ಸೆಪ್ಟೆಂಬರ್ 10, 2026
ಗುರುವಾರ

ನಮ್ಮನ್ನು ಅನುಸರಿಸಿ

Uttara-Kannada

ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲೇ ತೆರೆದ ಚರಂಡಿ ಗುಂಡಿ: ಅಪಾಯದ ನಡುವೆಯೇ ಸಂಚಾರ

Pakka News Web • 20 ಆಗಸ್ಟ್ 2026,

ಭಟ್ಕಳ: ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲೇ ತೆರೆದಿರುವ ಒಳಚರಂಡಿ ಗುಂಡಿಯೊಂದು ಹಲವು ತಿಂಗಳುಗಳಿಂದ ಸ್ಥಳೀಯರು ಹಾಗೂ ವಾಹನ ಸವಾರರಿಗೆ ಆತಂಕ ತಂದಿದೆ. ನಗರಸಭೆ ವ್ಯಾಪ್ತಿಯ ಮಣ್ಕುಳಿ ಬಳಿ ಇರುವ ಈ ಗುಂಡಿ ಮುಚ್ಚದೆ ಹಾಗೆಯೇ ಉಳಿದಿರುವುದರಿಂದ ಪ್ರತಿದಿನ ಈ ಮಾರ್ಗದಲ್ಲಿ ಸಂಚರಿಸುವವರು ಅಪಾಯ ಎದುರಿಸುವಂತಾಗಿದೆ.

ಕೆಲವು ತಿಂಗಳ ಹಿಂದೆ ಮಣ್ಕುಳಿ ಭಾಗದ ನಿವಾಸಿಗಳ ಬಾವಿಗೆ ಒಳಚರಂಡಿ ನೀರು ಸೇರುತ್ತಿರುವ ಕುರಿತು ದೂರುಗಳು ಬಂದ ಹಿನ್ನೆಲೆಯಲ್ಲಿ ಸಮಸ್ಯೆಯ ಪರಿಶೀಲನೆಗಾಗಿ ಹೆದ್ದಾರಿ ಬದಿಯ ಒಳಚರಂಡಿಯನ್ನು ತೆರೆಯಲಾಗಿತ್ತು. ನೀರು ಸರಾಗವಾಗಿ ಹರಿಯುವಂತೆ ಪರಿಶೀಲನೆ ನಡೆಸಿದ ಬಳಿಕ ಗುಂಡಿಯನ್ನು ಮುಚ್ಚಬೇಕಾಗಿದ್ದರೂ, ತಿಂಗಳುಗಳು ಕಳೆದರೂ ಕಾಮಗಾರಿ ಪೂರ್ಣಗೊಳ್ಳದೆ ತೆರೆದ ಸ್ಥಿತಿಯಲ್ಲೇ ಉಳಿದಿದೆ.

ಹೆದ್ದಾರಿ ಪಕ್ಕದಲ್ಲಿರುವುದರಿಂದ ವಾಹನಗಳು ಗುಂಡಿಯನ್ನು ತಪ್ಪಿಸಿ ಸಂಚರಿಸುವ ಸಂದರ್ಭದಲ್ಲಿ ರಸ್ತೆ ಬದಿಗೆ ಸರಿಯಬೇಕಾಗುತ್ತಿದೆ. ವಿಶೇಷವಾಗಿ ರಾತ್ರಿ ವೇಳೆ ಗುಂಡಿ ಸ್ಪಷ್ಟವಾಗಿ ಕಾಣಿಸದ ಕಾರಣ ದ್ವಿಚಕ್ರ ವಾಹನ ಸವಾರರು ಅಪಾಯಕ್ಕೆ ಸಿಲುಕುವ ಪರಿಸ್ಥಿತಿ ನಿರ್ಮಾಣವಾಗಿದೆ. ಈಗಾಗಲೇ ಕೆಲವರು ಬೈಕ್ ಸಮೇತ ಕೆಳಗೆ ಬಿದ್ದಿರುವ ಘಟನೆಗಳೂ ನಡೆದಿವೆ ಎಂದು ಸ್ಥಳೀಯರು ತಿಳಿಸಿದ್ದಾರೆ.

ಗುಂಡಿಯ ಸುತ್ತ ಬ್ಯಾರಿಕೇಡ್ ಅಳವಡಿಸಲಾಗಿದ್ದರೂ ಸಮಸ್ಯೆ ಸಂಪೂರ್ಣವಾಗಿ ಬಗೆಹರಿದಿಲ್ಲ. ರಾಷ್ಟ್ರೀಯ ಹೆದ್ದಾರಿಯಂತಹ ನಿರಂತರ ವಾಹನ ಸಂಚಾರವಿರುವ ಪ್ರದೇಶದಲ್ಲಿ ಇಂತಹ ತೆರೆದ ಗುಂಡಿ ಮುಂದಿನ ದಿನಗಳಲ್ಲಿ ದೊಡ್ಡ ಅನಾಹುತಕ್ಕೆ ಕಾರಣವಾಗುವ ಸಾಧ್ಯತೆ ಇರುವುದರಿಂದ, ನಗರಸಭೆ ಅಧಿಕಾರಿಗಳು ತಕ್ಷಣ ಸ್ಥಳಕ್ಕೆ ಭೇಟಿ ನೀಡಿ ಸಮಸ್ಯೆಯನ್ನು ಪರಿಶೀಲಿಸಿ ಗುಂಡಿಯನ್ನು ಶಾಶ್ವತವಾಗಿ ಮುಚ್ಚಬೇಕು ಎಂಬ ಆಗ್ರಹ ಕೇಳಿಬಂದಿದೆ.

ಸ್ಥಳೀಯ ನಿವಾಸಿ ರಾಜೇಶ ದುರ್ಗಾ ನಾಯ್ಕ ಮಾತನಾಡಿ, ತಾವು ಪ್ರತಿದಿನ ಈ ಮಾರ್ಗದಲ್ಲಿ ಸಂಚರಿಸುತ್ತಿದ್ದು, ಗುಂಡಿಯಿಂದಾಗಿ ದ್ವಿಚಕ್ರ ವಾಹನ ಸವಾರರು ತೊಂದರೆ ಅನುಭವಿಸುತ್ತಿದ್ದಾರೆ. ವಾಹನಗಳು ಗುಂಡಿಯನ್ನು ತಪ್ಪಿಸಲು ಪಕ್ಕಕ್ಕೆ ಸರಿಯುವಾಗ ಸಂಚಾರಕ್ಕೂ ಅಡಚಣೆಯಾಗುತ್ತಿದೆ. ಸಾರ್ವಜನಿಕರ ಸುರಕ್ಷತೆಯ ದೃಷ್ಟಿಯಿಂದ ಅಧಿಕಾರಿಗಳು ವಿಳಂಬ ಮಾಡದೆ ಗುಂಡಿಯನ್ನು ಮುಚ್ಚಿ ಸುಗಮ ಸಂಚಾರಕ್ಕೆ ಅವಕಾಶ ಮಾಡಿಕೊಡಬೇಕು ಎಂದು ಒತ್ತಾಯಿಸಿದ್ದಾರೆ.

ಸಮಸ್ಯೆ ಗಮನಕ್ಕೆ ಬಂದಿದ್ದರೂ ತಿಂಗಳುಗಳ ಕಾಲ ಪರಿಹಾರವಾಗದೆ ಉಳಿದಿರುವುದು ಸ್ಥಳೀಯರ ಅಸಮಾಧಾನಕ್ಕೆ ಕಾರಣವಾಗಿದೆ. ಯಾವುದೇ ಅಪಘಾತ ಸಂಭವಿಸುವ ಮುನ್ನ ನಗರಸಭೆ ಅಧಿಕಾರಿಗಳು ತುರ್ತು ಕ್ರಮ ಕೈಗೊಂಡು ತೆರೆದಿರುವ ಒಳಚರಂಡಿ ಗುಂಡಿಯನ್ನು ಮುಚ್ಚಿಸುವ ಅಗತ್ಯವಿದೆ.


ಪ್ರಚಾರ W26
ಜಾಹೀರಾತು ಸ್ಥಳ ಲಭ್ಯವಿದೆ
300x250