ಸೆಪ್ಟೆಂಬರ್ 10, 2026
ಗುರುವಾರ

ನಮ್ಮನ್ನು ಅನುಸರಿಸಿ

Uttara-Kannada

ಉತ್ತರ ಕನ್ನಡದಲ್ಲಿ 5 ವರ್ಷದಲ್ಲಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ: ಸದ್ಗುರು ಭರವಸೆ

Pakka News Web • 19 ಆಗಸ್ಟ್ 2026,

ಕಾರವಾರ: ನಿಸ್ವಾರ್ಥ ಪ್ರೀತಿ ಮತ್ತು ಸೇವೆಯಿಂದ ಬೆಸೆದ ಸಂಬಂಧಗಳು ದೀರ್ಘಕಾಲ ಉಳಿಯುತ್ತವೆ. ಸೇವೆಯ ಮೂಲಕವೇ ಸಮಾಜದಲ್ಲಿ ವಿಶ್ವಾಸ ಬೆಳೆಸಿ ಜಗತ್ತನ್ನು ಒಂದಾಗಿಸಲು ಸಾಧ್ಯ ಎಂದು ಒನ್ ವರ್ಲ್ಡ್ ಒನ್ ಫ್ಯಾಮಿಲಿ ಮಿಷನ್ ಸಂಸ್ಥಾಪಕ ಸದ್ಗುರು ಶ್ರೀ ಮಧುಸೂದನ ಸಾಯಿ ಹೇಳಿದರು.

ಕಾರವಾರದಲ್ಲಿ ಬುಧವಾರ ನಡೆದ ‘ದಿವ್ಯ ಸಂಜೆ’ ಸಂವಾದ ಕಾರ್ಯಕ್ರಮದಲ್ಲಿ ಚಕ್ರವರ್ತಿ ಸೂಲಿಬೆಲೆ ಅವರ ಪ್ರಶ್ನೆಗಳಿಗೆ ಉತ್ತರಿಸಿದ ಅವರು, ತಮ್ಮ ಸಂಸ್ಥೆಯಲ್ಲಿ ಶಿಕ್ಷಣ ಅಥವಾ ಚಿಕಿತ್ಸೆ ಪಡೆದ ಬಳಿಕವೂ ಜನರು ಸುದೀರ್ಘ ಒಡನಾಟ ಹೊಂದುವುದಕ್ಕೆ ನಿಸ್ವಾರ್ಥ ಪ್ರೀತಿಯೇ ಕಾರಣ ಎಂದರು.

ಗುರುಕುಲ ಮಾದರಿಯ ಶಿಕ್ಷಣದ ಅಗತ್ಯವನ್ನು ಒತ್ತಿಹೇಳಿದ ಅವರು, ಶಿಕ್ಷಣ ವ್ಯವಸ್ಥೆಯಲ್ಲಿ ಸುಧಾರಣೆ ತಂದಾಗ ಮಾತ್ರ ‘ವಸುಧೈವ ಕುಟುಂಬಕಂ’ ಭಾವನೆ ಬೆಳೆಸಲು ಸಾಧ್ಯ ಎಂದರು. ಪ್ರವಚನಕ್ಕಿಂತ ಸೇವೆಗೆ ಹೆಚ್ಚಿನ ಶಕ್ತಿ ಇದೆ. ಫಿಜಿ, ಇರಾನ್, ಟರ್ಕಿ ಸೇರಿದಂತೆ ಹಲವು ದೇಶಗಳಲ್ಲಿ ಸೇವೆಯ ಮೂಲಕ ಜನರ ವಿಶ್ವಾಸ ಗಳಿಸಲಾಗುತ್ತಿದೆ ಎಂದು ಹೇಳಿದರು.

ಕೊವಿಡ್ ಬಳಿಕ ಅಧ್ಯಾತ್ಮದತ್ತ ಮುಖ ಮಾಡಿದವರು ಜೀವನದ ನಿಜವಾದ ಅರ್ಥವನ್ನು ಅರಿತುಕೊಂಡರು. ದೇಹವೇ ಬದುಕಿನ ಸರ್ವಸ್ವವಲ್ಲ ಎಂಬ ಅರಿವು ಅಧ್ಯಾತ್ಮದಿಂದ ಮೂಡುತ್ತದೆ ಎಂದರು.

ಉತ್ತರ ಕನ್ನಡಕ್ಕೆ ಆಸ್ಪತ್ರೆ ಭರವಸೆ

ಕಾರ್ಯಕ್ರಮದಲ್ಲಿ ಉತ್ತರ ಕನ್ನಡದಲ್ಲಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಸ್ಥಾಪಿಸುವಂತೆ ಸಭಿಕರು ಮನವಿ ಮಾಡಿದರು. ಇದಕ್ಕೆ ಪ್ರತಿಕ್ರಿಯಿಸಿದ ಸದ್ಗುರು, ವೈದ್ಯಕೀಯ ಕಾಲೇಜಿನ ವಿದ್ಯಾರ್ಥಿಗಳು ವಿದ್ಯಾಭ್ಯಾಸ ಪೂರ್ಣಗೊಳಿಸುವ ವೇಳೆಗೆ ಕಟ್ಟಡ ಮತ್ತು ಉಪಕರಣಗಳ ವ್ಯವಸ್ಥೆ ಮಾಡಿಕೊಂಡು, ದಾನಿಗಳು ಸಹಕರಿಸಿದರೆ ಮುಂದಿನ ಐದು ವರ್ಷಗಳಲ್ಲಿ ಜಿಲ್ಲೆಯಲ್ಲಿ ಉತ್ತಮ ಆಸ್ಪತ್ರೆ ಸ್ಥಾಪಿಸುವ ಸಾಧ್ಯತೆ ಇದೆ ಎಂದು ಭರವಸೆ ನೀಡಿದರು.

ಜಿಲ್ಲೆಯಲ್ಲಿ ಈಗಾಗಲೇ ಎರಡು ಸಾಯಿ ಸ್ವಾಸ್ಥ್ಯ ವೆಲ್‌ನೆಸ್ ಕೇಂದ್ರಗಳು ಕಾರ್ಯನಿರ್ವಹಿಸುತ್ತಿದ್ದು, ಮುಂದಿನ ದಿನಗಳಲ್ಲಿ ಅವುಗಳ ಸಂಖ್ಯೆಯನ್ನು ಹೆಚ್ಚಿಸಲಾಗುವುದು ಎಂದರು.


ಪ್ರಚಾರ W26
ಜಾಹೀರಾತು ಸ್ಥಳ ಲಭ್ಯವಿದೆ
300x250