ಮನೆ ಬಾಗಿಲಿಗೇ ಜಾತಿ-ಆದಾಯ ಪ್ರಮಾಣಪತ್ರ: ಉತ್ತರ ಕನ್ನಡ ಜಿಲ್ಲೆಯಲ್ಲಿ 9.60 ಲಕ್ಷ ಪತ್ರಗಳ ವಿತರಣೆಯೊಂದಿಗೆ ಶೇ. 85.76ರಷ್ಟು ಪ್ರಗತಿ
ಸಾರ್ವಜನಿಕರು ಸರ್ಕಾರಿ ಕಚೇರಿಗಳಿಗೆ ಅಲೆದಾಡುವುದನ್ನು ತಪ್ಪಿಸಲು ರಾಜ್ಯ ಸರ್ಕಾರ ಜಾರಿಗೆ ತಂದಿರುವ ಮನೆ ಬಾಗಿಲಿಗೆ ಉಚಿತ ಡಿಜಿಟಲ್ ಜಾತಿ ಮತ್ತು ಆದಾಯ ಪ್ರಮಾಣಪತ್ರ ತಲುಪಿಸುವ ಮಹತ್ವಾಕಾಂಕ್ಷಿ ಯೋಜನೆಗೆ ಉತ್ತರ ಕನ್ನಡ ಜಿಲ್ಲೆಯಲ್ಲಿ ಭರ್ಜರಿ ಯಶಸ್ಸು ದೊರೆತಿದೆ. ಜಿಲ್ಲೆಯಲ್ಲಿ ನಿಗದಿಪಡಿಸಲಾಗಿದ್ದ ಒಟ್ಟು 11,17,946 ಪ್ರಮಾಣಪತ್ರಗಳ ವಿತರಣಾ ಗುರಿಯಲ್ಲಿ ಇದುವರೆಗೆ 9,60,218 ಪತ್ರಗಳನ್ನು ಫಲಾನುಭವಿಗಳ ಕೈಸೇರಿಸುವ ಮೂಲಕ ಶೇ. 85.76ರಷ್ಟು ಪ್ರಗತಿ ಸಾಧಿಸಲಾಗಿದೆ.
ತಾಲೂಕುವಾರು ವಿತರಣೆಯಲ್ಲಿ ಕುಮಟಾ (1,65,025), ಅಂಕೋಲಾ (1,22,805), ಹೊನ್ನಾವರ (1,09,188) ಹಾಗೂ ಕಾರವಾರ (1,04,426) ಮುಂಚೂಣಿಯಲ್ಲಿದ್ದು, ಶಿರಸಿ, ಮುಂಡಗೋಡು, ಹಳಿಯಾಳ, ಯಲ್ಲಾಪುರ, ಸಿದ್ದಾಪುರ, ಸೂಪಾ, ಭಟ್ಕಳ ಮತ್ತು ದಾಂಡೇಲಿ ತಾಲೂಕುಗಳಲ್ಲೂ ಸಮರೋಪಾದಿಯಲ್ಲಿ ವಿತರಣೆ ಕಾರ್ಯ ನಡೆದಿದೆ.
ಈ ಹಿಂದೆ ಸರ್ವರ್ ಸಮಸ್ಯೆ, ಕಚೇರಿಗಳ ಸಿಬ್ಬಂದಿ ಕೊರತೆಯಿಂದಾಗಿ ಜನರು ಒಂದೇ ದಾಖಲೆಗಾಗಿ ತಿಂಗಳುಗಟ್ಟಲೆ ಕಾಯಬೇಕಿತ್ತು; ವಿದ್ಯಾರ್ಥಿಗಳು ಪ್ರವೇಶ ಹಾಗೂ ಸ್ಕಾಲರ್‌ಶಿಪ್ ವಂಚಿತರಾಗುವ ಸಂಕಷ್ಟ ಎದುರಾಗುತ್ತಿತ್ತು. ಇದಕ್ಕೆ ಶಾಶ್ವತ ಪರಿಹಾರ ಕಂಡುಕೊಂಡಿರುವ ಸರ್ಕಾರ, ಕಂದಾಯ ದಾಖಲೆಗಳು, ಜಾತಿ ಗಣತಿ ದತ್ತಾಂಶ ಹಾಗೂ ಆಧಾರ್ ಸಂಯೋಜನೆಯನ್ನು ಬಳಸಿಕೊಂಡು ನೇರವಾಗಿ ಫಲಾನುಭವಿಗಳ ಮನೆ ಬಾಗಿಲಿಗೇ ಅಧಿಕೃತ ದಾಖಲೆ ತಲುಪಿಸುವ ಹೊಸ ವ್ಯವಸ್ಥೆ ರೂಪಿಸಿದೆ. ವಿತರಣಾ ಪ್ರಕ್ರಿಯೆಯಲ್ಲಿ ಪಾರದರ್ಶಕತೆ ಕಾಯ್ದುಕೊಳ್ಳಲು ಕುಟುಂಬ ಸದಸ್ಯರ ಸಮ್ಮುಖದಲ್ಲೇ ಜಿಪಿಎಸ್ ಫೋಟೋ ಸೆರೆಹಿಡಿದು, ಬಾರ್‌ಕೋಡ್ ಸಮೇತ ಆನ್‌ಲೈನ್ ಸಿಂಕ್ ಮಾಡುವ ಸುರಕ್ಷತಾ ಕ್ರಮ ಕೈಗೊಳ್ಳಲಾಗಿದೆ.
ಜೊತೆಗೆ, ಈ ಪ್ರಮಾಣಪತ್ರಗಳ ಮೂಲಕ ಮತದಾರರ ಪಟ್ಟಿಯ ಸಮಗ್ರ ಪರಿಷ್ಕರಣೆ-2026ರ ಕುರಿತಾಗಿ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲಾಗುತ್ತಿದ್ದು, ಚುನಾವಣಾ ಆಯೋಗ ಸೂಚಿಸಿರುವ 11 ಮಾನ್ಯತೆ ಪಡೆದ ದಾಖಲೆಗಳಲ್ಲಿ ಒಂದಾಗಿ ಇದನ್ನು ಮತದಾರರ ಪರಿಶೀಲನೆಗೆ ಬಳಸಬಹುದಾಗಿದೆ.
ಶಾಲಾ-ಕಾಲೇಜು ಪ್ರವೇಶ, ಹಾಸ್ಟೆಲ್ ಸೌಲಭ್ಯ, ವಿದ್ಯಾರ್ಥಿವೇತನ, ಸರ್ಕಾರಿ ಉದ್ಯೋಗ ನೇಮಕಾತಿ, ವಯೋಮಿತಿ ಸಡಿಲಿಕೆ, ಸ್ಥಳೀಯ ಸಂಸ್ಥೆಗಳ ಚುನಾವಣಾ ಸ್ಪರ್ಧೆ ಹಾಗೂ ಕೃಷಿ ಸಾಲ-ವಸತಿ ಯೋಜನೆಗಳ ಸಬ್ಸಿಡಿ ಪಡೆಯಲು ಈ ಪ್ರಮಾಣಪತ್ರ ಅತ್ಯಂತ ಅನಿವಾರ್ಯವಾಗಿದೆ. ಆರಂಭದಲ್ಲಿ ತಾಂತ್ರಿಕ ಕಾರಣಗಳಿಂದ ಮಂದಗತಿಯಲ್ಲಿದ್ದ ಈ ಅಭಿಯಾನಕ್ಕೆ ಇದೀಗ ವಿಶೇಷ ಒತ್ತು ನೀಡಿ ಚುರುಕುಗೊಳಿಸಲಾಗಿದ್ದು, ಅತ್ಯಲ್ಪ ದಿನಗಳಲ್ಲೇ ಶೇ. 100ರಷ್ಟು ಗುರಿ ತಲುಪಲಾಗುವುದು ಎಂದು ಜಿಲ್ಲಾಧಿಕಾರಿ ಕೆ. ಲಕ್ಷ್ಮೀಪ್ರಿಯಾ ಭರವಸೆ ನೀಡಿದ್ದಾರೆ.
