ಕಾರವಾರ: ಗಡಿ ನಾಡಿನ ಕಲೆ, ಸಂಸ್ಕೃತಿ ಹಾಗೂ ಸ್ಥಳೀಯ ಜಾನಪದ ಪರಂಪರೆಯನ್ನು ಉಳಿಸಿ ಬೆಳೆಸುವ ಉದ್ದೇಶದಿಂದ ಕಾರವಾರದಲ್ಲಿ ‘ಗಡಿನಾಡ ಕರಾವಳಿ ಉತ್ಸವ’ ಆಯೋಜಿಸಲಾಗುತ್ತಿದೆ ಎಂದು ಕರ್ನಾಟಕ ರಕ್ಷಣಾ ವೇದಿಕೆ (ಪ್ರವೀಣ ಶೆಟ್ಟಿ ಬಣ) ಜಿಲ್ಲಾ ಘಟಕದ ಅಧ್ಯಕ್ಷ ಅಕ್ಷಯ್ ನಾಗೇಕರ್ ತಿಳಿಸಿದರು.
ನಗರದ ಪತ್ರಿಕಾ ಭವನದಲ್ಲಿ ಸೋಮವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಡಿಸೆಂಬರ್ 15ರಿಂದ 31ರವರೆಗೆ ನಗರದ ಮಯೂರವರ್ಮ ವೇದಿಕೆಯಲ್ಲಿ ಉತ್ಸವ ನಡೆಯಲಿದೆ. ಆರಂಭದ ಒಂದು ವಾರ ವೇದಿಕೆ ಕಾರ್ಯಕ್ರಮಗಳಿಗೆ ಮೀಸಲಾಗಿದ್ದು, ನಾಡಿನ ಖ್ಯಾತ ಗಾಯಕರು ಹಾಗೂ ಕಲಾವಿದರು ಸಂಗೀತ ರಸದೌತಣ ನೀಡಲಿದ್ದಾರೆ ಎಂದರು.
ಗಾಯಕ ಹಾಗೂ ಸಂಗೀತ ನಿರ್ದೇಶಕ ಗುರುಕಿರಣ್, ಗಾಯಕಿ ಐಶ್ವರ್ಯ ರಂಗರಾಜನ್, ‘ಜೇನ ಧನಿಯೋಳೆ, ಮೀನ ಕಣ್ಣೊಳೆ..’ ಹಾಡಿನ ಗಾಯಕ ಜಸ್ಕರಣ್ ಸಿಂಗ್ ಸೇರಿದಂತೆ ಹಲವು ಖ್ಯಾತ ಗಾಯಕ–ಗಾಯಕಿಯರು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ಕನ್ನಡದ ಹಾಡುಗಳಿಗೆ ಹೆಚ್ಚಿನ ಆದ್ಯತೆ ನೀಡುವಂತೆ ಕಲಾವಿದರಲ್ಲಿ ಮನವಿ ಮಾಡಲಾಗಿದೆ ಎಂದು ನಾಗೇಕರ್ ಹೇಳಿದರು.
ಸುಮಾರು ₹70 ಲಕ್ಷ ವೆಚ್ಚದಲ್ಲಿ ಉತ್ಸವ ಆಯೋಜಿಸಲಾಗುತ್ತಿದ್ದು, ಕೇವಲ ಸಂಗೀತ ಕಾರ್ಯಕ್ರಮಕ್ಕೆ ಸೀಮಿತವಾಗದೆ ಕರಾವಳಿಯ ಕಲೆ, ಸಂಸ್ಕೃತಿ ಹಾಗೂ ಜನಪದ ವೈಭವವನ್ನು ಪರಿಚಯಿಸುವ ಪ್ರಯತ್ನ ಮಾಡಲಾಗುತ್ತಿದೆ. ಸ್ಥಳೀಯ ಜಾನಪದ ಕಲಾವಿದರಿಗೆ ತಮ್ಮ ಪ್ರತಿಭೆ ಪ್ರದರ್ಶಿಸಲು ಉತ್ಸವದಲ್ಲಿ ಅವಕಾಶ ಕಲ್ಪಿಸಲಾಗುವುದು ಎಂದು ಅವರು ತಿಳಿಸಿದರು.
ಉತ್ಸವದ ಅಂಗವಾಗಿ ಅಮ್ಯೂಸ್ಮೆಂಟ್ ಪಾರ್ಕ್ ಹಾಗೂ ವಿವಿಧ ಆಹಾರ ಮಳಿಗೆಗಳಿಗೂ ಅವಕಾಶ ನೀಡಲಾಗಿದ್ದು, ಒಟ್ಟು 15 ದಿನಗಳ ಕಾರ್ಯಕ್ರಮಕ್ಕೆ ಪ್ರವಾಸೋದ್ಯಮ ಇಲಾಖೆಯಿಂದ ಅನುಮತಿ ಪಡೆಯಲಾಗಿದೆ. ಹೀಗಾಗಿ ಉತ್ಸವವು ಕಾರವಾರದ ಜನರಿಗೆ ಮನರಂಜನೆಯ ಜೊತೆಗೆ ಸ್ಥಳೀಯ ಪ್ರವಾಸೋದ್ಯಮಕ್ಕೆ ಮತ್ತಷ್ಟು ಚೈತನ್ಯ ನೀಡುವ ನಿರೀಕ್ಷೆಯಿದೆ.
ಉದ್ಘಾಟನಾ ಕಾರ್ಯಕ್ರಮಕ್ಕೆ ಉಪಮುಖ್ಯಮಂತ್ರಿ ಜಿ. ಪರಮೇಶ್ವರ ಅವರನ್ನು ಆಹ್ವಾನಿಸುವ ಚಿಂತನೆ ಇದ್ದು, ಕರ್ನಾಟಕ ರಕ್ಷಣಾ ವೇದಿಕೆಯ ರಾಜ್ಯಾಧ್ಯಕ್ಷರು ಸೇರಿದಂತೆ ವಿವಿಧ ಜಿಲ್ಲೆಗಳ ಜಿಲ್ಲಾಧ್ಯಕ್ಷರು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ ಎಂದು ನಾಗೇಕರ್ ಮಾಹಿತಿ ನೀಡಿದರು.
ಪತ್ರಿಕಾಗೋಷ್ಠಿಯಲ್ಲಿ ಕೃಷ್ಣ ಬಂಟ, ಸಂತೋಷ ನಾಯ್ಕ, ಚೇತನ ಕೋಚರೇಕರ್, ಹಸನ್, ಅಜೀಂ ಶೇಖ್ ಹಾಗೂ ಬ್ರಿಜೆಟ್ ನಾಯ್ಕ ಉಪಸ್ಥಿತರಿದ್ದರು.
ಇದೇ ವೇಳೆ ಚಿತ್ತಾಕುಲದಲ್ಲಿ ಅಕ್ರಮವಾಗಿ ನಿರ್ಮಾಣವಾಗಿರುವ ಅಪಾರ್ಟ್ಮೆಂಟ್ಗಳ ವಿಚಾರವಾಗಿ ಮಾತನಾಡಿದ ಅಕ್ಷಯ್ ನಾಗೇಕರ್, ಈ ಕುರಿತು ಆಡಳಿತದ ಗಮನ ಸೆಳೆದ ಬಳಿಕ ಸಂಬಂಧಪಟ್ಟ ಇಲಾಖೆಗಳು ಪರಿಶೀಲನೆ ನಡೆಸಿವೆ. ಪರಿಶೀಲನೆಯ ವೇಳೆ ನಿರ್ಮಾಣ ಕಾಮಗಾರಿಯಲ್ಲಿ ಅಕ್ರಮ ನಡೆದಿರುವುದು ಕಂಡುಬಂದಿದ್ದು, ಸಂಬಂಧಪಟ್ಟವರಿಗೆ ಇಲಾಖೆಯಿಂದ ನೋಟಿಸ್ ನೀಡಲಾಗಿದೆ. ಈ ವಿಚಾರದಲ್ಲಿ ಯಾವುದೇ ಕಾರಣಕ್ಕೂ ಹಿಂದೆ ಸರಿಯುವ ಪ್ರಶ್ನೆಯಿಲ್ಲ ಎಂದು ಅವರು ಸ್ಪಷ್ಟಪಡಿಸಿದರು.
