೆ ನೇತೃತ್ವದಲ್ಲಿ ಜಿಲ್ಲಾಧಿಕಾರಿ ಮೂಲಕ ಮುಖ್ಯಮಂತ್ರಿಗಳಿಗೆ ಸೋಮವಾರ ಮನವಿ ಸಲ್ಲಿಸಲಾಯಿತು.

ಕರ್ನಾಟಕ ಅಹಿಂದ ರಕ್ಷಣಾ ಸಮಿತಿ ಹಾಗೂ ರೈತ ಮುಖಂಡರ ನೇತೃತ್ವದ ನಿಯೋಗವು ಜಿಲ್ಲಾಡಳಿತದ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿ, ಅರಣ್ಯ ಭೂಮಿಯನ್ನು ನಂಬಿಕೊಂಡು ಮೂರ್ನಾಲ್ಕು ತಲೆಮಾರುಗಳಿಂದ ಬದುಕುತ್ತಿರುವ ರೈತರಿಗೆ ಇನ್ನೂ ಹಕ್ಕುಪತ್ರ ದೊರೆಯದಿರುವುದರಿಂದ ಹಲವು ಸರ್ಕಾರಿ ಸೌಲಭ್ಯಗಳಿಂದ ವಂಚಿತರಾಗುತ್ತಿದ್ದಾರೆ.
1969ರ ಸರ್ಕಾರಿ ಆದೇಶದ ಅನ್ವಯ ಬಾಕಿ ಉಳಿದಿರುವ ಎಲ್ಲ ಪ್ರಕರಣಗಳನ್ನು ಶೀಘ್ರ ಇತ್ಯರ್ಥಪಡಿಸಿ, 1978ರ ಪೂರ್ವದಿಂದ ಸಾಗುವಳಿ ಮಾಡುತ್ತಿರುವ ಅರ್ಹ ರೈತರಿಗೆ ಹಕ್ಕುಪತ್ರ ವಿತರಿಸಬೇಕು ಎಂದು ಮುಖಂಡರು ಒತ್ತಾಯಿಸಿದರು. ಹಕ್ಕುಪತ್ರ ಇಲ್ಲದ ಕಾರಣ ಕೃಷಿ ಸಾಲ, ಮಕ್ಕಳ ವಿದ್ಯಾಭ್ಯಾಸದ ಸಾಲ ಹಾಗೂ ಬೆಳೆ ವಿಮೆ ಸೇರಿದಂತೆ ವಿವಿಧ ಸೌಲಭ್ಯಗಳನ್ನು ಪಡೆಯಲು ರೈತರಿಗೆ ತೊಂದರೆಯಾಗುತ್ತಿದೆ ಎಂದು ಮನವಿಯಲ್ಲಿ ತಿಳಿಸಲಾಗಿದೆ.
ಜಿಪಿಎಸ್ ಸರ್ವೇ ಪೂರ್ಣಗೊಂಡಿರುವ ಅರಣ್ಯ ಸಾಗುವಳಿ ಜಮೀನುಗಳಿಗೆ ತಕ್ಷಣ ವಿದ್ಯುತ್ ಕಂಬ ಹಾಗೂ ಪರಿವರ್ತಕ ಸೌಲಭ್ಯ ಕಲ್ಪಿಸಬೇಕು. ಯಲ್ಲಾಪುರ ತಾಲೂಕಿನ ಖಾರೇವಾಡ ಸೇರಿದಂತೆ ಹಲವು ಗ್ರಾಮಗಳಲ್ಲಿ ಜಿಪಿಎಸ್ ಸರ್ವೇ ಪೂರ್ಣಗೊಂಡಿದ್ದರೂ ವಿದ್ಯುತ್ ಸಂಪರ್ಕ ಇಲ್ಲದೆ ರೈತರು ನೀರಾವರಿ ಸೌಲಭ್ಯದಿಂದ ವಂಚಿತರಾಗಿದ್ದಾರೆ. ಕಂದಾಯ ದಾಖಲೆಗಳ 11ನೇ ಕಾಲಂನಲ್ಲಿ ದಾಖಲಾಗಿರುವ ರೈತರ ಹೆಸರುಗಳನ್ನು 9ನೇ ಕಾಲಂಗೆ ವರ್ಗಾಯಿಸುವ ಪ್ರಕ್ರಿಯೆಯನ್ನೂ ತ್ವರಿತಗೊಳಿಸಬೇಕು ಎಂದು ಆಗ್ರಹಿಸಿದರು.
ಮಳೆಹಾನಿ ಹಾಗೂ ಬರದಿಂದ ಸಂಕಷ್ಟದಲ್ಲಿರುವ ರೈತರ ನೆರವಿಗೆ ರಾಷ್ಟ್ರೀಕೃತ ಮತ್ತು ಸಹಕಾರಿ ಬ್ಯಾಂಕುಗಳ ಕೃಷಿ ಸಾಲ ಸಂಪೂರ್ಣ ಮನ್ನಾ ಮಾಡಬೇಕು. ಮುಂಡಗೋಡು, ಯಲ್ಲಾಪುರ ಸೇರಿದಂತೆ ಬರಪೀಡಿತ ತಾಲೂಕುಗಳ ರೈತರಿಗೆ ಪ್ರತಿ ಎಕರೆಗೆ ಕನಿಷ್ಠ 25 ಸಾವಿರ ರೂ. ಪರಿಹಾರ ನೀಡಬೇಕು ಎಂದು ಒತ್ತಾಯಿಸಲಾಯಿತು.
ಮುಂಡಗೋಡು ತಾಲೂಕಿನ ಕ್ಯಾಸನಕೇರಿ ಗ್ರಾಮದ ಸರ್ವೇ ನಂ. 65ರ ಬಂಡಿದಾರಿ ವಿವಾದ ಸೇರಿದಂತೆ ಜಿಲ್ಲೆಯಾದ್ಯಂತ ರೈತರ ಹೊಲಗಳಿಗೆ ಸಂಪರ್ಕ ಕಲ್ಪಿಸುವ ಕಾಲುದಾರಿ ಹಾಗೂ ಬಂಡಿದಾರಿ ಒತ್ತುವರಿ ತೆರವುಗೊಳಿಸಲು ಕಂದಾಯ ಸಚಿವರು ಮತ್ತು ಜಿಲ್ಲಾಧಿಕಾರಿಗಳು ನೀಡಿರುವ ಆದೇಶಗಳನ್ನು ತಾಲೂಕು ಸರ್ವೇ ಇಲಾಖೆ ತಕ್ಷಣ ಜಾರಿಗೊಳಿಸಬೇಕು ಎಂದು ಮನವಿಯಲ್ಲಿ ತಿಳಿಸಲಾಗಿದೆ.
ರೈತರ ಬೇಡಿಕೆಗಳಿಗೆ ಸರ್ಕಾರ ಕೂಡಲೇ ಸ್ಪಂದಿಸದಿದ್ದರೆ ಮುಂಡಗೋಡು ತಹಶೀಲ್ದಾರ್ ಕಚೇರಿ ಎದುರು ಧರಣಿ ನಡೆಸಲಾಗುವುದು. ಬಳಿಕ ರಾಜ್ಯವ್ಯಾಪಿ ಹೋರಾಟ ನಡೆಸಿ ಸರ್ಕಾರಕ್ಕೆ ಕಪ್ಪುಬಾವುಟ ಪ್ರದರ್ಶಿಸುವ ಮೂಲಕ ತೀವ್ರ ಸ್ವರೂಪದ ಪ್ರತಿಭಟನೆ ನಡೆಸಲಾಗುವುದು ಎಂದು ರಾಜ್ಯ ಅಧ್ಯಕ್ಷ ಚಿದಾನಂದ ಹ. ಹರಿಜನ, ಉಪಾಧ್ಯಕ್ಷ ಭೀಮಸಿ ವಾಲ್ಮೀಕಿ, ಜಿಲ್ಲಾಧ್ಯಕ್ಷ ರಾಮಚಂದ್ರ ಹರಿಜನ, ಸೋಮಲಿಂಗ ಬೆಣ್ಣೆ ಹಾಗೂ ಪದಾಧಿಕಾರಿಗಳು ಎಚ್ಚರಿಕೆ ನೀಡಿದರು.
